ಲಕ್ಷ್ಮೇಶ್ವರ: ಸಮೀಪದ ಹೂವಿನ ಶಿಗ್ಲಿಯಲ್ಲಿ ಜ. 13ರಿಂದ 15ರ ವರೆಗೆ ನಾಡಿನ ಹರಗುರು ಚರಮೂರ್ತಿಗಳ ಸಮ್ಮುಖದಲ್ಲಿ ಅನ್ನದಾಸೋಹ, ಜ್ಞಾನ ದಾಸೋಹದ ಜಾತ್ರಾ ಮಹೋತ್ಸವ ಮತ್ತು ಲಿಂ| ಶ್ರೀಗಳ ಪುಣ್ಯಸ್ಮರಣೋತ್ಸವ ಆಚರಿಸಲಾಗುತ್ತಿದೆ. “ಖಡಕ್ ರೊಟ್ಟಿ ಮತ್ತು ಕರಿಂಡಿ’ ಪ್ರಸಾದವೇ ಈ ಜಾತ್ರೆ ವೈಶಿಷ್ಟ್ಯವಾಗಿದೆ.
ಜಾತ್ರೆಗೆ ಹೂವಿನ ಶಿಗ್ಲಿ ಸೇರಿ ಸುತ್ತಮುತ್ತಲಿನ ಗ್ರಾಮಗಳ ಭಕ್ತರು ಶ್ರೀಮಠಕ್ಕೆ ರೊಟ್ಟಿ ಸೇರಿ ಇತರೆ ಆಹಾರ ಧಾನ್ಯಗಳನ್ನು ಸಮರ್ಪಿಸುತ್ತಾರೆ. ಹೂವಿನ ಶಿಗ್ಲಿಯ ವಿರಕ್ತಮಠದ 44ನೇ ಜಾತ್ರಾ ಮಹೋತ್ಸವ, ಲಿಂ| ನಿರಂಜನ ಸ್ವಾಮಿಗಳ 13ನೇ ಪುಣ್ಯ ಸ್ಮರಣೋತ್ಸವ ನಿಮಿತ್ತ ಪುರಾಣ ಪ್ರವಚನ, ಲಿಂಗದೀಕ್ಷೆ, ಸಾಮೂಹಿಕ ವಿವಾಹ, ತುಲಾಭಾರ ಸೇವೆ ಸೇರಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿವೆ.
ಮಠದ ಇತಿಹಾಸ: ಲಿಂ| ನಿರಂಜನ ಸ್ವಾಮಿಗಳು ಬಸವನಾಡು ಬೀದರ ಜಿಲ್ಲೆ ಔರಾದ್ ತಾಲೂಕಿನ ಸೋನಾಳ ಗ್ರಾಮದಿಂದ 1996ರಲ್ಲಿ ಮುಕ್ತಿಮಂದಿರ ಧರ್ಮಕ್ಷೇತ್ರಕ್ಕೆ ಆಗಮಿಸಿದ್ದರು. ಈ ವೇಳೆ ಅವರಿಗೆ ಸ್ವಪ್ನವೊಂದು ಬಿದ್ದು ಹೂವಿನ ಶಿಗ್ಲಿಯಲ್ಲಿನ ಪಾಳು ಬಿದ್ದಿರುವ ಮಠವನ್ನು ಉದ್ಧರಿಸು ಎಂಬ ವಾಣಿಯನ್ವಯ ಇಲ್ಲಿಗೆ ಆಗಮಿಸಿದ್ದರು. ಕಲ್ಲು ಮುಳ್ಳುಗಳಿಂದ ಕೂಡಿದ ಪೂಜೆ ಪುನಸ್ಕಾರಗಳಿಲ್ಲದ ಕೇವಲ ಎರಡಂಕಣದ ಶಿಥಿಲಾವಸ್ಥೆಯ ಗುಡಿಯಲ್ಲಿ ನೆಲೆನಿಂತ ಶ್ರೀಗಳು ತಮ್ಮ ಸಂಕಲ್ಪ ಶಕ್ತಿಯಿಂದ ಪಾಳುಬಿದ್ದ ಮಠವನ್ನು ಜೀರ್ಣೋದ್ದಾರಗೊಳಿಸಿದರು. ಈ ಕ್ಷೇತ್ರದಲ್ಲಿ ನಿತ್ಯ ಧರ್ಮ, ಸಂಸ್ಕೃತಿ, ಸಾಹಿತ್ಯ, ಶಿಕ್ಷಣ, ಪೂಜೆ, ಬಸವತತ್ವ ಪ್ರಚಾರ, ಯೋಗ, ಆಯುರ್ವೇದ ಶಾಸ್ತ್ರಗಳ ಮೂಲಕ ಕ್ಷೇತ್ರವನ್ನು ಬೆಳೆಸಿದರು. ಆಯುರ್ವೇದ ಔಷಧಿ ಸಿದ್ಧಪಡಿಸಿ ಮಾರಕ ರೋಗಗಳಿಗೆ ದಿವ್ಯ ಔಷಧಿ ನೀಡಿ ರೋಗಿಗಳ ಪಾಲಿಗೆ ಸಂಜೀವಿನಿಯಾಗಿದ್ದರು.
ತುಮಕೂರಿನ ಸಿದ್ಧಗಂಗಾಮಠದ ಶಿವಕುಮಾರ ಸ್ವಾಮಿಗಳ ನೆಚ್ಚಿನ ಶಿಷ್ಯರಾಗಿದ್ದ ಲಿಂ| ನಿರಂಜನ ಶ್ರೀಗಳು ಅವರಂತೆ ಗ್ರಾಮೀಣ ಪ್ರದೇಶಗಳ ಬಡ, ಅನಾಥ ಮಕ್ಕಳಿಗೆ ತ್ರಿವಿಧ ದಾಸೋಹ ಸೇವೆ ಮೂಲಕ ಗುರುಕುಲ ಶಿಕ್ಷಣ ಆರಂಭಿಸಿ ಬಡ ಮಕ್ಕಳ ಆಶಾಕಿರಣವೇ ಆಗಿದ್ದರು. ಹೂವಿನ ಶಿಗ್ಲಿ ಅಷ್ಟೇ ಅಲ್ಲದೆ ಹುಟ್ಟೂರು ಸೋನಾಳ, ಆಂಧ್ರದ ನಾಗನೂರ, ಶಿರಹಟ್ಟಿ ತಾಲೂಕಿನ ಕೊಂಚಿಗೇರಿ, ಹಾವೇರಿ ತಾಲೂಕಿನ ಸೋಮನಕಟ್ಟಿಯಲ್ಲಿ ಶಾಖಾಮಠ ಸ್ಥಾಪಿಸಿ ಎಲ್ಲೆಡೆ ಸಮಾಜಮುಖೀ ಕಾರ್ಯಗಳು ನಿರ್ವಿಘ್ನವಾಗಿ ನಡೆಯುವಂತೆ ಮಾಡಿ ನಾಡಿನೆಲ್ಲೆಡೆ ಹೆಸರಾದರು. ಪ್ರತಿವರ್ಷ ಮಕರ ಸಂಕ್ರಮಣ ಕಾಲದಲ್ಲಿ ನಾಡಿನ ಹರಗುರುಚರ ಮೂರ್ತಿಗಳ ಸಮ್ಮುಖದಲ್ಲಿ ಕ್ಷೇತ್ರದಲ್ಲಿ ಜಾತ್ರಾಮಹೋತ್ಸವ ನಿಮಿತ್ತ ವಿವಿಧ ಸಾಮಾಜಿಕ, ಧಾರ್ಮಿಕ, ಸಾಂಪ್ರದಾಯಿಕ ಹಬ್ಬಗಳನ್ನು ಆಚರಿಸುತ್ತಿದ್ದರು.
ನಿರಂಜನ ಸ್ವಾಮಿಗಳು 2011ರಲ್ಲಿ ಲಿಂಗೈಕ್ಯರಾದ ಬಳಿಕ ಶ್ರೀಮಠದ ಸಂಪೂರ್ಣ ಜವಾಬ್ದಾರಿ ಹೊತ್ತ ಹಾವೇರಿ ತಾಲೂಕಿನ ಮರೋಳ ಗ್ರಾಮದ ಚನ್ನವೀರ ಶ್ರೀಗಳು ಶ್ರೀಮಠ ಮತ್ತು ಗುರುಕುಲವನ್ನು ಅತ್ಯಂತ ಯಶಸ್ವಿಯಾಗಿ ಮುನ್ನಡೆಸಿಕೊಂಡು ಹೋಗುತ್ತಿದ್ದಾರೆ. ಈಗ ಗುರುಕುಲದಲ್ಲಿ ಬಡ, ಅನಾಥರು ಸೇರಿ 400ಕ್ಕೂ ಹೆಚ್ಚು ಮಕ್ಕಳು ಓದುತ್ತಿದ್ದು, ಅವರಿಗೆ ಶಿಕ್ಷಣದ ಜತೆಗೆ ಧರ್ಮ, ಸಂಸ್ಕೃತಿ, ಸಂಸ್ಕಾರ ಮತ್ತು ವೇದಾಧ್ಯಯನ ನೀಡಿ ಲಿಂ| ಶ್ರೀಗಳ ಮಾರ್ಗದಲ್ಲಿ
ಮಠವನ್ನು ವಿಶಿಷ್ಟ ಜಾಗೃತ ಕೇಂದ್ರವನ್ನಾಗಿಸುವತ್ತ ಸಾಗಿದ್ದಾರೆ. ಅವರು ತಮ್ಮ ಪ್ರವಚನದ ಮೂಲಕ ನಾಡಿನಾದ್ಯಂತ ಭಕ್ತ ಸಂಕುಲದ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ನಿತ್ಯ ನೂರಾರು ವಿದ್ಯಾರ್ಥಿಗಳಿಗೆ ಅನ್ನದಾಸೋಹದ ಜತೆ ಶಿಕ್ಷಣ ದಾಸೋಹ ಸಾಂಗವಾಗಿ ಸಾಗುವಲ್ಲಿ ಶ್ರೀಗಳ ಆಣತಿಯಂತೆ ನಡೆದು ಸಹಾಯ-ಸಹಕಾರ ನೀಡುತ್ತಾ ಬಂದಿರುವ ಗ್ರಾಮಸ್ಥರ ಮತ್ತು ಭಕ್ತರ ಸೇವಾ ಕಾರ್ಯವೂ ಅಷ್ಟೇ ಪ್ರಸಂಶನೀಯಯವಾಗಿದೆ.
*ಮುಕ್ತಾ ಆದಿ