ಮೈಸೂರು: ಲೋಕಸಭಾ ಚುನಾವಣಾ ಫಲಿತಾಂಶಕ್ಕೂ ಮುನ್ನವೇ ರಾಜ್ಯ ಮೈತ್ರಿ ಸರ್ಕಾರದ ಕೆಲವು ಶಾಸಕರು, ಮುಖಂಡರು ಸಿದ್ದರಾಮಯ್ಯನವರೇ ಮತ್ತೆ ಮುಖ್ಯಮಂತ್ರಿಯಾಗಬೇಕೆಂದು ಬಹಿರಂಗ ಹೇಳಿಕೆ ನೀಡತೊಡಗಿದ್ದಾರೆ. ಮತ್ತೊಂದೆಡೆ ಸಿದ್ದರಾಮಯ್ಯನವರ ವಿರೋಧಿ, ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ವಿಶ್ವನಾಥ್ ಅವರು ಬಿಜೆಪಿ ಉಪಾಧ್ಯಕ್ಷ ಶ್ರೀನಿವಾಸ್ ಪ್ರಸಾದ್ ಅವರನ್ನು ಭೇಟಿಯಾಗಿ ರಹಸ್ಯ ಮಾತುಕತೆ ನಡೆಸಿರುವುದು ಮತ್ತಷ್ಟು ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ.
ಮೇ 23ರ ನಂತರ ರಾಜ್ಯ ರಾಜಕೀಯದಲ್ಲಿ ಭಾರೀ ಬದಲಾವಣೆಯಾಗಲಿದೆ ಎಂದು ಬಿಜೆಪಿ ಹಾಗೂ ಕಾಂಗ್ರೆಸ್ ನ ಕೆಲವು ಮುಖಂಡರು ಹೇಳುತ್ತಿರುವುದರ ಜೊತೆಗೆ ವಿಶ್ವನಾಥ್ ಅವರು ಬಿಜೆಪಿ ರಾಜ್ಯ ಉಪಾಧ್ಯಕ್ಷರ ಜೊತೆ ಚರ್ಚೆ ನಡೆಸಿರುವುದಕ್ಕೆ ರಾಜಕೀಯ ವಲಯದಲ್ಲಿ ನಾನಾ ವಿಶ್ಲೇಷಣೆಗಳು ಹೊರಬೀಳತೊಡಗಿದೆ.
ಮಂಗಳವಾರ ಮೈಸೂರಿನ ಜಯಲಕ್ಷ್ಮಿಪುರಂನಲ್ಲಿರುವ ರಾಜ್ಯ ಬಿಜೆಪಿ ಉಪಾಧ್ಯಕ್ಷ ಶ್ರೀನಿವಾಸ್ ಪ್ರಸಾದ್ ನಿವಾಸಕ್ಕೆ ಎಚ್.ವಿಶ್ವನಾಥ್ ಭೇಟಿ ನೀಡಿ ರಹಸ್ಯವಾಗಿ ಮಾತುಕತೆ ನಡೆಸಿದ್ದಾರೆ.
ಏತನ್ಮಧ್ಯೆ ಸದ್ಯಕ್ಕೆ ಸಿಎಂ ಹುದ್ದೆ ಖಾಲಿ ಇಲ್ಲ. ಈಗ ಸಿಎಂ ಆಗಿರುವ ಕುಮಾರಸ್ವಾಮಿ ಅವರು ಒಳ್ಳೆ ಕೆಲಸ ಮಾಡುತ್ತಿದ್ದಾರೆ. ಮುಂದೆ ಅಂತಹ ಅವಕಾಶ ಬಂದರೆ ನೋಡುವ ಎಂಬುದಾಗಿ ಸಿದ್ದರಾಮಯ್ಯನವರು ಪ್ರತಿಕ್ರಿಯೆ ನೀಡಿದ್ದಾರೆ. ರಾಜ್ಯ ರಾಜಕೀಯದಲ್ಲಿನ ಬೆಳವಣಿಗೆ, ಹೇಳಿಕೆಗಳಿಗೆ ಮೇ 23ರ ನಂತರ ತೆರೆ ಬೀಳಲಿದೆಯಾ ಎಂಬುದನ್ನು ಕಾದು ನೋಡಬೇಕಾಗಿದೆ.