ಹೈದರಾಬಾದ್ : ಹೈದರಾಬಾದ್ ನ ಏಳು ವರ್ಷದ ಪೋರನೊಬ್ಬ ಆಫ್ರಿಕಾದ ಅತಿ ಎತ್ತರದ ಶಿಖರವನ್ನು ಏರುವ ಮೂಲಕ ಗಮನ ಸೆಳೆದಿದ್ದಾನೆ.
ವಿರಾಟ್ ಚಂದ್ರ ಮಾರ್ಚ್ 6 ರಂದು ಕಿಲಿಮಂಜೋರ್ ಒಮ್ ಎಂಬ ಎತ್ತರದ ಶಿಖರದ ತುದಿಗೆ ಏರಿದ್ದಾನೆ. ತಮ್ಮ ಚಿಕ್ಕಪ್ಪನ ಟ್ರೆಕ್ಕಿಂಗ್ ಅನುಭವದಿಂದ ಸ್ಪೂರ್ತಿ ಪಡೆದಿದ್ದ, ಪೋರ ಶಿಖರ ತುದಿಯನ್ನು ತಲುಪಿದ್ದಾನೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ವಿರಾಟ್ ಚಂದ್ರ, ಟ್ರೆಕ್ಕಿಂಗ್ ಬಗ್ಗೆ ಚಿಕ್ಕಪ್ಪನ ಬಳಿ ಕೇಳುತ್ತಿದ್ದೆ. ನಾನು ಏಕೆ ಒಮ್ಮೆ ಈ ರೀತಿಯ ಶಿಖರವನ್ನು ಏರಬಾರದು ಎನಿಸಿತು. ಈ ಬಗ್ಗೆ ನನ್ನ ಪೋಷಕರಲ್ಲಿಯೂ ಮಾತನಾಡಿದೆ, ಅವರು ಭರತ್ ಎಂಬ ಕೋಚ್ ಅನ್ನು ನೇಮಿಸಿದರು ಎಂದು ಹೇಳಿದ್ದಾನೆ.
ವಿರಾಟ್ ತಾಯಿ ಕೂಡ ಮಗನ ಬಗ್ಗೆ ಮಾತನಾಡಿದ್ದು, ಒಮ್ಮೆ ಅವರ ಚಿಕ್ಕಪ್ಪ ಉತ್ತರಖಂಡದ ರುದುಗೈರಾ ಬೆಟ್ಟವನ್ನು ಏರಿದ್ದರು. ಈ ವೇಳೆ ವಿಡಿಯೋ ಕಾಲ್ ಮೂಲಕ ವಿರಾಟ್ ಜೊತೆ ಮಾತನಾಡಿದ್ದರು. ಅಂದು ಆಕರ್ಷಿತನಾದ ವಿರಾಟ್, ನಾನೂ ಕೂಡ ಹೀಗೆ ಬೆಟ್ಟದ ತುದಿಗೆ ಹೋಗಬೇಕೆಂದು ಹೇಳಿರುವುದಾಗಿ ತಾಯಿ ತಿಳಿಸಿದ್ದಾರೆ.
ನನಗೆ ಮೊದಲು ಭಯ ಆಯಿತು. ನಂತರ ನನ್ನ ಗುರಿಯನ್ನು ತಲುಪಿದೆ ಎಂದು, ಶಿಖರವನ್ನು ಏರಿ ಬಂದ ಮೇಲೆ ವಿರಾಟ್ ಹೇಳಿದ್ದಾನೆ. ಇದಕ್ಕೂ ಮುನ್ನ ಮಾರ್ಚ್ ನಲ್ಲಿ ಆಂಧ್ರ ಪ್ರದೇಶದ 9 ವರ್ಷದ ಬಾಲಕಿ ಕಡಪಾಲ ರಿಥ್ವಿಕಾ ಶ್ರೀ, ಆಫ್ರಿಕಾದ ಕಿಲಿಮಂಜೋರ್ ಪರ್ವತವನ್ನು ಏರಿದ ಏಷ್ಯಾದ ಅತ್ಯಂತ ಕಿರಿಯ ಹುಡುಗಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಳು.
ಇದಕ್ಕೂ ಮುನ್ನ 2018, ಅಕ್ಟೋಬರ್ ನಲ್ಲಿ ಯುಎಸ್ ನ ನ್ಯೂ ಮೆಕ್ಸಿಕೋದ ಅಲ್ಬುಕರ್ಕ್ ಮೂಲದ ಆರು ವರ್ಷದ ಹುಡುಗ ಕೋಲ್ಟನ್ ಟ್ಯಾನರ್ ಕಿಲಿಮಂಜಾರೊ ಏರಿದ ಅತ್ಯಂತ ಕಿರಿಯನಾಗಿದ್ದ. ಇದೇ ಸಾಲಿಗೆ ವಿರಾಟ್ ನಿಂತಿದ್ದಾನೆ.