ಮಹಾರಾಷ್ಟ್ರ : ಮನಸ್ಸಿದ್ದರೆ ಮಾರ್ಗ, ಕೈ ಕೆಸರಾದರೆ ಬಾಯಿ ಮೊಸರು, ಕಷ್ಟ ಪಟ್ಟು ದುಡಿದರೆ ಫಲ ಕಟ್ಟಿಟ್ಟ ಬುತ್ತಿ…ಈ ಮೇಲಿನ ಸಾಲುಗಳನ್ನು ಸತ್ಯವಾಗಿಸಿದ್ದಾರೆ ಮಹಾರಾಷ್ಟ್ರದ ಅನ್ನದಾತ.
ಎಲ್ಲರೂ ಬಿಳಿ ಹೂಕೋಸು ಬೆಳೆದರೆ ನಾಸಿಕ್ ನ ಮಾಲೆಗಾಂವ್ ತಾಲೂಕಿನ ದಬಾಡಿ ಗ್ರಾಮದ ರೈತ ಮಹೇಂದ್ರ ನಿಕ್ಕಂ ಹಳದಿ ಹಾಗೂ ನೇರಳೆ ಬಣ್ಣದ ಹೂಕೋಸು ಬೆಳೆದು ಯಶಸ್ಸು ಕಂಡಿದ್ದಾನೆ.
42 ವಯಸ್ಸಿನ ಮಹೇಂದ್ರ, ಕೃಷಿಯನ್ನೇ ನಂಬಿಕೊಂಡವರು. ಆದರೆ, ಸಾಂಪ್ರದಾಯಿಕ ಕೃಷಿ ಪದ್ಧತಿ ಬದಲಿಗೆ ಸದಾ ಹೊಸ ಪ್ರಯೋಗ ಅಳವಡಿಸಿ ಯಶಸ್ಸು ಕಂಡಿದ್ದಾರೆ.
ಹರಿಯಾಣದಲ್ಲಿ ಅಭಿವೃದ್ಧಿ ಪಡಿಸಿದ ಹೈಬ್ರಿಡ್ ಹೂಕೋಸು ಬೀಜಗಳನ್ನು 40,000 ಹಣ ಖರ್ಚು ಮಾಡಿ ಖರೀದಿಸಿ ತನ್ನ ಹೊಲದಲ್ಲಿ ಬಿತ್ತನೆ ಮಾಡಿದ್ದರು. ಗೊಬ್ಬರ ಹಾಗೂ ಆಳುಗಳ ಕೂಲಿ ಸೇರಿ 2 ಲಕ್ಷ ಹಣ ಖರ್ಚು ಮಾಡಿದ್ದಾರೆ. ಇದೀಗ ಫಸಲು ಭರ್ಜರಿಯಾಗೇ ಬಂದಿದೆ.
ಮಾರುಕಟ್ಟೆಯಲ್ಲಿ ಈ ಹೂಕೋಸಿಗೆ ಭಾರೀ ಬೇಡಿಕೆಯಿದೆ. ಒಂದು ಕೆಜಿಗೆ ಸರಿಸುಮಾರು 80 ರೂ. ಅದರಂಥೆ ಮಹೇಂದ್ರ 20 ಸಾವಿರ ಕೆ.ಜಿ ಹೂಕೋಸು ಬೆಳೆದಿದ್ದು ಇದರಿಂದ ಬರೋಬ್ಬರಿ 16 ಲಕ್ಷ ಲಾಭದ ನಿರೀಕ್ಷೆಯಲ್ಲಿದ್ದಾರೆ.
ಇನ್ನು ಇಡೀ ಮಹಾರಾಷ್ಟ್ರದಲ್ಲಿ ಹೈಬ್ರಿಡ್ ಹೂಕೋಸು ಬೆಳೆದ ಮೊದಲ ರೈತ ಎನ್ನುವ ಪಾತ್ರಕ್ಕೆ ಈ ಅನ್ನದಾತ ಭಾಜನರಾಗಿದ್ದಾರೆ. ಈ ರೈತನ ಸಾಧನೆಗೆ ಮಹಾರಾಷ್ಟ್ರ ಕೃಷಿ ಸಚಿವ ದಾದಾಜಿ ಭೂಸೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.