Advertisement

ಜಿಟಿಟಿಸಿ ತರಬೇತಿ ಕೇಂದ್ರ ಮಂಜೂರು

11:09 AM Jul 14, 2019 | Naveen |

ಹೂವಿನಹಡಗಲಿ: ಈ ಭಾಗದ ಬಡವರಿಗೆ, ರೈತರ ಮಕ್ಕಳಿಗೆ ಅನುಕೂಲವಾಗಲು ಜಿಟಿಟಿಸಿ ತರಬೇತಿ ಕೇಂದ್ರವನ್ನು ಮಂಜೂರು ಮಾಡಲಾಗಿದ್ದು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ರಾಜ್ಯ ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಸಚಿವ ಪಿ.ಟಿ. ಪರಮೇಶ್ವರನಾಯ್ಕ ಹೇಳಿದರು.

Advertisement

ಪಟ್ಟಣದಲ್ಲಿ ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಸರ್ಕಾರಿ ಉಪಕರಣಗಾರ ಮತ್ತು ತರಬೇತಿ ಕೇಂದ್ರ ಕೌಶಲ್ಯಾಭಿವೃದ್ಧಿ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಅಂದಾಜು 27.50 ಕೋಟಿ ರೂ. ವೆಚ್ಚದಲ್ಲಿ ತರಬೇತಿ ಕೇಂದ್ರ ಮಂಜೂರು ಮಾಡಲಾಗಿದ್ದು ಎಸ್‌ಎಸ್‌ಎಲ್ಸಿ, ಪಿಯುಸಿ, ಡಿಪ್ಲೋಮಾ ಇತರೆ ವಿದ್ಯಾವಂತ ಯುವಕರಿಗೆ ಇದರ ಅವಶ್ಯಕತೆ ಇದೆ. ಅಲ್ಲದೆ ಈ ಭಾಗದಲ್ಲಿನ ನಿರುದ್ಯೋಗ ಸಮಸ್ಯೆ ನಿವಾರಣೆಗೆ ಅನುಕೂಲವಾಗುತ್ತದೆ ಎಂದರು.

ಪ್ರಸ್ತುತ ಕೇಂದ್ರ ಪ್ರಾರಂಭ ಮಾಡಲು ಸರ್ಕಾರಿ ಐಟಿಐ ಕಾಲೇಜಿನ ಸುಮಾರು 14 ಎಕರೆ ಜಮೀನು ಇದ್ದು ಅಲ್ಲಿ ಎಲ್ಲ ಅನುಕೂಲ ಕಲ್ಪಿಸುವಂಥ ಕಟ್ಟಡ ನಿರ್ಮಿಸಲಾಗುವುದು. ಈ ಕಾಮಗಾರಿ ಪೂರ್ಣಗೊಳ್ಳುವವರೆಗೆ ಮಿನಿ ವಿಧಾನಸೌಧದ ಹಳೇ ಕಟ್ಟಡದಲ್ಲಿ ತರಬೇತಿ ಕೇಂದ್ರ ನಡೆಸಲಾಗುವುದು ಎಂದರು.

ಇನ್ನು ಈ ಭಾಗದಲ್ಲಿ ಲಂಬಾಣಿ ಸಮುದಾಯ ಒಳಗೊಂಡಂತೆ ಬಹುತೇಕ ಗ್ರಾಮೀಣ ಭಾಗದ ಜನ ಉದ್ಯೋಗ ಅರಸಿ ಕಾಫಿ ಸೀಮೆಗೆ ಹೋಗುತ್ತಿರುತ್ತಾರೆ. ಇದನ್ನು ತಡೆಯಲು ಸುಮಾರು 70-80 ಲಕ್ಷ ರೂ. ವೆಚ್ಚದಲ್ಲಿ ಕಸೂತಿ ಕೇಂದ್ರ ಪ್ರಾರಂಭಿಸಲಾಗುವುದು. ತರಬೇತಿ ಸಮಯದಲ್ಲಿ 5000ರೂ. ತರಬೇತಿ ಭತ್ತೆ ನೀಡಲಾಗುವುದು. ಇದಕ್ಕಾಗಿ ಈಗಾಗಲೇ ತಾಲೂಕಿನ ಸುಮಾರು 8 ತಾಂಡಾಗಳಿಂದ 387 ಆಸಕ್ತರನ್ನು ಆಯ್ಕೆ ಮಾಡಿಕೊಳ್ಳಲಾಗಿದೆ ಎಂದರು.

Advertisement

ಕಾರ್ಯಕ್ರಮದಲ್ಲಿ ಕ್ಷೇತ್ರದ ಮಾಜಿ ಶಾಸಕ ನಂದಿಹಳ್ಳಿ ಹಾಲಪ್ಪ, ಮುಖಂಡರುಗಳಾದ ಐಗೊಳ್‌ ಚಿದಾನಂದ್‌, ವಾರದ ಗೌಸು ಮೊಹದ್ದಿನ್‌, ಅಟವಾಳಗಿ ಕೊಟ್ರೇಶ್‌ ಅರವಳ್ಳಿ ವೀರಣ್ಣ, ಬಿ.ಹನುಮಂತಪ್ಪ, ಜ್ಯೋತಿ ಮಲ್ಲಣ್ಣ, ತಾಪಂ ಅಧ್ಯಕ್ಷೆ ಕೆ. ಶಾರದಮ್ಮ, ಜಿಪಂ ಸದಸ್ಯೆ ವೀಣಾ ಪರಮೇಶ್ವರಪ್ಪ, ಎಸ್‌.ಎಂ. ಲಲಿತಾಬಾಯಿ ಸೋಮ್ಯಾನಾಯ್ಕ, ತಾಪಂ ಉಪಾಧ್ಯಕ್ಷೆ ಪುಷ್ಪಾವತಿ, ಜಿಟಿಟಿಸಿ ವ್ಯವಸ್ಥಾಪಕ ನಿರ್ದೇಶಕ ಎಚ್. ರಾಘವೇಂದ್ರ, ಜಿಲ್ಲಾ ಬಿಸಿಎಂ ಅಧಿಕಾರಿ ರಾಜಣ್ಣ, ತಹಶೀಲ್ದಾರ್‌ ಕೆ. ರಾಘವೇಂದ್ರರಾವ್‌, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಯು.ಎಚ್. ಸೋಮಶೇಖರ್‌ ಮುಂತಾದವರು ಇದ್ದರು.

ಜಿಟಿಟಿಸಿ ಕಾಲೇಜು ಪ್ರಾಚಾರ್ಯ ಪುಂಡಲೀಕಾಕ್ಷ ಸ್ವಾಗತಿಸಿದರು. ವಿದ್ಯಾರ್ಥಿಗಳು ಪ್ರಾರ್ಥಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next