Advertisement

ಮಳೆ ಬಂದರೆ ವ್ಯಾಪಾರ ನಷ್ಟ: ಗ್ರಾಹಕರಿಗೆ ಕಷ್ಟ!

11:29 AM Aug 19, 2019 | Naveen |

ಹೂವಿನಹಡಗಲಿ: ಪಟ್ಟಣದಲ್ಲಿ ಶನಿವಾರ ಸಂಜೆ ಸುರಿದ ಮಳೆಯಿಂದಾಗಿ ಪಟ್ಟಣದ ಎಪಿಎಂಸಿ ಪಕ್ಕದಲ್ಲಿರುವ ದನದ ಸಂತೆಯಲ್ಲಿ ವಾರದ ತರಕಾರಿ ಮಾರುಕಟ್ಟೆ ಸಂಪೂರ್ಣವಾಗಿ ನೀರು ತುಂಬಿಕೊಂಡು ಕೆರೆ ಆದಂತಾಗಿತ್ತು.

Advertisement

ದುಬಾರಿ ತರಕಾರಿ ನೀರಿನಲ್ಲಿ ತೇಲಾಡುತ್ತಿದ್ದರೆ, ಇನ್ನೂ ಕೆಲವೊಂದು ಮಸಾಲೆ ಪದಾರ್ಥಗಳು ನೆನೆದು ವ್ಯಾಪಾರಸ್ಥರಿಗೆ ತುಂಬಾ ನಷ್ಟ ಅನುಭವಿಸುವಂತಾಯಿತು. ಪಟ್ಟಣದಲ್ಲಿ ಈ ಮುಂಚೆ ಶಾ ಪೋಷಾಜಿ ವನೇ ಚಂದ್‌ ಸರ್ಕಾರಿ ಶಾಲೆ ಪಕ್ಕದ ಮೈದಾನದಲ್ಲಿ ವಾರದ ಸಂತೆಯನ್ನು ನಡೆಸಲಾಗುತ್ತಿತ್ತು. ಈ ಪ್ರದೇಶ ಸ್ವಲ್ಪ ಎತ್ತರದಲ್ಲಿದ್ದರಿಂದಾಗಿ ಮಳೆ ಬಂದರೂ ಯಾವುದೇ ತೊಂದರೆಯಾಗದಂತೆ ತರಕಾರಿ ವ್ಯಾಪಾರಸ್ಥರು ವಾರದ ಸಂತೆಯಲ್ಲಿ ತಮ್ಮ ಅಂಗಡಿ ಹಚ್ಚಿಕೊಂಡು ವ್ಯಾಪಾರ ಮಾಡುತ್ತಿದ್ದರು. ಮೇಲಾಗಿ ಈ ಪ್ರದೇಶ ಪಟ್ಟಣದ ಬಹುತೇಕ ಜನರಿಗೆ ಹತ್ತಿರವಾಗುತ್ತಿತ್ತು.

ನೆಮ್ಮದಿ ಊರಿನಿಂದ ಸಂತೆ ಸ್ಥಳಾಂತರ: ಪಟ್ಟಣದಲ್ಲಿ ನೆಮ್ಮದಿ ಊರು ಎನ್ನುವ ಹೊಸ ಯೋಜನೆಯೊಂದು ಜಾರಿಗೆ ಬಂದಿದ್ದು ಈ ಯೋಜನೆಯಿಂದಾಗಿ ಜನತೆಗೆ ಅನುಕೂಲವಾಗಿದ್ದು ನಿಜ. ಆದರೆ ಇಲ್ಲಿ ನಡೆಯುತ್ತಿದ್ದ ವಾರದ ಸಂತೆಯನ್ನು ಊರಿನಿಂದ ಎಪಿಎಂಸಿ ಸರ್ಕಲ್ ದಾಟಿ ದನದ ಸಂತೆಯಲ್ಲಿ ಜಾಗ ಗುರುತು ಮಾಡಿದ್ದು ಹಲವು ಸಮಸ್ಯೆಗಳಿಗೆ ಕಾರಣವಾಯಿತು. ಈ ಜಾಗದಲ್ಲಿ ಸೋಮವಾರ ದನದ ಸಂತೆ ಮಾರುಕಟ್ಟೆ ನಡೆಯುತ್ತದೆ. ದನದ ಮಾರುಕಟ್ಟೆಗೆ ಅನುಗುಣವಾಗಿ ಸಂತೆ ಮೈದಾನವಿರುವುದರಿಂದಾಗಿ ಮೇಲಾಗಿ ಈ ಪ್ರದೇಶದಲ್ಲಿ ಯಾವುದೇ ರೀತಿಯಲ್ಲಿ ಅಭಿವೃದ್ಧಿ ಕಾರ್ಯಗಳು ನಡೆಯದಿರುವುದರಿಂದಾಗಿ ವಾರದ ತರಕಾರಿ ಸಂತೆಗಾಗಿ ಹಲವಾರು ಸಮಸ್ಯೆ ಎದುರಿಸಬೇಕಾಗುತ್ತದೆ.

ಜಕಾತಿ ಕಟ್ಟಿಸಿಕೊಳ್ಳುತ್ತಾರೆ ಅಭಿವೃದ್ಧಿ ಇಲ್ಲ: ವಾರಕ್ಕೊಮ್ಮೆ ಹರಾಜು ಪಡೆದಿರುವವರು ಬಂದು ಜಕಾತಿಯನ್ನು ಪಡೆದುಕೊಂಡು ಹೋಗುತ್ತಾರೆ. ಇದಕ್ಕೆ ಪರ್ಯಾಯವಾಗಿ ಯಾವುದೇ ಪ್ರಗತಿ ಮಾಡಿ ಕೊಡುವುದಿಲ್ಲ. ದುಬಾರಿ ತರಕಾರಿಯನ್ನು ತಂದು ಮಳೆಯಲ್ಲಿ ನಷ್ಟ ಆನುಭವಿಸುವ ಪರಿಸ್ಥಿತಿ ಮೇಲಿಂದ ಮೇಲೆ ಬರುತ್ತಿದೆ. ಈ ಕುರಿತು ಪುರಸಭೆಯವರು ಯಾವುದೇ ಗಮನ ಹರಿಸುತ್ತಿಲ್ಲ ಎಂದು ತರಕಾರಿ ವ್ಯಾಪಾರಸ್ಥರ ಆರೋಪವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next