ಹೂವಿನಹಡಗಲಿ: ಸಮಾಜವನ್ನು ಮುಖ್ಯ ವಾಹಿನಿಗೆ ಕರೆ ತರುವಲ್ಲಿ ಶೈಕ್ಷಣಿಕವಾಗಿ, ಧಾರ್ಮಿಕವಾಗಿ ಸಂಸ್ಕಾರ ಕೊಡುವ ನಿಟ್ಟಿನಲ್ಲಿ ಹಾಲು ಮತ ಸಮಾಜದ ಕನಕ ಗುರು ಪೀಠದ ಶಾಖಾ ಮಠವನ್ನು ತಾಲೂಕಿನ ಮೈಲಾರ ಸುಕ್ಷೇತ್ರದಲ್ಲಿ ನಾಡಿನ ಭಕ್ತರಿಗೆ ಮೇ 8 ರಂದು ಸಮರ್ಪಣೆ ಮಾಡಲಾಗುತ್ತಿದೆ.
ಯಾರು ಶೈಕ್ಷಣಿಕವಾಗಿ, ಧಾರ್ಮಿಕವಾಗಿ ಹಿಂದುಳಿದಿದ್ದಾರೆಯೋ ಅಂಥ ವರ್ಗವನ್ನು ಗಮನದಲ್ಲಿಟ್ಟುಕೊಂಡು ಮೈಲಾರ ಕ್ಷೇತ್ರದಲ್ಲಿ ಶಾಖಾ ಮಠ ನಿರ್ಮಾಣವಾಗುತ್ತಿರುವುದು ನಾಡಿನ ಶ್ರೀ ಮೈಲಾರಲಿಂಗ ಭಕ್ತರ, ಕನಕಾಭಿಮಾನಿಗಳ ಸ್ವಾಭಿಮಾನದ ಸಂಕೇತವಾಗಿ ತಲೆ ಎತ್ತುತ್ತಿದೆ.
ಕರ್ನಾಟಕ ಒಳಗೊಂಡಂತೆ ಮೈಲಾರಲಿಂಗ ಸ್ವಾಮಿ ಭಕ್ತರು ಬಹುತೇಕವಾಗಿ ಆಂಧ್ರ, ತಮಿಳುನಾಡು, ಮಹಾರಾಷ್ಟ್ರ ಮುಂತಾದ ಕಡೆಯಲ್ಲಿ ಅಪಾರ ಸಂಖ್ಯೆಯಲ್ಲಿ ಭಕ್ತರು ಇದ್ದಾರೆ. ಸುಕ್ಷೇತ್ರಕ್ಕೆ ಹಾಲು ಮತ ಸಮಾಜದವರು ಬಂದು ಹೋಗುವಾಗ ಇಲ್ಲಿ ಸ್ಥಾಪನೆಯಾಗಿರುವಂತಹ ಹಾಲುಮತ ಸಮಾಜದ ಮಠವನ್ನು ನೋಡಿದಾಗ ಇದೊಂದು ಸಮಾಜದ ಸ್ವಾಭಿಮಾನದ ಸಂಕೇತವಾಗಿ ಬಿಂಬಿತವಾಗಿರುವುದು ಸ್ಪಷ್ಟವಾಗಿ ಕಂಡು ಬರುತ್ತದೆ. ಆರು ತಿಂಗಳ ಹಿಂದೆಯಷ್ಟೇ ಕನಕ ಗುರು ಪೀಠದಿಂದ ಮೈಲಾರ ಗ್ರಾಮದ ಶಿಬಾರ ಕಟ್ಟೆ ಸಮೀಪ ಒಂದು ಎಕರೆಯಷ್ಟು ಭೂಮಿ ಖರೀದಿಸಿ ಭವ್ಯ ಕಟ್ಟಡವನ್ನು ನಿರ್ಮಾಣ ಮಾಡಲಾಗಿದ್ದು, 240 ಚದರ ಅಡಿಯಲ್ಲಿ ಶಾಖಾ ಮಠ ತಲೆ ಎತ್ತಿದೆ.
ರೇವಣಸಿದ್ಧ ಪರಂಪರೆ ಹೊಂದಿರುವ ಬೀರ ದೇವರು. ಮೈಲಾರಲಿಂಗ ಹೀಗೆ ಹಲವಾರು ಧಾರ್ಮಿಕ ಪರಂಪರೆ ಹೊಂದಿರುವ ಹಾಲುಮತ ಸಮಾಜದ ಈ ಶಾಖಾ ಮಠದಲ್ಲಿ ಸ್ಪಟಿಕ ಲಿಂಗು ಪ್ರತಿಷ್ಠಾಪನೆ ಮಾಡುವ ಮೂಲಕವಾಗಿ ಐಕ್ಯತೆ ತೋರಿದ್ದಾರೆ. ಸ್ಪಟಿಕ ಲಿಂಗುವಿನ ವಿಶೇಷ ಶಾಂತ ಸ್ವರೂಪವಾಗಿದ್ದು, ಪ್ರತಿ ಮನುಷ್ಯರು ಸಹ ಜೀವನದಲ್ಲಿ, ಬದುಕಿನಲ್ಲಿ ಶಾಂತತೆ ಕಂಡುಕೊಳ್ಳುವ ಮಹತ್ತರ ಉದ್ದೇಶ ಶ್ರೀಮಠದ್ದಾಗಿದೆ. ಭಕ್ತರ ದೇಣಿಗೆಯಿಂದಲೇ ನಿರ್ಮಾಣಗೊಂಡಿರುವ ಈ ಮಠ ಬಡ ಮಕ್ಕಳನ್ನು ಗಮನದಲ್ಲಿಟ್ಟುಕೊಂಡು ಅವರಿಗೆ ಉನ್ನತ, ಗುಣ ಮಟ್ಟದ ಶಿಕ್ಷಣವನ್ನು ನೀಡಿ ಸಮಾಜದ ಮುಖ್ಯವಾಹಿನಿಗೆ ತರುವ ಕೆಲಸವನ್ನು ಸಹ ಮುಂದಿನ ದಿನಗಳಲ್ಲಿ ಮಾಡುತ್ತದೆ ಎಂದರು.
ಕನಕ ಗುರು ಪೀಠ ಒಂದು ಜಾತಿ ಆಥವಾ ಒಂದು ವರ್ಗಕ್ಕೆ ಸೀಮೀತವಾಗಿದ್ದಲ್ಲ. ಯಾರು ಸಮಾಜಮುಖೀಯಾಗಿ, ಶೋಷಣೆಗೆ ಒಳಗಾಗಿದ್ದಾರೆಯೋ, ಯಾರು ಶೈಕ್ಷಣಿಕ, ಧಾರ್ಮಿಕವಾಗಿ ದೂರವಿದ್ದಾರೆಯೋ ಅಂಥ ವರ್ಗವನ್ನು ಗಮನದಲ್ಲಿಟ್ಟುಕೊಂಡು ಅವರಿಗೆ ಶಿಕ್ಷಣ, ಧಾರ್ಮಿಕ ಸಂಸ್ಕಾರ ಕೊಡುವ ನಿಟ್ಟಿನಲ್ಲಿ ಶ್ರೀಮಠ ಸದಾ ಚಿಂತನೆ ಮಾಡುತ್ತದೆ. ನಮ್ಮ ಮಠದ ಪರಿಕಲ್ಪನೆ ಯಾವತ್ತೂ ಸಹ ಒಂದು ಜಾತಿಗೆ ಸೀಮೀತವಾಗಿರುವುದಿಲ್ಲ.
•ನಿರಂಜನಾನಂದಪುರಿ ಶ್ರೀ,
ಕನಕ ಗುರುಪೀಠ.
ವಿಶ್ವನಾಥ ಹಳ್ಳಿಗುಡಿ