Advertisement
ಈಗ ಮತ್ತೆ “ಗ್ರೇಟರ್ ಹೈದರಾಬಾದ್ ಪಾಲಿಕೆ’ ಕಣ ಚುನಾವಣೆಗೆ ಸಜ್ಜಾಗಿದೆ. “ಮುತ್ತಿನ ನಗರಿ’ ಯನ್ನು ಮುತ್ತಿಕ್ಕಿದ್ದ ಹಳೇ ಸಮಸ್ಯೆಗಳಾÂವುವೂ ಅಳಿದಿಲ್ಲ. “ಹಳೇ ಬ್ಯಾಟ್‌ನಿಂದ ರನ್‌ಗಳು ಹೊಮ್ಮದೇ ಇದ್ದಾಗ, ಅದನ್ನು ಬದಲಿಸಿ ಹೊಸ ಬ್ಯಾಟ್‌ನಿಂದ ಫೋರು- ಸಿಕ್ಸರ್ ಹೊಳೆ ಹರಿಸುವ ದಾಂಡಿಗನಂತೆ’ ನಿಜಾಮ ನಗರಿ ಪಾಲಿಕೆ ಇದ್ದಕ್ಕಿದ್ದಂತೆ ರೋಚಕತೆಗೆ ಹೊರಳಿದೆ. ಯಾವುದೇ ಸಂಸತ್ ಚುನಾವಣೆಗಿಂತ ಒಂದು “ಹರ್ಟ್ಝ್’ ಕೂಡ ಕಡಿಮೆ ಇಲ್ಲದಂತೆ ಭರ್ಜರಿ ಸದ್ದುಗೈದಿದೆ.
Related Articles
Advertisement
ಕರ್ನಾಟಕ ಬಿಟ್ಟರೆ ದಕ್ಷಿಣ ಭಾರತದಲ್ಲಿ ತನಗೆ ಭದ್ರ ನೆಲೆ ಕಲ್ಪಿಸಬಲ್ಲ ರಾಜ್ಯ ತೆಲಂಗಾಣ ಎನ್ನುವುದು ಬಿಜೆಪಿಗೆ ಮನದಟ್ಟಾಗಿದೆ. 2018ರ ವಿಧಾನಸಭಾ ಚುನಾವಣೆಯಲ್ಲಿ 1 ಸ್ಥಾನಕ್ಕೆ ಸೀಮಿತವಾಗಿದ್ದ ಬಿಜೆಪಿ, 2019ರ ಸಂಸತ್ ಚುನಾವಣೆಯಲ್ಲಿ 4ರಲ್ಲಿ ಗೆದ್ದು, ಶೇ.19 ಅಚ್ಚರಿಯ ಮತ ಗಳಿಕೆ ಕಂಡಿದ್ದು, ಮೋದಿ ಟೀಂನ ವಿಶ್ವಾಸ ಇಮ್ಮಡಿಗೊಳಿಸಿದೆ. ಕೆಸಿಆರ್ ಕುಟುಂಬದ ಕೆ. ಕವಿತಾಗೆ ಸೋಲುಣಿಸಿದ್ದು, ಇತ್ತೀಚಿಗಿನ ಉಪಚುನಾವಣೆಯಲ್ಲಿ ಭರ್ಜರಿ ಜಯ ದಾಖಲಿಸಿರುವುದು ಬಿಜೆಪಿಗೆ ಆತ್ಮವಿಶ್ವಾಸ ಹೆಚ್ಚಿಸಿದೆ. ಆಡಳಿತ ವಿರೋಧಿ ಅಲೆಯಿಂದಾಗಿ ಕೆ. ಚಂದ್ರಶೇಖರ್ ರಾವ್ ನೇತೃತ್ವದ ಟಿಆರ್‌ಎಸ್ ಪಕ್ಷದ ಹಿಂದೂ ಮತಗಳು ತನ್ನತ್ತ ವಾಲುತ್ತಿರುವುದೂ ಕಮಲಕ್ಕೆ ಸ್ಪಷ್ಟವಾಗಿದೆ.
ಇವೆಲ್ಲದರ ನಡುವೆ ಟಿಆರ್‌ಎಸ್ ತೆಕ್ಕೆಯ ಲ್ಲಿರುವ ಅಸಾದುದ್ದೀನ್ ಒವೈಸಿ ಮುಂದಾಳತ್ವದ ಎಐಎಂ ಐಎಂಗೂ ಸೋಲುಣಿಸುವ ಮಹತ್ವದ ಟಾರ್ಗೆಟ್ ಬಿಜೆಪಿಗಿದೆ. ಮುಸ್ಲಿಂ ಮತಗಳ ಭದ್ರಕೋಟೆ ಹೈದರಾಬಾದ್‌ನಲ್ಲಿ ಇದನ್ನು ಸಾಧಿಸಲು ತನ್ನ ಬತ್ತಳಿಕೆಯಲ್ಲಿರುವ ಎಲ್ಲ “ಹೈಕಮಾಂಡ್ ಅಸ್ತ್ರ’ಗಳನ್ನೂ ಬಿಜೆಪಿ ಪ್ರಯೋ ಗಿಸಿದೆ. ಬಿಹಾರದಲ್ಲಿ ಪಕ್ಷ ಸಂಘಟನೆ ಗಟ್ಟಿಗೊಳಿಸಿದ ಭೂಪೇಂದರ್ ಯಾದವ್‌ಗೆ “ಹೈ’ ಪಾಲಿಕೆ ಚುನಾವಣ ಹೊಣೆ ವಹಿಸಿದೆ. “ಒವೈಸಿಗೆ ನೀಡುವ ಪ್ರತಿ ಮತಗಳೂ ದೇಶದ ವಿರುದ್ಧ’ ಎಂದು ಗುಡುಗಿದ ಯುವನಾಯಕ ತೇಜಸ್ವಿ ಸೂರ್ಯನ ಪ್ರಖರ ಭಾಷಣ ಮೈತ್ರಿ ಆಡಳಿತದ ನಿದ್ದೆಗೆಡಿ ಸಿದ್ದಂತೂ ಸುಳ್ಳಲ್ಲ.
ಪವನ್ ಕಲ್ಯಾಣ್‌ರ ಜನಸೇನಾ ಪಕ್ಷ ಬಿಜೆಪಿ ಬೆಂಬಲಕ್ಕೆ ನಿಂತಿರುವುದು ಕಮಲ ಪಾಳಯಕ್ಕೆ ಕೊಂಚ ಬಲ ನೀಡಿದೆ. ಹಿಂದಿನ ಚುನಾವಣೆಯಂತೆ “ಭಾಗ್ಯನಗರ’ದ ಕನಸನ್ನೂ ಭಾಜಪ ಮತ್ತೆ ಬಿತ್ತಿದೆ.
ಹೈದರಾಬಾದ್ ಜನತೆ ಸೆಳೆಯಲು ಬಿಜೆಪಿ ಭರ್ಜರಿ ಚುನಾವಣಾ ಪ್ರಣಾಳಿಕೆಯನ್ನೇ ಸಿದ್ಧಪ ಡಿಸಿದೆ. ಬಿಹಾರದ ಉಚಿತ ವ್ಯಾಕ್ಸಿನ್ ಭರವಸೆಯನ್ನೂ ಇಲ್ಲೂ ಮುಂದಿಟ್ಟಿದೆ. ನಗರದ ನೆರೆಪೀಡಿತ ಸಂತ್ರಸ್ತರಿಗೆ ತಲಾ 25 ಸಾವಿರ ರೂ. ಘೋಷಿಸಿದ್ದು ಕಮಲಕ್ಕೆ “ಟರ್ನಿಂಗ್ ಪಾಯಿಂಟ್’ ನೀಡಿದರೂ ಅಚ್ಚರಿಯಿಲ್ಲ ಎನ್ನಲಾಗುತ್ತಿದೆ. ಉಳಿದಂತೆ ಬಿಜೆಪಿ, ದಿಲ್ಲಿಯ ಆಪ್ ಮಾದರಿ ಭರವಸೆಗಳನ್ನು ಎದುರಿಟ್ಟಿದೆ. ಸ್ತ್ರೀಯರಿಗೆ ಮೆಟ್ರೋದಲ್ಲಿ ಉಚಿತ ಪ್ರಯಾಣ ಅವಕಾಶ, 100 ಯೂನಿಟ್‌ಗಳವರೆಗೆ ಉಚಿತ ವಿದ್ಯುತ್, ಉಚಿತ ನೀರುಪೂರೈಕೆ- ಪ್ರಣಾಳಿಕೆಯಲ್ಲಿವೆ.
ಬೇರೆಲ್ಲ ಪಕ್ಷಗಳು ಚುನಾವಣೆಗೆ ಇನ್ನೂ ಸಿದ್ಧಗೊಳ್ಳದಿರುವ ಸಮಯ ನೋಡಿ, ಆಡಳಿತರೂಢ ಟಿಆರ್‌ಎಸ್, ಪಾಲಿಕೆ ಚುನಾವಣೆಗೆ ಅಖಾಡ ಸಿದ್ಧಗೊಳಿಸಿದ್ದರ ಹಿಂದೆ ಅಚ್ಚರಿ ಅಡಗಿದೆ. ಹಿಂದಿನ ಚುನಾವಣೆಯಲ್ಲಿ ಅತೀದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದರೂ, ಈ ಅವಧಿಯಲ್ಲಿ ಟಿಆರ್‌ಎಸ್ ಮೈತ್ರಿ ಆಡಳಿತದ ಸಾಧನೆ ಅಷ್ಟೇನೂ ತೃಪ್ತಿಕರ ತಂದಿಲ್ಲ ಎನ್ನುವ ಮಾತುಗಳೂ ನಗರದ ಜನತೆಯಲ್ಲಿ ಕೇಳಿಬಂದಿದೆ.
ಇವೆಲ್ಲದರ ನಡುವೆ ಇತ್ತೀಚೆಗೆ ಸುರಿದ ರಣಭೀಕರ ಮಳೆ, ಟಿಆರ್‌ಎಸ್‌ಗೆ ಅಧಿಕಾರ ಕೊಚ್ಚಿಹೋಗುವ ಭಯ ಹುಟ್ಟಿಹಾಕಿದೆ. ಮಹಾನಗರದ ಹಲವೆಡೆ ನಿಜಾಮರ ಕಾಲದ ಪೈಪ್‌ಲೈನ್ ವ್ಯವಸ್ಥೆ ಸರಿಪಡಿಸದೆ ಇರುವುದು ಜನರಲ್ಲಿ ಆಕ್ರೋಶಕ್ಕೆ ಎಡೆಮಾಡಿಕೊಟ್ಟಿದೆ. ಸಮರ್ಪಕ ತ್ಯಾಜ್ಯ ನಿರ್ವಹಣೆ, ಶುದ್ಧ ಕುಡಿವ ನೀರು ಪೂರೈಕೆ ವೈಫಲ್ಯ ತಡೆಯಲು ಟಿಆರ್‌ಎಸ್ ಕೈಯಲ್ಲೂ ಸಾಧ್ಯವಾಗದೆ ಇರುವುದು ಇನ್ನೊಂದು ಹಿನ್ನಡೆ. ಇವೆಲ್ಲದರ ನಡುವೆಯೂ ಟಿಆರ್‌ಎಸ್ ಪಾಲಿಕೆ ಚುನಾವಣೆಯಲ್ಲಿ 100 ಸೀಟುಗಳನ್ನು ಗೆಲ್ಲುವ ಗುರಿ ಹೊಂದಿದೆ.
ಬಿಜೆಪಿ, ಟಿಆರ್‌ಎಸ್ ವಿರುದ್ಧ ಬಳಸುತ್ತಿರುವ ಅಸ್ತ್ರವೇ “ಕುಟುಂಬ ರಾಜಕಾರಣ’. ತೆಲಂಗಾಣ ಆಡಳಿತದಲ್ಲಿ ಸಿಎಂ ಕೆ. ಚಂದ್ರಶೇಖರ ರಾವ್ ಕುಟುಂಬಸ್ಥರೇ ಆಯಕಟ್ಟಿನ ಜಾಗಗಳಲ್ಲಿ ಕುಳಿತಿದ್ದಾರೆ. ಪುತ್ರ ಕೆ.ಟಿ. ರಾಮರಾವ್ ಐಟಿ ಸಚಿವರಾಗಿದ್ದರೆ, ಅಳಿಯ ಹರೀಶ್ ರಾವ್ ಹಣಕಾಸು ಸಚಿವ! ಮಾಜಿ ಸಂಸದೆಯಾಗಿರುವ ಪುತ್ರಿ ಕೆ. ಕವಿತಾರ ಆಡಳಿತ ಹಸ್ತಕ್ಷೇಪ ಕೂಡ ಟೀಕೆಗೆ ಗುರಿಯಾಗಿದೆ.
ಮಹಾರಾಷ್ಟ್ರ, ಇತ್ತೀಚೆಗೆ ಬಿಹಾರ ಚುನಾವಣೆ ಯಲ್ಲೂ ಅಲ್ಪ ಸೀಟುಗಳ ಗೆಲುವು ದಾಖಲಿಸಿದ ಎಐಎಂಐಎಂಗೆ ಹೈದರಾಬಾದ್ ಹೋಂ ಪಿಚ್. ಟಿಆರ್‌ಎಸ್ ಜತೆಗಿನ ಮೈತ್ರಿಯಲ್ಲಿ ಒವೈಸಿ, ಶೇ.50 ಮುಸ್ಲಿಮರಿರುವ ಕ್ಷೇತ್ರಗಳನ್ನಷ್ಟೇ ಸ್ಪರ್ಧೆಗೆ ಆರಿಸಿಕೊಂಡಿದ್ದು, ಕನಿಷ್ಠ 51 ಸೀಟುಗಳನ್ನು ಗೆಲ್ಲುವ ಗುರಿ ಹೊಂದಿದ್ದಾರೆ. ಇವುಗಳಲ್ಲಿ ಬಹುಪಾಲು ಕ್ಷೇತ್ರಗಳಲ್ಲಿ ತನ್ನದೇ ಆದ ಹಿಡಿತ ಸಾಧಿಸಿಕೊಂಡಿರುವ ಒವೈಸಿಗೆ ಈ ಸಾಧನೆ ಕಷ್ಟವೇನಲ್ಲ ಎನ್ನುತ್ತಾರೆ ರಾಜಕೀಯ ವಿಶ್ಲೇಷಕರು.
ವಿವಾದಿತ ಹೇಳಿಕೆಗಳ ಮೂಲಕವೇ ರಾಷ್ಟ್ರದ ಗಮನ ಸೆಳೆಯುವ ಒವೈಸಿ, ಬಿಜೆಪಿಯ ಪ್ರತೀ ಆರೋಪಗಳಿಗೂ ಅಷ್ಟೇ ಪರಿಣಾಮಕಾರಿ ಉತ್ತರ ನೀಡಿ, ಕಮಲದ ಹೈಕಮಾಂಡ್‌ಗಳಿಗೆ ಸವಾಲೆಸೆ ದಿದ್ದಾರೆ. ಅಲ್ಲದೆ, ಮುಸ್ಲಿಂ ಪಾರಮ್ಯದ ತಮ್ಮ ಪಕ್ಷದಿಂದ 5 ಹಿಂದೂ ಅಭ್ಯರ್ಥಿಗಳನ್ನು ಕಣಕ್ಕಳಿಸಿ ಅಚ್ಚರಿ ರವಾನಿಸಿದ್ದಾರೆ.
“ವಿಪಕ್ಷವನ್ನು ಟಿಆರ್‌ಎಸ್- ಎಐಎಂಐಎಂ ಮೈತ್ರಿ ನಾಶಪಡಿಸಿವೆ’ ಎಂಬ ಆರೋಪಿಸುತ್ತಲೇ 95 ಕ್ಷೇತ್ರಗಳಲ್ಲಿ ಸ್ಪರ್ಧಿಸುತ್ತಿರುವ ಕಾಂಗ್ರೆಸ್ ಕನಿಷ್ಠ 70 ಸೀಟುಗಳನ್ನು ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದೆ. ತೆಲುಗು ದೇಶಂ ಪಾರ್ಟಿ (ಟಿಡಿಪಿ) ಜತೆಗೆ 24 ಕ್ಷೇತ್ರಗಳಲ್ಲಿ ಮೈತ್ರಿ ಮಾಡಿಕೊಂಡಿದೆ. ಆದರೆ, ಟಿಡಿಪಿ ವರ್ಚಸ್ಸು ಕಳೆದ ಬಾರಿಗೆ ಹೋಲಿಸಿದರೆ ಮತ್ತಷ್ಟು ಕುಸಿದಂತೆ ತೋರುತ್ತಿದೆ. ಬಿಜಿಪಿಯ ಪ್ರಣಾಳಿಕೆ ಹಲವು ವಿಚಾರಗಳು ಕಾಂಗ್ರೆಸ್‌ನ ಘೋಷಣೆ ಯಲ್ಲೂ ಪ್ರತಿಬಿಂಬಿಸಿವೆ.
ಒಟ್ಟಿನಲ್ಲಿ “ಯಾವ ಚುನಾವಣೆಯೂ ಕನಿಷ್ಠವಲ್ಲ’ ಎಂಬ ಸ್ಪಷ್ಟ ಸಂದೇಶ, ಜಿಎಚ್‌ಎಂಸಿ ಚುನಾವಣೆ ಯಿಂದ ದೇಶಕ್ಕೆ ಜಾಹೀರಾಗಿದೆ.
-ಕೀರ್ತಿ ಕೋಲ್ಗಾರ್