ಹೈದರಾಬಾದ್: ಎರಡನೇ ವಿವಾಹದ ಆರತಕ್ಷತೆಯ ಸಂಭ್ರಮದಲ್ಲಿದ್ದ ವೇಳೆಯಲ್ಲಿ ಮೊದಲ ಪತ್ನಿ ಪೊಲೀಸರೊಂದಿಗೆ ಆಗಮಿಸುತ್ತಿರುವುದನ್ನು ಕಂಡ ವರ ಮಹಾಶಯ ಸಮಾರಂಭದ ವೇದಿಕೆಯ ಹಿಂಭಾಗದಿಂದ ಪರಾರಿಯಾಗಿರುವ ಘಟನೆ ಹೈದರಬಾದ್ ನಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಇದನ್ನೂ ಓದಿ:ರೈತರ ಪಂಪ್ ಸೆಟ್ ಗೆ ಯಾವುದೇ ಕಾರಣಕ್ಕೂ ಮೀಟರ್ ಅಳವಡಿಕೆಯಿಲ್ಲ: ಸಚಿವ ಸುನಿಲ್ ಸ್ಪಷ್ಟನೆ
ಈ ಘಟನೆ ಹೈದರಾಬಾದ್ ನಲ್ಲಿ ಸೆಪ್ಟೆಂಬರ್ 4ರಂದು ನಡೆದಿತ್ತು. ಮೊದಲ ಪತ್ನಿಯನ್ನು ಕಂಡು ಪರಾರಿಯಾದ ವ್ಯಕ್ತಿಯನ್ನು ಸೈಯದ್ ನಝೀರ್ ಎಂದು ಗುರುತಿಸಲಾಗಿದೆ.
ಸೈಯದ್ ತನ್ನ ಎರಡನೇ ವಿವಾಹದ ಬಗ್ಗೆ ಮೊದಲ ಪತ್ನಿ ಡಾ.ಸನಾ ಸಮ್ರೀನಾ ಬಳಿ ಯಾವುದೇ ಮಾಹಿತಿಯನ್ನು ಹಂಚಿಕೊಂಡಿರಲಿಲ್ಲವಾಗಿತ್ತು. ಸುಳಿವು ನೀಡದೆ 2ನೇ ವಿವಾಹವಾಗಲು ಹೊರಟ ಪತಿರಾಯನ ಕಳ್ಳಾಟ ಕೊನೆಗೂ ಬಟಾಬಯಲಾಗಿದೆ.
ಆರತಕ್ಷತೆಯ ಸಂದರ್ಭದಲ್ಲಿ ಮೊದಲ ಪತ್ನಿ ಸಮ್ರೀನಾ ಪೊಲೀಸರ ಜತೆ ವೇದಿಕೆಯತ್ತ ಆಗಮಿಸುತ್ತಿರುವುದನ್ನು ಗಮನಿಸಿದ ನಝೀರ್, ದೊಡ್ಡ ರಾದ್ಧಾಂತ ಎದುರಿಸುವುದಕ್ಕಿಂತ ಪರಾರಿಯಾಗುವುದೇ ತನಗೆ ಉಳಿದಿರುವ ದಾರಿ ಎಂದು ಹಿಂಬಾಗಿಲಿನಿಂದ ಕಾಲ್ಕಿತ್ತಿರುವುದಾಗಿ ವರದಿ ತಿಳಿಸಿದೆ.
ಪ್ರಕರಣದ ಬಗ್ಗೆ ಡೆಕ್ಕನ್ ಕ್ರಾನಿಕಲ್ ಜೊತೆ ಮಾತನಾಡಿರುವ ಸಮ್ರೀನಾ ಸಹೋದರ, 2019ರಲ್ಲಿ ನ್ಯೂಜಿಲ್ಯಾಂಡ್ ನಿಂದ ಆಗಮಿಸಿದ್ದ ನನ್ನ ಸಹೋದರಿ ಜತೆ ನಝೀರ್ ವಿವಾಹ ನೆರವೇರಿತ್ತು. ಬಳಿಕ ಕೋವಿಡ್ ಲಾಕ್ ಡೌನ್ ನಿಂದಾಗಿ ಸಮ್ರೀನಾ ಹೈದರಾಬಾದ್ ನಲ್ಲೇ ಉಳಿದಿದ್ದು, ನಝೀರ್ ಹಾಗೂ ಅವರ ಮನೆಯವರ ಖರ್ಚು ವೆಚ್ಚ ನೋಡಿಕೊಂಡಿದ್ದರು. ಏತನ್ಮಧ್ಯೆ ನಝೀರ್ 15 ಲಕ್ಷ ರೂಪಾಯಿಗೆ ಬೇಡಿಕೆ ಇಟ್ಟಿದ್ದ. ಆದರೆ ಆ ಹಣವನ್ನು ನಾವು ಕೊಡಲಿಲ್ಲ. ಬಳಿಕ ನಝೀರ್ ನನ್ನ ತಂಗಿ ಜತೆ ವಾಸಿಸುತ್ತಿಲ್ಲ ಎಂದು ವಿವರಿಸಿದ್ದಾರೆ.