ಹೂವಿನಹಡಗಲಿ: ತಾಲೂಕಿನ ತುಂಗಭದ್ರಾ ನದಿ ತೀರದಲ್ಲಿರುವ ಕುರುವತ್ತಿ ಸುಕ್ಷೇತ್ರದಲ್ಲಿ ಭಾನುವಾರ ವಿಜೃಂಭಣೆಯ ಬಸವೇಶ್ವರ ಹಾಗೂ ಮಲ್ಲಿಕಾರ್ಜುನ ಸ್ವಾಮಿ ರಥೋತ್ಸವ ನಡೆಯಿತು.
ಭಾನುವಾರ ಬೆಳಗ್ಗೆ ರಥೋತ್ಸವದ ನಿಮಿತ್ತವಾಗಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಸಂಜೆ 5-30ಕ್ಕೆ ರಥೋತ್ಸವ ಪ್ರಾರಂಭವಾಯಿತು. ರಥೋತ್ಸವಕ್ಕೂ ಮುನ್ನ ಪಲ್ಲಕ್ಕಿಯಲ್ಲಿ
ಶ್ರೀ ಸ್ವಾಮಿಯನ್ನು ರಥದ ಬಳಿ ತಂದು ಮೂರು ಸುತ್ತು ಪ್ರದಕ್ಷಣೆ ಹಾಕಿ ರಥದಲ್ಲಿ ಪ್ರತಿಷ್ಠಾಪಿಸಲಾಯಿತು.
ನಂತರ ಭಕ್ತರ ಹರ್ಷೋದ್ಘಾರದೊಂದಿಗೆ ರಥ ಎಳೆಯಲಾಯಿತು. ರಥ ಮುಂದೆ ಸಾಗುತ್ತಿದ್ದಂತೆ ಶ್ರೀ ಬಸವಣ್ಣ ದೋರೆಯೇ ನಿನಗಾರು ಸರಿಯೇ ಎಂಬ ಭಕ್ತರ ಜಯಘೋಷ ಮುಗಿಲು ಮುಟ್ಟಿತ್ತು. ಭಕ್ತರು ತೇರಿಗೆ ಉತ್ತತ್ತಿ ಬಾಳೆಹಣ್ಣನ್ನು ತೂರಿ ಭಕ್ತಿ ಸಮರ್ಪಿಸಿದರು.
ಅಪಾರ ಸಂಖ್ಯೆ ಭಕ್ತರು: ರಥೋತ್ಸವದ ಹಿನ್ನೆಲೆಯಲ್ಲಿ ಕುರುವತ್ತಿಗೆ ಜನಸಾಗರವೇ ಹರಿದುಬಂದಿತ್ತು. ಜಿಲ್ಲೆ ಹಾಗೂ ರಾಜ್ಯದ ವಿವಿಧ ಮೂಲೆಗಳಿಂದಲೂ ಭಕ್ತರು ಎತ್ತಿನ ಬಂಡಿ ಹಾಗೂ ಇತರೆ ವಾಹನಗಳನ್ನು ತೆಗೆದುಕೊಂಡು ಬಂದು ಜಾತ್ರಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಟ್ರಾಫಿಕ್ ಜಾಮ್: ರಥೋತ್ಸವದ ನಂತರ ಭಕ್ತರು ಕ್ಷೇತ್ರದಿಂದ ವಾಪಸ್ ತೆರಳಲು ಹರಸಾಹಸ ಪಡೆಯಬೇಕಾಯಿತು. ವಾಹನ ಸಂದಣಿಯಿಂದಾಗಿ ರಸ್ತೆ ಸಂಚಾರ ಅಸ್ತವ್ಯಸ್ತಗೊಂಡಿದ್ದು ಸುಮಾರು 2-3 ಗಂಟೆಗಳ ತನಕ ಭಕ್ತರು, ವಾಹನ ಸವಾರರು ಪರದಾಡಿದರು. ಟ್ರಾಫಿಕ್‌ಜಾಮ್‌ನಿಂದ ಪಾದಚಾರಿಗಳೂ ತೊಂದರೆ ಅನುಭವಿಸಿದರು.