Advertisement

ಆ್ಯಸಿಡ್‌ ಹಾಕಿ ಪ್ರಿಯಕರನನ್ನೇ ಪತಿ ಮಾಡಿದಳಾ ಚಾಲಾಕಿ ಪತ್ನಿ !

06:00 AM Dec 12, 2017 | Harsha Rao |

ಹೈದರಾಬಾದ್‌: ಇಲ್ಲಿ ನಡೆದ ಅಪರಾಧ ಕೃತ್ಯವೊಂದಕ್ಕೆ ರೋಚಕ ಟ್ವಿಸ್ಟ್‌ಗಳಿರುವ ಟಾಲಿವುಡ್‌ ಸಿನೆಮಾವಾಗಲಿ, ಹೈವೋಲ್ಟೆàಜ್‌ ಟಿವಿ ಸೀರಿಯಲ್‌ ಆಗಲಿ ಸರಿಸಾಟಿ ಆಗಲಿಕ್ಕಿಲ್ಲ. ಪತಿಯನ್ನು ಪತ್ನಿಯೇ ಕೊಲೆಗೈದು, ಪ್ರಿಯಕರನ ಮುಖಕ್ಕೆ ಆ್ಯಸಿಡ್‌ ಎರಚಿ, ಅವನನ್ನೇ ತನ್ನ ಪತಿಯೆಂದು ಹೇಳಿ ಅತ್ತೆ-ಮಾವನಿಗೆ ವಂಚಿಸಿ, ಈಗ ಕಂಬಿ ಎಣಿಸುತ್ತಿರುವ ಚಾಲಾಕಿಯ ಕಥೆಯಿದು.

Advertisement

ಸಿನೆಮಾಗಳನ್ನೂ ಮೀರಿಸುವಂಥ ಈ ಅಪರಾಧ ಕೃತ್ಯ ನಡೆದಿರುವುದು ಹೈದರಾಬಾದ್‌ನಲ್ಲಿ. ಪತಿಯನ್ನು ಕೊಂದ ತೆಲಂಗಾಣದ ಮಹಿಳೆ ಈಗ ಪೊಲೀಸರ ಅತಿಥಿಯಾಗಿದ್ದಾಳೆ. 

ಪ್ರಿಯಕರನ ಜತೆ ಸೇರಿ ಪತಿಯ ಕೊಂದಳು: ಕೆಲವು ವರ್ಷಗಳ ಹಿಂದೆ ಸುಧಾಕರ ರೆಡ್ಡಿ ಜತೆ ಸ್ವಾತಿ ಮದುವೆ ನಡೆದಿತ್ತು. ಬಳಿಕ ರಾಜೇಶ್‌ ಎಂಬಾತನ ಜತೆ ಆಕೆಗೆ ಪ್ರೇಮ ಅಂಕುರಿಸಿತ್ತು. ಹೀಗಾಗಿ, ರಾಜೇಶ್‌ ಜತೆ ಸೇರಿ ಪತಿಯ ಕೊಲೆ ಮಾಡಲು ಸ್ವಾತಿ ಸಂಚು ರೂಪಿಸಿದಳು. ನ. 26ರಂದು ನಾಗರಕರ್ನೂಲ್‌ ಜಿಲ್ಲೆಯಲ್ಲಿರುವ ತನ್ನ ಮನೆಯಲ್ಲಿ ಪತಿ ಸುಧಾಕರ್‌ ಮಲಗಿದ್ದಾಗ, ಆತನ ತಲೆಗೆ ಹೊಡೆದು ಕೊಂದು ಹಾಕಿದ್ದಳು. ಬಳಿಕ ಸ್ವಾತಿ ಮತ್ತು ರಾಜೇಶ್‌ ಇಬ್ಬರೂ ಸೇರಿ ಮೃತದೇಹವನ್ನು ಸಮೀಪದ ಮೈಸಮ್ಮಾ ಅರಣ್ಯಪ್ರದೇಶದಲ್ಲಿ ಎಸೆದು ಬಂದಿದ್ದರು.

ಪ್ರಿಯಕರನಿಗೆ ಆ್ಯಸಿಡ್‌: 2 ದಿನಗಳ ಅನಂತರ ಪ್ರಿಯಕರ ರಾಜೇಶ್‌ನ ಮುಖಕ್ಕೆ ಸ್ವಾತಿ ಆ್ಯಸಿಡ್‌ ಎರಚಿದಳು. ರಾಜೇಶ್‌ ಮುಖ ಸುಟ್ಟುಹೋಯಿತು. ಸುಧಾಕರನ ಸ್ಥಾನವನ್ನು ತುಂಬಲೆಂದೇ ಇಬ್ಬರೂ ಸೇರಿಯೇ ಈ ಖತರ್ನಾಕ್‌ ಪ್ಲಾ ನ್‌ ರೂಪಿಸಿದ್ದರು. ಅದರಂತೆ, ಸುಟ್ಟ ಗಾಯಗಳಾದ ರಾಜೇಶ್‌ನನ್ನು ಮನೆಗೆ ಕರೆದೊಯ್ದ ಸ್ವಾತಿ, “ಪತಿಯ ಮುಖಕ್ಕೆ ಯಾರೋ ದುಷ್ಕರ್ಮಿಗಳು ಆ್ಯಸಿಡ್‌ ಎರಚಿದ್ದಾರೆ’ ಎಂದು ಅತ್ತೆ-ಮಾವನಿಗೆ ಹೇಳಿದ್ದಳು. ಸೊಸೆಯ ಮಾತನ್ನು ಅವರೂ ನಂಬಿದರು.

ಪ್ಲಾಸ್ಟಿಕ್‌ ಸರ್ಜರಿಗೆ 5 ಲಕ್ಷ: ಅಪ್ಪ-ಅಮ್ಮ, ರಾಜೇಶ್‌ನನ್ನು ಸುಧಾಕರನೆಂದೇ ನಂಬಿ ಹೈದರಾಬಾದ್‌ನ ಖಾಸಗಿ ಆಸ್ಪತ್ರೆಗೆ ದಾಖಲಿಸಿದರು. ಅಷ್ಟೇ ಅಲ್ಲ, ಅವನ ಪ್ಲಾಸ್ಟಿಕ್‌ ಸರ್ಜರಿಗಾಗಿ ಬರೋಬ್ಬರಿ 5 ಲಕ್ಷ ರೂ.ಗಳನ್ನೂ ವ್ಯಯಿಸಿದ್ದರು. ಪ್ಲಾಸ್ಟಿಕ್‌ ಸರ್ಜರಿ ಮುಗಿದರೆ, ಮತ್ತೆ ನಮ್ಮ ಮೇಲೆ ಯಾರೂ ಅನುಮಾನ ಪಡುವುದಿಲ್ಲ ಎಂದೇ ಭಾವಿಸಿದ್ದರು ಸ್ವಾತಿ ಮತ್ತು ರಾಜೇಶ್‌. ಆದರೆ, ಆಗಿದ್ದೇ ಬೇರೆ.

Advertisement

ಅಮ್ಮನಿಗೆ ಬಂತು ಡೌಟು: ಪ್ಲಾಸ್ಟಿಕ್‌ ಸರ್ಜರಿ ಯಾದ್ರೂ ಮಗ ಯಾರೆಂದು ಹೆತ್ತಮ್ಮನಿಗೆ ಗೊತ್ತಾ ಗದೇ? ಆಸ್ಪತ್ರೆಯಲ್ಲಿದ್ದ “ಮಗ’ನ ಮಾತು, ವರ್ತನೆ ಬಗ್ಗೆ ಅಮ್ಮನಿಗೆ ಅನುಮಾನ ಮೂಡ ತೊಡಗಿತು. ಕುಟುಂಬದ ತೀರಾ ಹತ್ತಿರದ ವಿಚಾರಗಳ ಬಗ್ಗೆ ಹೇಳಿದರೂ ಅವನಿಗೆ ಉತ್ತರಿಸಲು ಆಗುತ್ತಿರಲಿಲ್ಲ, ಪ್ರಶ್ನೆ ಕೇಳಿದರೆ ಮೆಲ್ಲಗೆ ಹಾರಿಕೆಯ ಉತ್ತರ ನೀಡುತ್ತಿದ್ದ. ಇದನ್ನೆಲ್ಲ ನೋಡಿದ ಹೆತ್ತಮ್ಮನಿಗೆ, “ಇಲ್ಲೇನೋ ನಡೆಯುತ್ತಿದೆ’ ಎಂಬ ಅನುಮಾನ ಬಲವಾಗತೊಡಗಿತು. ಕೊನೆಗೆ ಸುಧಾಕರನ ಅಪ್ಪ- ಅಮ್ಮ ಪೊಲೀಸ್‌ ಠಾಣೆಯ ಮೆಟ್ಟಿಲು ಏರಿಯೇ ಬಿಟ್ಟರು. ಸ್ವಾತಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, ಸಂಪೂರ್ಣ ಸಂಚಿನ ಮಾಹಿತಿ ಹೊರಬಿತ್ತು. ಇನ್ನೊಂದೆಡೆ, ಅರಣ್ಯದಲ್ಲಿ ಸುಧಾಕರ ರೆಡ್ಡಿಯ ಮೃತದೇಹವೂ ಪತ್ತೆಯಾಯಿತು. ರಾಜೇಶ್‌ ಸುಟ್ಟ ಗಾಯಕ್ಕೆ ಚಿಕಿತ್ಸೆ ಪಡೆಯುತ್ತಿದ್ದು, ಆತನ ಬಂಧನಕ್ಕಾಗಿ ಪೊಲೀಸರು ಕಾಯುತ್ತಿದ್ದಾರೆ.

ಆಧಾರ್‌ನಿಂದ ಸತ್ಯ ಬಯಲು
ಹತ್ಯೆಯಾದ ಪತಿಯ ತಂದೆ- ತಾಯಿ ಅನುಮಾನದ ಮೇಲೆ ತನಿಖೆ ಆರಂಭಿಸಿದ್ದ  ಪೊಲೀಸರಿಗೆ “ಇವನು ಅವನಲ್ಲ’ವೆಂದು ಹೇಗೆ ಸಾಬೀತು ಮಾಡುವುದು ಎಂಬ ಬಗ್ಗೆ ತಲೆಬಿಸಿಯಾಗಿತ್ತು. ಆದರೆ ಆಧಾರ್‌ನ ಬಯೋಮೆಟ್ರಿಕ್‌ ದಾಖಲೆ ತೆಗೆದು ಪರಿಶೀಲನೆ ನಡೆಸಿದಾಗ ಬೆರಳಚ್ಚು ಹೋಲಿಕೆಯಾಗಿಲ್ಲ. ಆಗ ಸಿಕ್ಕಿಬಿದ್ದಿದ್ದಾನೆ.

Advertisement

Udayavani is now on Telegram. Click here to join our channel and stay updated with the latest news.

Next