Advertisement

ಕುರುಬ ಸಮುದಾಯದ ನಡವಳಿಕೆ ಬದಲಾಗಲಿ

03:14 PM May 10, 2019 | Naveen |

ಹೂವಿನಹಡಗಲಿ: ಕುರುಬ ಸಮುದಾಯದವರು ನಾಡಿನ ಎಲ್ಲಾ ಜಾತಿ ಸಮುದಾಯದವರನ್ನು ಪ್ರೀತಿಸುವ ಮೂಲಕ ತಮ್ಮ ನಡುವಳಿಕೆ ಬದಲಾಯಿಸಿಕೊಳ್ಳಬೇಕು. ಇಲ್ಲವಾದರೆ ಮುಂದೊಂದು ದಿನ ಸಮುದಾಯ ಏಕಾಂಗಿಯಾಗಿ ಇರಬೇಕಾಗುತ್ತದೆ ಎಂದು ಮಾಜಿ ಸಚಿವ, ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್.ವಿಶ್ವನಾಥ ಎಚ್ಚರಿಸಿದರು.

Advertisement

ತಾಲೂಕಿನ ಮೈಲಾರದಲ್ಲಿ ಕಾಗಿನೆಲೆ ಶಾಖಾ ಮಠದಲ್ಲಿ ಸ್ಥಿರಬಿಂಬ ಸ್ಫಟಿಕಲಿಂಗು ಪ್ರತಿಷ್ಠಾಪನೆ ಹಾಗೂ ಸಾಮೂಹಿಕ ವಿವಾಹ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಕಾಗಿನೆಲೆ ಕನಕ ಗುರುಪೀಠ ಎಲ್ಲ ಜಾತಿ ಸಮುದಾಯದವರನ್ನು ಒಳಗೊಂಡಿರುವಂತಹ ಪೀಠವಾಗಿದೆ. ಕಳೆದ 25 ವರ್ಷಗಳಲ್ಲಿ ಪೀಠ ಮುಂದಿಟ್ಟುಕೊಂಡು ಧರ್ಮ, ಸಂಸ್ಕೃತಿ, ಶಿಕ್ಷಣ, ಪ್ರಗತಿ ಕುರಿತು ನಮ್ಮ ಮಠಗಳು ಶ್ರಮಿಸುತ್ತಿವೆ. ಇಡೀ ಸಮಾಜದ ಧಾರ್ಮಿಕ ಬಲವನ್ನಿಟ್ಟುಕೊಂಡು ರಾಜ್ಯದ ಮುಖ್ಯಮಂತ್ರಿಯಂತಹ ಉನ್ನತ ಹುದ್ದೆ ಪಡೆದುಕೊಳ್ಳಲು ಸಮುದಾಯಕ್ಕೆ ಸಾಧ್ಯವಾಯಿತು ಎಂದರು.

ಮೈಲಾರದಲ್ಲಿ ನುಡಿಯುವ ಕಾರ್ಣಿಕ ನುಡಿ ಸತ್ಯವಾದದ್ದು, ಅದು ವಾಸ್ತವಿಕ ಧರ್ಮದ ತಳಹದಿಯಲ್ಲಿ ನಡೆಯುವಂತಹದ್ದು, ಅದನ್ನು ಎಲ್ಲರೂ ನಂಬಲೇಬೇಕಾಗಿದೆ. ಜೀವನದಲ್ಲಿ ದಾಂಪತ್ಯದ ಬದುಕು ಅತಿ ಮುಖ್ಯವಾದದ್ದು. ದಾಂಪತ್ಯಕ್ಕೆ ಕಾಲಿಡಲು ಇಂತಹ ಸರಳ ಸಾಮೂಹಿಕ ವಿವಾಹಗಳು ಅಗತ್ಯ. ನಾನು ಸಹ ನನ್ನ ಮಕ್ಕಳ ಮದುವೆಯನ್ನು ಸಾಮೂಹಿಕ ವಿವಾಹದಲ್ಲಿ ಮಾಡಿದ್ದು, ರಾಜಕಾರಣಿಗಳು ಸಹ ಇದನ್ನು ಅಳವಡಿಸಿಕೊಳ್ಳಬೇಕು ಎಂದರು.

ಸಾನ್ನಿಧ್ಯ ವಹಿಸಿದ್ದ ಮಾನಾಡಿದ ತರಳಬಾಳು ಸಿರಿಗೆರೆ ಬೃಹನ್ಮಠದ ಡಾ| ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ, ಸಮಾಜಕ್ಕೆ ರಾಜಕೀಯ ಪ್ರಜ್ಞೆ ಎಷ್ಟು ಮುಖ್ಯವೋ, ಧಾರ್ಮಿಕ ಪ್ರಜ್ಞೆಯೂ ಅಷ್ಟೇ ಪ್ರಮುಖ. ಯಾವ ಸಮಾಜವು ಸಹ ಕೀಳಲ್ಲ. ಶರೀರ ಸುಸ್ಥಿರವಾಗಿರಬೇಕಾದರೆ, ತಲೆ ಎಷ್ಟು ಮುಖ್ಯವೋ, ಕಾಲು ಸಹ ಅಷ್ಟೇ ಮುಖ್ಯ. ಭೂಮಿಗೆ ಕಸು ನೀಡುವ ಸಮುದಾಯದವರಾಗಿ, ಚಳಿ ಆದಾಗ ಕಂಬಳಿ ಕೊಡುವ ಸಮುದಾಯದವರಾದ ನಿಮಗೆ ಹೆಮ್ಮೆ ಇರಲಿ ಎಂದರು.

ಸಮುದಾಯದಲ್ಲಿ ಎರಡು ಜಾತಿಗಳಿವೆ. ಒಂದು ಉಣ್ಣುವಾಗ ಬೆವರು ಸುರಿಸೋ ಜಾತಿ. ಇನ್ನೊಂದು ಕೆಲಸ ಮಾಡುವಾಗ ಬೆವರು ಸುರಿಸೋ ಜಾತಿ. ನೀವುಗಳು ಕೆಲಸ ಮಾಡುವಾಗ ಬೆವರು ಸುರಿಸೋ ಜಾತಿಯವರು. ನಿಮ್ಮ ಸಮುದಾಯಕ್ಕೆ ನಿರಂಜನಾನಂದಪುರಿ ಸ್ವಾಮೀಜಿ, ಈಶ್ವರಾನಂದಪುರಿ ಸ್ವಾಮೀಜಿ ಜೋಡೆತ್ತಿದ್ದಂಗೆ ಎಂದರು.

Advertisement

ಪ್ರಾಸ್ತಾವಿಕವಾಗಿ ಮಾತನಾಡಿದ ಹೊಸದುರ್ಗ ಶಾಖಾ ಮಠದ ಶ್ರೀ ಈಶ್ವರಾನಂದಪುರಿ ಸ್ವಾಮೀಜಿ, ಮೈಲಾರದಲ್ಲಿ ಕನಕ ಗುರುಪೀಠದ ಶಾಖಾ ಮಠ ನಿರ್ಮಾಣವಾಗಿರುವುದು ಕೆಲವರಿಗೆ ತಳಮಳವಾಗಿದೆ. ಇನ್ನು ಕೆಲವರು ಗೊಂದಲಕ್ಕೀಡಾಗಿದ್ದಾರೆ. ಆದರೆ, ಕನಕ ಗುರುಪೀಠ ಇಲ್ಲಿ ಯಾರ ಹಠಕ್ಕೂ ಮಠ ನಿರ್ಮಿಸಿಲ್ಲ. ಬದಲಾಗಿ ಭಕ್ತರ ಉದ್ಧಾರಕ್ಕಾಗಿ ಮಠ ನಿರ್ಮಿಸಲಾಗಿದೆ. ಯಾರಿಗೆ ಸಮಾಜದಲ್ಲಿ ಧಾರ್ಮಿಕ ಸ್ವತಂತ್ರತೆ ಇಲ್ಲವೋ, ಯಾರು ತುಳಿತಕ್ಕೆ ಒಳಗಾಗಿದ್ದಾರೆಯೋ ಅಂಥವರ ಉದ್ಧಾರಕ್ಕಾಗಿ ಮಠ ನಿರ್ಮಾಣ ಮಾಡಲಾಗಿದೆ. ಕನಕ ಗುರುಪೀಠದ ಸ್ವಾಮೀಜಿ ಯಾರ ಆಸ್ತಿಗಾಗಿ ಸ್ವಾಮಿಗಳಾದವರಲ್ಲ. ಮಠದ ಭಕ್ತರು ಯಾರ ಗೊಂದಲಕ್ಕೆ ಕಿವಿಗೊಡಬಾರದು ಎಂದರು.

ಕೂಡಲಸಂಗಮದ ಬಸವಜಯ ಮೃತ್ಯುಂಜಯ ಸ್ವಾಮೀಜಿ, ಹೊಸದುರ್ಗ ಮಠದ ಡಾ| ಶಾಂತವೀರ ಸ್ವಾಮೀಜಿ, ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದಪುರಿ ಸ್ವಾಮೀಜಿ, ಭೋವಿ ಮಠದ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ, ಚಿತ್ರದುರ್ಗದ ಮಡಿವಾಳ ಮಾಚಿದೇವಯ್ಯ ಗುರುಪೀಠದ ಮಾಚಿದೇವಾನಂದ ಸ್ವಾಮೀಜಿ, ಭಗೀರಥ ಗುರುಪೀಠದ ಪುರುಷೋತ್ತಮಾನಂದಪುರಿ ಸ್ವಾಮೀಜಿ, ಮಾದಾರ ಚನ್ನಯ್ಯ ಸ್ವಾಮೀಜಿ ಆಶೀರ್ವಚನ ನೀಡಿದರು.

ಹೂವಿನಹಡಗಲಿ ಗವಿಮಠದ ಡಾ| ಹಿರಿಶಾಂತವೀರ ಸ್ವಾಮೀಜಿ, ಹಿರೇಮಲ್ಲನಕೇರಿ ಮಠದ ಚನ್ನಬಸವ ಸ್ವಾಮೀಜಿ, ನಂದಿಪುರ ಶ್ರೀಗಳು ಸೇರಿದಂತೆ ಹರಗುರು ಚರಮೂರ್ತಿಗಳು ಸಮ್ಮುಖ ವಹಿಸಿದ್ದರು. ಕಾಗಿನೆಲೆ ಕನಕ ಗುರುಪೀಠದ ನಿರಂಜನಾನಂದಪುರಿ ಶ್ರೀಗಳು ಅಧ್ಯಕ್ಷತೆ ವಹಿಸಿದ್ದರು. ಮಾಜಿ ಸಚಿವ ಆರ್‌. ಶಂಕರ್‌, ಸಮಾಜದ ಮುಖಂಡರಾದ ಎಂ. ಪರಮೇಶ್ವರಪ್ಪ, ಬಿ.ಹನುಮಂತಪ್ಪ, ಈಟಿ ಲಿಂಗರಾಜು ಇನ್ನಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next