ಮಂಗಳೂರು: ಶಾಸಕ ಬಿ.ಎ. ಮೊದಿನ್ ಬಾವಾ ಅವರ ಹೊಚ್ಚ ಹೊಸ ವೋಲ್ವೋ ಎಕ್ಸ್‌ಸಿ 90 ಟಿ8 ಎಕ್ಸಲೆನ್ಸ್ ಕಾರಿಗೆ ಪೆಟ್ರೋಲ್ ಬದಲು ಡೀಸೆಲ್ ತುಂಬಿಸಿದ ಘಟನೆ ನಗರದ ಕದ್ರಿಯ ಪೆಟ್ರೋಲ್ ಬಂಕ್‌ನಲ್ಲಿ ಸೋಮವಾರ ಸಂಜೆ ನಡೆದಿದೆ.
ಇದರಿಂದ ಕಾರು ಚಲಾಯಿಸಲಾಗದೆ ಪೆಟ್ರೋಲ್ ಬಂಕ್‌ನಲ್ಲಿ ಇರಿಸಲಾಗಿದೆ. ಕಾರಿನ ಇಂಧನ ಟ್ಯಾಂಕ್‌ನಲ್ಲಿ ತುಂಬಿಸಿರುವ ಡೀಸೆಲ್ ಹೊರ ತೆಗೆಯಲು ಅದನ್ನು ಲಾರಿಯಲ್ಲಿ ಹಾಕಿ ಬೆಂಗಳೂರಿಗೆ ಕೊಂಡೊಯ್ಯಬೇಕಾದ ಪ್ರಮೇಯ ಒದಗಿ ಬಂದಿದೆ.
ಶಾಸಕ ಮೊದಿನ್ ಬಾವಾ ಅವರು ಶನಿವಾರ ಈ ದುಬಾರಿ ಕಾರನ್ನು (ಬೆಲೆ 1.65 ಕೋಟಿ ರೂ.) ದೇಶದ ಮೊದಲ ಗ್ರಾಹಕರಾಗಿ ಖರೀದಿಸಿದ್ದರು. ಶಾಸಕರು ಸೋಮವಾರ ಕಾರನ್ನು ಮಂಗಳೂರಿನಲ್ಲಿ ಬಿಟ್ಟು ಬೆಂಗಳೂರಿಗೆ ತೆರಳಿದ್ದರು. ಅವರ ಪುತ್ರ ಈ ಹೊಸ ಕಾರನ್ನು ನಗರದಲ್ಲಿ ಚಲಾಯಿಸಿ ಅದರ ಅನುಭವ ಪಡೆಯುತ್ತಿದ್ದರು. ಹಾಗೆ ಸಂಜೆ ಹೊತ್ತು ಪೆಟ್ರೋಲ್ ಖಾಲಿಯಾದ ಪ್ರಯುಕ್ತ ಕದ್ರಿಯ ಪೆಟ್ರೋಲ್ ಪಂಪ್‌ಗೆ ತೆರಳಿದ್ದರು.
ಬಂಕ್‌ನಲ್ಲಿ ಕಾರು ನಿಲ್ಲಿಸಿದಾಗ ಅಲ್ಲಿನ ಸಿಬಂದಿ ಬ್ಯುಸಿಯಾಗಿದ್ದರು. ಓರ್ವ ಸಿಬಂದಿ ಪಕ್ಕಕ್ಕೆ ಬಂದಾಗ ಶಾಸಕರ ಪುತ್ರನು ಈ ಕಾರಿಗೆ ಪೆಟ್ರೋಲ್ ಎಂದು ಹೇಳಿದ್ದಾರೆ. ಆದರೆ ಅಷ್ಟರಲ್ಲಿ ದೂರದಲ್ಲಿದ್ದ ಇನ್ನೋರ್ವ ಸಿಬಂದಿ ಓಡಿ ಬಂದು ಡೀಸೆಲ್ ಹಾಕಿದ್ದಾನೆ. ಆತ ಡೀಸೆಲ್ ಹಾಕುತ್ತಿದ್ದಾನೆ ಎಂಬ ಸಂಗತಿ ಶಾಸಕರ ಪುತ್ರನಿಗೆ ತಿಳಿಯುವಷ್ಟರಲ್ಲಿ 6 ಲೀಟರ್‌ಗಳಷ್ಟು ಡೀಸೆಲ್ ಇಂಧನ ಟ್ಯಾಂಕ್‌ಗೆ ಪೂರೈಕೆಯಾಗಿದೆ.
ಈ ಅಚಾತುರ್ಯದ ಬಗ್ಗೆ ಶಾಸಕರ ಪುತ್ರ ಮತ್ತು ಬಂಕ್ ಸಿಬಂದಿ ಮಧ್ಯೆ ವಾಗ್ವಾದ ನಡೆದಿದ್ದು, ಆಗ ಜನ ಸೇರಿದ್ದಾರೆ. ಪೆಟ್ರೋಲ್ ಚಾಲಿತ ಕಾರಿಗೆ ಡೀಸೆಲ್ ತುಂಬಿಸಿ ಚಲಾಯಿಸಿದರೆ ಎಂಜಿನ್‌ಗೆ ಹಾನಿಯಾಗುವ ಸಾಧ್ಯತೆ ಇರುವುದರಿಂದ ಕಾರನ್ನು ಪೆಟ್ರೋಲ್ ಬಂಕ್‌ನಲ್ಲಿಯೇ ಇರಿಸಲಾಗಿದೆ. ಅದಕ್ಕೆ ಹಾಕಿದ ಡೀಸೆಲ್ ಖಾಲಿ ಮಾಡಿಸಲು ಮಂಗಳೂರಿನಲ್ಲಿ ತಾಂತ್ರಿಕ ವ್ಯವಸ್ಥೆ ಇಲ್ಲದಿರುವುದರಿಂದ ಬೆಂಗಳೂರಿಗೆ ಕೊಂಡೊಯ್ಯಬೇಕಾಗಿ ಬಂದಿದೆ.