ಹೂವಿನಹಿಪ್ಪರಗಿ: ಸರಕಾರದ ವಿವಿಧ ಯೋಜನೆ, ಮಾಹಿತಿಗಳನ್ನು ಜನ ಸಾಮಾನ್ಯರಿಗೆ ತಲುಪಿಸುವ ಸದುದ್ದೇಶದಿಂದ ಗ್ರಾಮೀಣ ಗ್ರಂಥಾಲಯಗಳು ಆರಂಭವಾಗಿವೆ. ಆದರೆ ಸಮರ್ಪಕ ನಿರ್ವಹಣೆ ಕೊರತೆಯಿಂದ ಹೆಸರಿಗೆ ಮಾತ್ರ ಎಂಬಂತಾಗಿವೆ ಎಂಬುದಕ್ಕೆ ಕುದರಿಸಾಲವಾಡಗಿ ಹಾಗೂ ಹೂವಿನಹಿಪ್ಪರಗಿ ಗ್ರಂಥಾಲಯಗಳು ನಿದರ್ಶನವಾಗಿವೆ.
ಸಮೀಪದ ಕುದರಿ ಸಾಲವಾಡಗಿ ಗ್ರಾಮದ ಗ್ರಂಥಾಲಯ ಸುಮಾರು ತಿಂಗಳಗಳಿಂದ ತನ್ನ ಸೇವೆಯನ್ನು ಸಂಪೂರ್ಣವಾಗಿ ನಿಲ್ಲಿಸಿದೆ. ಗ್ರಂಥಾಲಯದ ಕಟ್ಟಡ ಅಲ್ಲಲ್ಲಿ ಬಿರುಕು ಬಿಟ್ಟಿದ್ದು, ಮುರಿದ ಕಿಡಕಿ, ಕಿತ್ತು ಹೋದ ವಿದ್ಯುತ್ ವೈರಿಂಗ್, ಕುಳಿತುಕೊಳ್ಳಲು ಸುಸಜ್ಜಿತ ಸ್ಥಳದ ಕೊರತೆ, ಓದಲು ಪತ್ರಿಕೆ ಇಲ್ಲ, ಬೆರಳಣಿಕೆಯಷ್ಟು ಪುಸ್ತಕ. ಇವುಗಳನ್ನೆಲ್ಲ ನೋಡಿದರೆ ಇದು ಸರಕಾರ ಗ್ರಂಥಾಲಯವೇ ಎಂಬ ಪ್ರಶ್ನೆ ಉದ್ಬವಿಸುವಂತಾಗಿದೆ.
ಇಲಾಖೆಯಿಂದ ಪ್ರತಿ ತಿಂಗಳು 400 ರೂ. ಸಹಾಯ ಧನ ಬರುತ್ತಿದ್ದು, ಈ ಮೊತ್ತದಲ್ಲಿ ನಿರ್ವಾಹಣೆಗೆ ಮಾಡಬೇಕಿದೆ. ಸದ್ಯ ಇಲ್ಲಿಗೆ ಎರಡು ದಿನ ಪತ್ರಿಕೆಗಳು ಮಾತ್ರ ಬರುತ್ತಿದ್ದು, ಗ್ರಾಮದಲ್ಲಿ ಐದು ಪ್ರಾಥಮಿಕ ಶಾಲೆ, ಮೂರು ಪ್ರೌಢಶಾಲೆ, ವಸತಿ ನಿಲಯ ಹೀಗೆ ಅನೇಕ ವಿದ್ಯಾ ಮಂದಿರಗಳಿದ್ದು ಎಲ್ಲರಿಗೂ ಗ್ರಂಥಾಲಯವೇ ಆಧಾರವಾಗಿದೆ.
ಇಲ್ಲಿ ಎಲ್ಲ ಪತ್ರಿಕೆಗಳು, ಸಾಮಾನ್ಯ ಜ್ಞಾನಕ್ಕೆ ಸಂಬಂಧಪಟ್ಟ ಪುಸ್ತಕಗಳು ಲಭ್ಯವಿಲ್ಲ. ಗ್ರಾಮೀಣ ಪ್ರದೇಶದಲ್ಲಿ ಎಲ್ಲರೂ ಪತ್ರಿಕೆಗಳನ್ನು ಕೊಂಡು ಓದುವುದಿಲ್ಲ. ಗ್ರಂಥಾಲಯಗಳು ಜ್ಞಾನ ನೀಡುವ ದೇವಸ್ಥಾನವಾಗಿದ್ದು ಅದರ ಉದ್ಧಾರಕ್ಕಾಗಿ ಕ್ರಮ ಕೈಗೊಳ್ಳಬೇಕು ಎಂಬುದು ಸಾರ್ವಜನಿಕರ ಆಶಯ.
ತಿಂಗಳಿಗೆ ಕನಿಷ್ಠ 2,000ದಿಂದ 3,000 ರೂ. ನಿರ್ವಾಹಣಾ ಅನುದಾನ ನೀಡಬೇಕು ಎಂಬುದು ಗ್ರಂಥಾಲಯದ ಹಲವು ಮೇಲ್ವಿಚಾರಕರ ಬೇಡಿಕೆ. ನಿತ್ಯ ನೂರಾರು ಜನತೆ ಗ್ರಂಥಾಲಯಕ್ಕೆ ಬರುತ್ತಾರೆ. ಒಬ್ಬರು ಪತ್ರಿಕೆ ಓದಿದ ನಂತರ ಇನ್ನೊಬ್ಬರು ಓದುವ ಅನಿರ್ವಾತೆ ಕಾಣುತ್ತದೆ. ಸರಕಾರ ಕಳೆದ ಎರಡು ವರ್ಷದಿಂದ ನಮ್ಮ ಸೇವೆಯ ಸಮಯವನ್ನು 8 ಗಂಟೆಯಿಂದ ನಾಲ್ಕು ಗಂಟೆಗೆ ಇಳಿಸಿದೆ ಎನ್ನುತ್ತಾರೆ ಕೆಲ ಮೇಲ್ವಿಚಾರಕರು.
ಹೂವಿನಹಿಪ್ಪರಗಿ ಹೋಬಳಿಗೆ ಸಬಂಧಿಸಿದ ಹಲವು ಗ್ರಾಪಂ ಮಟ್ಟದಲ್ಲಿ ಸಾರ್ವಜನಿಕ ಗ್ರಂಥಾಲಯಗಳಿವೆ. ದಿಂಡವಾರ, ಯಾಳವಾರ, ಸಾಸನೂರ, ಹುಣಿಶ್ಯಾಳ ಪಿಬಿ, ವಡವಡಗಿ, ಬ್ಯಾಕೋಡ, ಸಾತಿಹಾಳ, ಸೇರಿದಂತೆ ಇತರೆ ಗ್ರಾಪಂನಲ್ಲಿ ಯಾವುದೇ ಗ್ರಂಥಾಲಯ ಇಲಾಖೆಗೆ ಸ್ವಂತ ಕಟ್ಟಡವಿಲ್ಲ, ಸರಿಯಾದ ನಿರ್ವಹಣೆ ಕಾಣುತ್ತಿಲ್ಲ, ಪುಸ್ತಗಳಿದ್ದರೆ, ಪತ್ರಿಕೆಗಳಿಲ್ಲ. ಪತ್ರಿಕೆಗಳಿದ್ದರೆ ಮೇಲ್ವಿಚಾರಕರಿಲ್ಲ ಎಂಬಂಥ ಪರಿಸ್ಥಿತಿ ಇದೆ.