ಹೈದರಾಬಾದ್: ಇತ್ತೀಚೆಗೆ ಹೃದಯಾಘಾತ ಪ್ರಕರಣಗಳ ಬಗ್ಗೆ ವರದಿಯಾಗುತ್ತಿರುವ ನಡುವೆಯೇ ಇದೀಗ ಅದಕ್ಕೆ ಮತ್ತೊಂದು ಸೇರ್ಪಡೆ ಎಂಬಂತೆ ಜಿಮ್ ನಲ್ಲಿ ವರ್ಕ್ ಔಟ್ (ತಾಲೀಮು) ಮಾಡುತ್ತಿರುವಾಗಲೇ ಹೃದಯಾಘಾತದಿಂದ ಯುವ ಪೊಲೀಸ್ ಕಾನ್ಸ್ ಟೇಬಲ್ ವಿಧಿವಶವಾಗಿರುವ ಘಟನೆ ಹೈದರಾಬಾದ್ ನಲ್ಲಿ ನಡೆದಿದೆ ಎಂದು ವರದಿ ತಿಳಿಸಿದೆ.
ವಿಶಾಲ್ (24ವರ್ಷ) ಎಂಬ ಬೋವೆನ್ ಪಲ್ಲಿ ನಿವಾಸಿಯಾಗಿದ್ದು, ಆಸೀಫ್ ನಗರ ಪೊಲೀಸ್ ಠಾಣೆಯಲ್ಲಿ ಕಾನ್ಸ್ ಟೇಬಲ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು.
ನ್ಯಾಷನಲ್ ಸೆಂಟರ್ ಫಾರ್ ಬಯೋಟೆಕ್ನಾಲಜಿ ಇನ್ಫಾರ್ಮೇಶನ್ (ಎನ್ ಸಿಬಿಐ) ಪ್ರಕಾರ, ಭಾರತದಲ್ಲಿ ಐದನೇ ಒಂದು ಭಾಗದಷ್ಟು ಸಾವುಗಳು ಹೃದಯಾಘಾತ, ಹೃದಯಸ್ತಂಭನ ಮತ್ತು ಪಾರ್ಶ್ವವಾಯುಗಳಿಂದ ಸಂಭವಿಸುತ್ತದೆ. ಇದರಲ್ಲಿ ಯುವ ಸಮೂಹದ ಜನಸಂಖ್ಯೆಯೂ ಸೇರಿರುವುದಾಗಿ ತಿಳಿಸಿದೆ.
ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ವಿಡಿಯೋದಲ್ಲಿ ವಿಶಾಲ್ ಅವರು ಪುಷ್ ಅಪ್ಸ್ ಮಾಡುತ್ತಿರುವುದು ಕಂಡುಬಂದಿದ್ದು, ಬಳಿಕ ವಿಶಾಲ್ ಮತ್ತೊಂದು ವರ್ಕ್ ಔಟ್ ಗೆ ತೆರಳಲು ಹೊರಟಾಗ ಕೆಮ್ಮುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ. ದೇಹದ ಮೇಲಿನ ನಿಯಂತ್ರಣ ತಪ್ಪಿದ್ದರಿಂದ ವಿಶಾಲ್ ಸಮೀಪದಲ್ಲೇ ಇದ್ದ ಜಿಲ್ ಯಂತ್ರವನ್ನು ಆಧಾರವಾಗಿ ಹಿಡಿದುಕೊಂಡಾಗ ಕೆಮ್ಮು ವಿಪರೀತವಾಗಿ ನೆಲದ ಮೇಲೆ ಕುಸಿದು ಬಿದ್ದು ಕೊನೆಯುಸಿರೆಳೆದ ದೃಶ್ಯ ವಿಡಿಯೋದಲ್ಲಿದೆ.
ಜಿಮ್ ನೊಳಗೆ ಇದ್ದ ಇತರರು ಕೂಡಲೇ ಜಿಮ್ ತರಬೇತುದಾರರನ್ನು ಕರೆದಿದ್ದು, ಅವರು ಉಸಿರಾಟ ಪುನರ್ ಚಾಲನೆಗಾಗಿ ಸಾಕಷ್ಟು ಪ್ರಯತ್ನ ನಡೆಸಿದ್ದರು. ಕೊನೆಗೂ ಕೂಡಲೇ ಸ್ಥಳೀಯ ಆಸ್ಪತ್ರೆಗೆ ಕೊಂಡೊಯ್ದಿದ್ದು, ಅಷ್ಟರಲ್ಲೇ ಸಾವನ್ನಪ್ಪಿರುವುದಾಗಿ ವೈದ್ಯರು ಘೋಷಿಸಿರುವುದಾಗಿ ವರದಿ ತಿಳಿಸಿದೆ.