ಹೈದರಾಬಾದ್: ಹೈದರಾಬಾದ್ ವಿಪತ್ತು ಪ್ರತಿಕ್ರಿಯೆ ಮತ್ತು ಆಸ್ತಿಗಳ ಮಾನಿಟರಿಂಗ್ ಮತ್ತು ಪ್ರೊಟೆಕ್ಷನ್ (HYDRA) ಅಧಿಕಾರಿಗಳು ಖ್ಯಾತ ನಟ ನಾಗಾರ್ಜುನ (Nagarjuna) ಒಡೆತನದ ವಿಸ್ತಾರವಾದ ಎನ್-ಕನ್ವೆನ್ಷನ್ ಸೆಂಟರನ್ನು (N-Convention Center) ಕೆಡವಲು ಪ್ರಾರಂಭಿಸಿದ್ದಾರೆ.
10 ಎಕರೆ ವಿಸ್ತೀರ್ಣದಲ್ಲಿ ನಿರ್ಮಿಸಿರುವ ಎನ್-ಕನ್ವೆನ್ಷನ್ ಸೆಂಟರ್ ಹಲವು ವರ್ಷಗಳಿಂದ ಪರಿಶೀಲನೆಯಲ್ಲಿದೆ. ನಗರದ ಮಾದಾಪುರ ಪ್ರದೇಶದಲ್ಲಿನ ತಮ್ಮಿಡಿಕುಂಟಾ ಕೆರೆಯ ಫುಲ್ ಟ್ಯಾಂಕ್ ಲೆವೆಲ್ (ಎಫ್‌ಟಿಎಲ್) ಪ್ರದೇಶ ಮತ್ತು ಬಫರ್ ಝೋನ್ ನಲ್ಲಿ ಅಕ್ರಮ ನಿರ್ಮಾಣದ ಆರೋಪದ ಹಿನ್ನೆಲೆಯಲ್ಲಿ ಇದನ್ನು ನೆಲಸಮ ಮಾಡಲಾಗಿದೆ.
ಉತ್ತರ ಟ್ಯಾಂಕ್ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ಒದಗಿಸಿದ ಅಧಿಕೃತ ದಾಖಲೆಗಳ ಪ್ರಕಾರ, ತಮ್ಮಿಡಿಕುಂಟಾ ಕೆರೆಯ ಎಫ್‌ಟಿಎಲ್ ಪ್ರದೇಶವು ಅಂದಾಜು 29.24 ಎಕರೆಯಾಗಿದೆ. ಎನ್-ಕನ್ವೆನ್ಷನ್ ಎಫ್‌ಟಿಎಲ್ ಪ್ರದೇಶದ ಸುಮಾರು 1.12 ಎಕರೆ ಮತ್ತು ಹೆಚ್ಚುವರಿ 2 ಎಕರೆಯನ್ನು ಬಫರ್ ನಲ್ಲಿ ಅತಿಕ್ರಮಿಸಿಕೊಂಡಿದೆ ಎಂದು ಆರೋಪಿಸಲಾಗಿದೆ.
ಹಲವು ಸಮಯದಿಂದ ಎನ್-ಕನ್ವೆನ್ಷನ್‌ನ ಮ್ಯಾನೇಜ್ ಮೆಂಟ್ ಗ್ರೇಟರ್ ಹೈದರಾಬಾದ್ ಮುನ್ಸಿಪಲ್ ಕಾರ್ಪೊರೇಶನ್ (GHMC) ಮತ್ತು ಇತರ ಉನ್ನತ ಅಧಿಕಾರಿಗಳಿಂದ ನಿಯಂತ್ರಣ ಕ್ರಮಗಳನ್ನು ಬೈಪಾಸ್ ಮಾಡಲು ತಮ್ಮ ಪ್ರಭಾವವನ್ನು ಬಳಸಿಕೊಂಡಿದೆ ಎಂಬ ಆರೋಪವಿದೆ.