ಹೈದರಾಬಾದ್: ಇಲ್ಲಿನ ರಂಗಾರೆಡ್ಡಿ ಜಿಲ್ಲೆಯ ಚಡಣಪಳ್ಳಿ ಗ್ರಾಮದಲ್ಲಿ ನಿರ್ಮಾಣ ಹಂತದಲ್ಲಿರುವ ಸೇತುವೆಯ ತಳಭಾಗದಲ್ಲಿ ಸುಟ್ಟ ಸ್ಥಿತಿಯಲ್ಲಿ ಪತ್ತೆಯಾದ ಪಶುವೈದ್ಯೆ ಪ್ರಿಯಾಂಕ ರೆಡ್ಡಿ ಅವರ ಅಮಾನುಷ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ತೆಲಂಗಾಣದ ಗೃಹ ಸಚಿವ ಮುಹಮ್ಮದ್ ಮಹಮೂದ್ ಅಲಿ ಅವರು ನೀಡಿರುವ ಹೇಳಿಕೆ ಇದೀಗ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
‘ಆ ಸಂದರ್ಭದಲ್ಲಿ ಪ್ರಿಯಾಂಕ ಅವರು ತನ್ನ ತಂಗಿಗೆ ಕರೆ ಮಾಡುವ ಬದಲು ಪೊಲೀಸರಿಗೆ ಕರೆ ಮಾಡಿದ್ದರೆ ಆಕೆ ಬದುಕುವ ಸಾಧ್ಯತೆಗಳಿದ್ದವು’ ಎಂಬ ಮಹಮೂದ್ ಅಲಿ ಅವರ ಹೇಳಿಕೆಗೆ ಹಲವರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಈ ಘಟನೆಗೆ ಸಂಬಂಧಿಸಿದಂತೆ ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸುವ ಸಂದರ್ಭದಲ್ಲಿ ಮಹಮೂದ್ ಅಲಿ ಅವರು ಈ ರೀತಿಯಾಗಿ ಹೇಳಿದರು.
‘ಆಕೆ ಸುಶಿಕ್ಷಿತೆಯಾಗಿದ್ದು ಈ ರೀತಿ ಮಾಡಿರುವುದು ಸರಿಯಲ್ಲ, ಆಕೆ ಅಂತಹ ಸಂದರ್ಭದಲ್ಲಿ 100ಕ್ಕೆ ಕರೆ ಮಾಡುವ ಬದಲು ತನ್ನ ತಂಗಿಗೆ ಕರೆ ಮಾಡಿದ್ದು ದುರದೃಷ್ಟಕರ’ ಎಂದು ಸಚಿವರು ಪ್ರತಿಕ್ರಿಯಿಸಿದ್ದಾರೆ.
ಇಂತಹ ಪೈಶಾಚಿಕ ಕೃತ್ಯ ನಡೆದಿರುವ ಸಂದರ್ಭದಲ್ಲಿ ಸಚಿವರು ನೀಡಿರುವ ಈ ರೀತಿಯ ಹೇಳಿಕೆ ಬೇಜವ್ದಾರಿಯದ್ದಾಗಿದೆ ಎಂದು ಹಲವರು ಕಿಡಿ ಕಾರಿದ್ದಾರೆ. ಈ ಹೀನ ಕೃತ್ಯಕ್ಕೆ ಕಾರಣರಾದವರನ್ನು ಬಂಧಿಸಿ ಶಿಕ್ಷಿಸುವ ಬದಲು ಸಚಿವರು ಮಹಿಳೆಯದ್ದೇ ತಪ್ಪು ಎಂದು ಹೇಳುತ್ತಿರುವುದು ಅವರ ಸಂವೇದನಾರಹಿತ ಮನಸ್ಥಿತಿಯನ್ನು ತೋರಿಸುತ್ತದೆ ಎಂದು ಇನ್ನು ಕೆಲವರು ತಮ್ಮ ಪ್ರತಿಕ್ರಿಯೆಯನ್ನು ವ್ಯಕ್ತಪಡಿಸಿದ್ದಾರೆ.
ಪ್ರಿಯಾಂಕ ರೆಡ್ಡಿ ಅವರ ಸುಟ್ಟ ಸ್ಥಿತಿಯಲ್ಲಿದ್ದ ಮೃತದೇಹ ಗುರುವಾರ ಬೆಳಿಗ್ಗೆ ಪತ್ತೆಯಾಗಿತ್ತು. ಸುಟ್ಟು ಕೊಲೆ ಮಾಡುವುದಕ್ಕೂ ಮೊದಲು ಆಕೆಯ ಮೇಲೆ ಅತ್ಯಾಚಾರ ಎಸಗಿರುವ ಸಾಧ್ಯತೆಗಳಿವೆ ಎಂಬ ಅಂಶವನ್ನು ಪೊಲೀಸರು ಶಂಕಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ನಾಲ್ವರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಲಾಗುತ್ತಿದೆ.