ಹೂವಿನಹಿಪ್ಪರಗಿ: ಗ್ರಾಮೀಣ ಭಾಗದ ಜನರ ಆರೋಗ್ಯ ವಿಚಾರಕ್ಕೆ ಸಬಂಧಪಟ್ಟಂತೆ ಸುಸಮಯಕ್ಕೆ ಸೇವೆ ಒದಗಿಸುವ ಉದ್ದೇಶಕ್ಕಾಗಿ ಪ್ರತಿ ಹೋಬಳಿಗೊಂದು ಆರೋಗ್ಯ ಕವಚ ಉಚಿತ 108 ವಾಹನ ಸೇವೆ ಇದೆ. ಆದರೆ ಇಲ್ಲಿ ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯದಿಂದ 108 ವಾಹನ ತನ್ನ ಸೇವೆಯನ್ನು ನಿಲ್ಲಿಸಿ ಸುಮಾರು ಒಂದು ತಿಂಗಳ ಸಮೀಪಿಸುತ್ತಿದ್ದರೂ ಇತ್ತ ಕಡೆ ಯಾವ ಅಧಿಕಾರಿಯೂ ಗಮನ ಹರಿಸುತ್ತಿಲ್ಲ ಎಂದು ಸಾರ್ವಜನಿಕರು ಆಕ್ರೋಶ ಹೊರ ಹಾಕುತ್ತಿದ್ದಾರೆ.
ಬಸವನಬಾಗೇವಾಡಿ ತಾಲೂಕಿನಲ್ಲಿ ಹೂವಿನಹಿಪ್ಪರಗಿಯ ಹೋಬಳಿ ಅತಿ ದೊಡ್ಡದಾಗಿದೆ. ಕೇವಲ ಒಂದೇ ಒಂದು ಉಚಿತ ಆರೋಗ್ಯ ಸೇವೆ ನೀಡುವ 108 ವಾಹನ ಇದ್ದು, ಅದು ಕೂಡಾ ಸರಿಯಾದ ಸಮಯಕ್ಕೆ ಒದಗುತ್ತಿಲ್ಲ ಎಂಬುದು ಜನರ ಅಭಿಪ್ರಾಯ.
ಪ್ರಸ್ತುತ ಹೂವಿನಹಿಪ್ಪರಗಿ ಸೇರಿದಂತೆ ಜಿಲ್ಲೆಯ ವಿವಿಧ ಭಾಗದ ಉಚಿತ 108 ಆರೋಗ್ಯ ಕವಚ ವಾಹನ ಟೈರ್ ಇಲ್ಲ ಎಂದು ನೆಪವೊಡ್ಡಿ ತನ್ನ ಸೇವೆ ಸಂಪೂರ್ಣ ನಿಲ್ಲಿಸಿದೆ. ಆದರೂ ಸಂಬಂಧಪಟ್ಟ ಯಾವೊಬ್ಬ ಅಧಿಕಾರಿಯೂ ಜನರ ಆರೋಗ್ಯದ ಕಡೆಗೆ ಗಮನಿಸಿ 108 ಸೇವೆ ವಾಹನವನ್ನು ದುರಸ್ತಿ ಮಾಡಿ ಕೊಡುತ್ತಿಲ್ಲ.
ಟೈರ್ ಇಲ್ಲ, ಡ್ರೈವರ್ ಇಲ್ಲ ಎಂಬ ಸುಳ್ಳು ನೆಪವೊಡ್ಡಿ ಸಾರ್ವಜನಿಕರ ಆರೋಗ್ಯದ ಜೊತೆಗೆ ನಾಟಕ ಆಡಲಾಗುತ್ತಿದೆ ಎಂಬ ಮಾತು ಕೇಳಿ ಬರುತ್ತಿದೆ. ಈಗ ಹೂವಿನಹಿಪ್ಪರಗಿ ಗ್ರಾಮದ ಸುತ್ತಲಿನ ಗ್ರಾಮಗಳ ಜನತೆ ಬಸವನಬಾಗೇವಾಡಿ, ಮುದ್ದೇಬಿಹಾಳದಿಂದ 108 ವಾಹನ ಬರುವವರೆಗೆ ಜನತೆ ಕಾಯುವ ಸ್ಥಿತಿ ನಿರ್ಮಾಣವಾಗಿದೆ.
ಆ ವಾಹನ ಬಂದು ತಲುಪುವ ತನಕ ತುರ್ತು ಆರೋಗ್ಯ ಪರಿಸ್ಥತಿ ಏನಾಗಬಹುದು ಎಂಬ ಪ್ರಶ್ನೆ ಕಾಡುತ್ತಿದೆ. ಸರಕಾರಿ ನಿಯಮದ ಪ್ರಕಾರ 30ರಿಂದ 35 ಸಾವಿರ ಕಿ.ಮೀ. ಕ್ರಮಿಸಿದ ಬಳಿಕ ವಾಹನದ ಟೈರ್‌ಗಳನ್ನು ಬದಲಾವಣೆ ಮಾಡುವ ನಿಯಮವಿದ್ದರೂ ಅದನ್ನು ಗಾಳಿಗೆ ತೂರಿ, 50 ಸಾವಿರಕ್ಕಿಂತಲು ಹೆಚ್ಚು ಕಿ.ಮೀ. ಕ್ರಮಿಸಿದರು ಟೈರ್ ಬದಲಾವಣೆ ಮಾಡುವಲ್ಲಿ ವಿಳಂಬವಾದುದರಿಂದ ಟೈರ್ ಒಡೆದು ಹೋಗಿದೆ.
ಆದರೂ ತಿಂಗಳೂ ಕಳೆದರು ಇವರೆಗೆ ವಾಹನ ದುರಸ್ತಿಯಾಗುತ್ತಿಲ್ಲ. ಇನ್ನಾದರೂ ಬೇಗನೆ ದುರಸ್ತಿ ಮಾಡಿ ಜನರ ಆರೋಗ್ಯ ಸೇವೆ ನೀಡಲು ಮುಂದಾಗಬೇಕು.