Advertisement

ಮೋದಿ ಗೆಲುವು ವಿಶ್ವ ನಾಯಕರ ಆಶಯ

01:47 PM Apr 11, 2019 | Naveen |

ಹೂವಿನಹಡಗಲಿ: ಪ್ರಸ್ತುತ ದೇಶದಲ್ಲಿ ನಡೆಯುತ್ತಿರುವ ಲೋಕಸಭೆ ಚುನಾವಣೆಯಲ್ಲಿ ದೇಶದ ಹಿತಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಗೆಲ್ಲಿಸಬೇಕಾಗಿದೆ. ವಿಶ್ವ ನಾಯಕರ ಆಶಯವೂ ಕೂಡ ಮೋದಿ ಗೆಲುವು ಆಗಿದೆ
ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಹಾಗೂ ಮೊಳಕಾಲ್ಮೂರು ಶಾಸಕ ಬಿ.ಶ್ರೀರಾಮುಲು ವಿಶ್ವಾಸ ವ್ಯಕ್ತಪಡಿಸಿದರು.

Advertisement

ತಾಲೂಕಿನ ಹಿರೇಹಡಗಲಿ ಗ್ರಾಮದಲ್ಲಿ ಬಿಜೆಪಿ ಅಭ್ಯರ್ಥಿ ವೈ.ದೇವೇಂದ್ರಪ್ಪ ಪರ ಮತಯಾಚಿಸಿ ಮಾತನಾಡಿದ ಅವರು, ದೇಶದ ಸಮಗ್ರ ಅಭಿವೃದ್ಧಿ ದೃಷ್ಟಿಯಿಂದ ಪ್ರಧಾನಿ ನರೇಂದ್ರ ಮೋದಿಯವರು ಪ್ರಣಾಳಿಕೆ ಬಿಡುಗಡೆ ಮಾಡಿದರೆ, ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿಯವರು ಒಂದು ಸಮುದಾಯವನ್ನು ಗಮನದಲ್ಲಿಟ್ಟುಕೊಂಡು ಭಯೋತ್ಪಾದಕರಿಗೆ ಕುಮ್ಮಕ್ಕು ನೀಡುವ ರೀತಿಯಲ್ಲಿ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ್ದಾರೆ ಎಂದು ಆರೋಪಿಸಿದರು.

ದೇಶ ಸ್ವಾತಂತ್ರ್ಯ ಗಳಿಸಿದ ನಂತರದಲ್ಲಿ ಪಾಕಿಸ್ತಾನ ನಮ್ಮ ದೇಶದ ಮೇಲೆ ಅನೇಕ ಭಾರೀ ದಾಳಿ ಮಾಡಿದರೂ ಸಹ ಕಾಂಗ್ರೆಸ್‌ ಪಕ್ಷ ಓಟಿನ ಆಸೆಗಾಗಿ ಸುಮ್ಮನಾಗಿತ್ತು. ಆದರೆ ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದ ಬಿಜೆಪಿ ಸರ್ಕಾರ ಪಾಕಿಸ್ತಾನದ ದಾಳಿಗೆ ಪ್ರತೀಕಾರವನ್ನು ತೀರಿಸಿಕೊಳ್ಳಲು ಸರ್ಜಿಕಲ್‌ ಸ್ಟ್ರೈಕ್‌ ಮಾಡುವ ಮೂಲಕ ತಕ್ಕಪಾಠ ಕಲಿಸಿದೆ ಎಂದು ತಿಳಿಸಿದರು.

ರಾಜ್ಯದಲ್ಲಿ ಸಿಎಂ ಎಲ್ಲಿದ್ದಾರೆ: ರಾಜ್ಯದಲ್ಲಿ ಮುಖ್ಯಮಂತ್ರಿಗಳು ಆಡಳಿತ ನಡೆಸುವುದನ್ನು ಬಿಟ್ಟು ಮಂಡ್ಯದಲ್ಲಿ ಸ್ಪರ್ಧಿಸಿರುವ ತಮ್ಮ ಪುತ್ರನ ಗೆಲುವಿಗಾಗಿ ಹಗಲಿರುಳು ಚುನಾವಣೆಯಲ್ಲಿ ಬ್ಯೂಜಿಯಾಗಿದ್ದಾರೆ. ಇವರು ಎಷ್ಟೇ ಪ್ರಯತ್ನಪಟ್ಟರೂ ಮಂಡ್ಯದಲ್ಲಿ ಸುಮಲತಾ ಅವರ ಗೆಲುವು ನಿಶ್ಚಿತವಾಗಿದೆ. ರಾಜ್ಯದಲ್ಲಿ ಕೇವಲ 2ರಿಂದ 3 ಸೀಟುಗಳು ಮಾತ್ರ ಜೆಡಿಎಸ್‌ಗೆ
ಬರಲಿವೆ ಎಂದರು.

ಮೊನ್ನೆ ನಡೆದ ಬಳ್ಳಾರಿ ಲೋಕಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ರಾಜ್ಯ ಸರ್ಕಾರ ತನ್ನ ಅಧಿಕಾರ ಬಳಕೆ ಮಾಡಿಕೊಂಡು ವಿ.ಎಸ್‌.ಉಗ್ರಪ್ಪ ಅವರನ್ನು
ಗೆದ್ದುಕೊಂಡಿರಬಹುದು. ಆದರೆ ಪ್ರಸ್ತುತ ಲೋಕಸಭಾ ಮಹಾ ಚುನಾವಣೆಯಲ್ಲಿ ಜಿಲ್ಲೆಯ ಜನತೆ ಕಾಂಗ್ರೆಸ್‌ ಪಕ್ಷಕ್ಕೆ ತಕ್ಕಪಾಠ ಕಲಿಸುತ್ತಾರೆ. ದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದ ಬಿಜೆಪಿ ಸರ್ಕಾರ ಸುಮಾರು 300 ಸ್ಥಾನ ಪಡೆಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

Advertisement

ಲೋಕ ಚುನಾವಣೆ ಬಳಿಕ ಸರ್ಕಾರ ಪತನ: ಪ್ರಸ್ತುತ ಲೋಕಸಭಾ ಚುನಾವಣೆ ನಂತರದಲ್ಲಿ ರಾಜ್ಯ ಸರ್ಕಾರ ಪತನವಾಗಲಿದ್ದು, ಬಿ.ಎಸ್‌.ಯಡಿಯೂರಪ್ಪ ಅವರು ಈ ರಾಜ್ಯದ ಮುಖ್ಯಮಂತ್ರಿಯಾಗಲಿದ್ದಾರೆ. ನಿಮ್ಮ ಶ್ರೀರಾಮುಲು ಅವರಿಗೆ ಉತ್ತಮ ಸ್ಥಾನ ದೊರೆಯಲಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಮಾಜಿ ಶಾಸಕ ಬಿ.ಚಂದ್ರನಾಯ್ಕ, ಬಿಜೆಪಿ ಮುಖಂಡರಾದ ಓದೋ ಗಂಗಪ್ಪ, ಎಚ್‌.ಪೂಜಪ್ಪ, ಕೊಟ್ರೇಶ್‌ ನಾಯ್ಕ, ಈಟಿ ಲಿಂಗರಾಜು, ಜ್ಯೋತಿ ಮಹೇಂದ್ರ, ಉಚ್ಚಂಗ್ಯಪ್ಪ, ಭಾಗ್ಯಮ್ಮ, ಟಿಪ್ಪುಸುಲ್ತಾನ್‌, ಮುದ್ದಣ್ಣನವರ ಬಸಣ್ಣ, ತಾಲೂಕು ಬಿಜೆಪಿ ಅಧ್ಯಕ್ಷ ಎಂ.ಬಿ.ಬಸಣ್ಣ ಸೇರಿದಂತೆ ಇನ್ನಿತರರಿದ್ದರು.

ಇದಕ್ಕೂ ಮೊದಲು ಶ್ರೀರಾಮುಲು ತಾಲೂಕಿನ ಉತ್ತಂಗಿ, ಹಂಪಸಾಗರ, ಮಸಲವಾಡ ಮುಂತಾದ ಗ್ರಾಮಗಳಲ್ಲಿ ಬಿಜೆಪಿ ಅಭ್ಯರ್ಥಿ ವೈ.ದೇವೇಂದ್ರಪ್ಪ ಪರ ಮತಯಾಚಿಸಿದರು.

ಶ್ರೀರಾಮುಲು ರಾಜಕೀಯ ಭವಿಷ್ಯ
ಪ್ರಸ್ತುತ ಲೋಕಸಭಾ ಚುನಾವಣೆ ಶ್ರೀರಾಮುಲು ಅವರ ರಾಜಕೀಯ ಭವಿಷ್ಯವನ್ನು ನಿರ್ಧರಿಸುತ್ತದೆ. ಕಾರಣ ತಾವುಗಳು ಬಿಜೆಪಿ ಅಭ್ಯರ್ಥಿ ವೈ.ದೇವೇಂದ್ರಪ್ಪ ಅವರನ್ನು ಗೆಲ್ಲಿಸುವ ಮೂಲಕವಾಗಿ ಪುನಃ ಶ್ರೀರಾಮುಲು
ಜಿಲ್ಲೆಯಲ್ಲಿ ರಾಜಕಾರಣ ಮಾಡುವಂತಹ ಸನ್ನಿವೇಶ ಸೃಷ್ಟಿಸಬೇಕಾಗಿದೆ.
ಶ್ರೀರಾಮುಲು, ಬಿಜೆಪಿ ರಾಜ್ಯ ಉಪಾಧ್ಯಕ್ಷ

Advertisement

Udayavani is now on Telegram. Click here to join our channel and stay updated with the latest news.

Next