Advertisement

ಹಾಕಿ ವಿಶ್ವ ಲೀಗ್‌ ಸೆಮಿಫೈನಲ್‌ ಕೆನಡಕ್ಕೆ ಶರಣಾದ ಭಾರತ

03:45 AM Jun 26, 2017 | Team Udayavani |

ಲಂಡನ್‌: ಲೀಗ್‌ ಹಂತದಲ್ಲಿ ಅಮೋಘ ನಿರ್ವಹಣೆ ನೀಡಿದ್ದ ಭಾರತ ನಿರ್ಣಾಯಕ ಹಂತದಲ್ಲಿ ಮಲೇಶ್ಯ ಮತ್ತು ಕೆನಡ ವಿರುದ್ಧ ನೀರಸವಾಗಿ ಆಡಿದ್ದರಿಂದ ಹೀರೊ ಹಾಕಿ ವಿಶ್ವ ಲೀಗ್‌ ಸೆಮಿಫೈನಲ್‌ನಲ್ಲಿ ಆರನೇ ಸ್ಥಾನ ಪಡೆಯಲಷ್ಟೇ ಶಕ್ತವಾಯಿತು.

Advertisement

ಮಲೇಶ್ಯ ವಿರುದ್ಧ ಸೋತು ಸೆಮಿಫೈನಲ್‌ ತಲುಪಲು ವಿಫ‌ಲವಾಗಿದ್ದ ಭಾರತ ಆಬಳಿಕ ತನ್ನ ಸಾಂಪ್ರದಾಯಿಕ ಎದುರಾಳಿ ಪಾಕಿಸ್ಥಾನವನ್ನು ಭರ್ಜರಿಯಾಗಿ ಸೋಲಿಸಿ 5-6ನೇ ಸ್ಥಾನ ನಿರ್ಣಯ ಪಂದ್ಯದಲ್ಲಿ ಆಡಲು ಅರ್ಹತೆ ಗಳಿಸಿತು. ಆದರೆ ರವಿವಾರ ನಡೆದ ಈ ಪಂದ್ಯದಲ್ಲಿ ಮತ್ತೆ ಅಸ್ಥಿರ ನಿರ್ವಹಣೆ ಮತ್ತು ಗೋಲು ಹೊಡೆಯುವ ಅವಕಾಶ ಕಳೆದುಕೊಂಡ ಭಾರತ ಕೆನಡ ವಿರುದ್ಧ 2-3 ಗೋಲುಗಳಿಂದ ಸೋತು ಆರನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು.

ತನಗಿಂತ ಕಡಿಮೆ ರ್‍ಯಾಂಕಿನ ತಂಡದೆದುರು ಇದು ಈ ಕೂಟದಲ್ಲಿ ಭಾರತದ ಎರಡನೇ ಸೋಲು ಆಗಿದೆ. ಈ ಮೊದಲು ಭಾರತ ಕ್ವಾರ್ಟರ್‌ಫೈನಲ್‌ನಲ್ಲಿ ಮಲೇಶ್ಯಕ್ಕೆ ಶರಣಾಗಿತ್ತು.ಗಾರ್ಡನ್‌ ಜಾನ್‌ಸ್ಟನ್‌ (3, 44ನೇ) ಅವಳಿ ಗೋಲು ಹೊಡೆದರೆ ಕೀಗನ್‌ ಪೆರೇರ (40ನೇ) ಇನ್ನೊಂದು ಗೋಲು ಹೊಡೆದು ಕೆನಡ ತಂಡದ ಗೆಲುವಿಗೆ ಕಾರಣರಾದರು. ಭಾರತ ಪರ ದಾಖಲಾದ ಎರಡು ಗೋಲುಗಳನ್ನು ಹರ್ಮನ್‌ಪ್ರೀತ್‌ ಸಿಂಗ್‌ (7, 22ನೇ) ಹೊಡೆದಿದ್ದರು. ಭಾರತಕ್ಕೆ ಲಭಿಸಿದ್ದ 8 ಪೆನಾಲ್ಟಿ ಕಾರ್ನರ್‌ ಅವಕಾಶದಲ್ಲಿ ಹರ್ಮನ್‌ಪ್ರೀತ್‌ ಎರಡನ್ನು ಗೋಲಾಗಿ ಪರಿವರ್ತಿಸಿದ್ದರು.

ಈ ಗೆಲುವಿನಿಂದ ಕೆನಡ ಈ ಕೂಟದಲ್ಲಿ ಐದನೇ ಸ್ಥಾನ ಪಡೆಯಿತಲ್ಲದೇ ಮುಂದಿನ ವರ್ಷ ಭುವನೇಶ್ವರದಲ್ಲಿ ನಡೆಯಲಿರುವ ವಿಶ್ವಕಪ್‌ನಲ್ಲಿ ಆಡಲು ಅರ್ಹತೆ ಪಡೆಯಿತು. ಇಲ್ಲಿ ಸೋಲು ಕಂಡಿದ್ದರೂ ಆರನೇ ರ್‍ಯಾಂಕಿನ ಭಾರತ ಈ ವರ್ಷದಲ್ಲಿಯೇ ನಡೆಯುವ ಹಾಕಿ ವಿಶ್ವ ಲೀಗ್‌ ಫೈನಲ್‌ ಮತ್ತು ವಿಶ್ವಕಪ್‌ನಲ್ಲಿ ಆಡುವ ಅವಕಾಶ ಪಡೆದಿದೆ. ಈ ಎರಡೂ ಕೂಟಗಳು ಭಾರತದಲ್ಲಿ ನಡೆಯುವ ಕಾರಣ ಆತಿಥ್ಯ ವಹಿಸಿದ ಹಿನ್ನಲೆಯಲ್ಲಿ ಭಾರತ ಆಡಲು ಅರ್ಹತೆ ಗಳಿಸಲಿದೆ.

Advertisement

Udayavani is now on Telegram. Click here to join our channel and stay updated with the latest news.

Next