ಕುಣಿಗಲ್: ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಡಾ. ಕೆ.ವಂಶಿಕೃಷ್ಣ ಅವರ ಪೊಲೀಸ್ ತಂಡವು ಪ್ರಸಿದ್ಧ ನಾಡ ಪ್ರಭು ಕೆಂಪೇಗೌಡ ಆಳ್ವಿಕೆಯ ಹುತ್ರಿದುರ್ಗ ಬೆಟ್ಟದಲ್ಲಿ ಚಾರಣ ನಡೆಸಿ ಬೆಟ್ಟದ ಅವರಣವನ್ನು ಸ್ವಚ್ಛಗೊಳಿಸಿದರು.
ಪಿಟ್‌ನೆಸ್ ಹಾಗೂ ದೈಹಿಕ ಚೈತನ್ಯ ಹೆಚ್ಚಿಸಿಕೊಳ್ಳುವ ನಿಟ್ಟಿನಲ್ಲಿ ತಿಂಗಳಿಗೊಮ್ಮೆ ಟ್ರಕಿಂಗ್ ಹಮ್ಮಿಕೊಳ್ಳುವ ಜಿಲ್ಲಾ ಪೋಲಿಸರು ಇದೇ ವೇಳೆ ಪ್ಲಾಸ್ಟಿಕ್ ಸ್ವತ್ಛಗೊಳಿಸುವ ಮೂಲಕ ಪರಿಸರ ಕಾಳಜಿ ಮೆರೆದಿರುವುದು ಸಾರ್ವಜನಿಕರ ಪ್ರಶಂಸೆಗೆ ಕಾರಣವಾಗಿದೆ.
ತ್ಯಾಜ್ಯ ಸಂಗ್ರಹ ಸ್ವಚ್ಛತೆ: ಹೌದು ತುಮಕೂರು ಜಿಲ್ಲಾ ಪೊಲೀಸರು ತಿಂಗಳಿಗೊಮ್ಮೆ ಜಿಲ್ಲೆಯ ಪ್ರಸಿದ್ಧ ಪ್ರವಾಸಿ ತಾಣಗಳಿಗೆ ಟ್ರಕಿಂಗ್ ಕೈಗೊಂಡಿದ್ದು, ಈಸಂಬಂಧ ಭಾನುವಾರ ಕುಣಿಗಲ್ ತಾಲೂಕಿನ ನಾಡಪ್ರಭು ಕೆಂಪೇಗೌಡ ಆಳ್ವಿಕೆಯ ಇತಿಹಾಸ ಪ್ರಸಿದ್ಧ ಹುತ್ರಿದುರ್ಗ ಬೆಟ್ಟಕ್ಕೆ ಜಿಲ್ಲಾ ಪೋಲಿಸ್ ಸಿಬ್ಬಂದಿ ಟ್ರಕಿಂಗ್ ಹಮ್ಮಿಕೊಂಡಿದ್ದರು. ಟ್ರಕಿಂಗ್ ಮಾತ್ರ ನಡೆಸದೇ ಟ್ರಕಿಂಗ್ ನಡೆಸುವ ದಾರಿಯಲ್ಲಿ ಪ್ರವಾಸಿಗರು ಬೀಸಾಡಿ ಹೋಗಿದ್ದ ಪ್ಲಾಸ್ಟಿಕ್ ತ್ಯಾಜ್ಯವನ್ನು ಸಂಗ್ರಹಿಸಿ ಸ್ವಚ್ಛಗೊಳಿಸಿದರು.
ಇದರ ಜೊತೆಗೆ ಕುಣಿಗಲ್, ಅಮೃತೂರು, ಹುಲಿಯೂರುದುರ್ಗ, ತುರುವೇಕೆರೆ, ದಂಡಿನಶಿರಾಪೊಲೀಸ್ ಠಾಣಾ ಸಿಬ್ಬಂದಿ ಹಾಗೂ 80 ಮಹಿಳಾ ಪೊಲೀಸ್ ತರಬೇತಿದಾರರು ಸೇರಿದಂತೆ 200 ಕ್ಕೂಅಧಿಕ ಮಂದಿ ಭಾಗವಹಿಸಿದರು, ಇದಕ್ಕೆ ಉಪವಿಭಾಗದ ಸಿಪಿಐಗಳಾದ ಗುರುಪ್ರಸಾದ್, ನವೀನ್, ಪಿಎಸ್‌ಐಗಳಾದ ಎಸ್.ವಿಕಾಸ್‌ಗೌಡ, ವೆಂಕಟೇಶ್,ಬಿ.ಪಿ.ಮಂಜು, ಪ್ರೀತಮ್ ಸಾಥ್ ನೀಡಿದರು.
ಬೆಟ್ಟ ಹತ್ತುವಾಗ ದಾರಿಯಲ್ಲಿ ಸಿಕ್ಕ ಪ್ಲಾಸ್ಟಿಕ್ ತ್ಯಾಜ್ಯದ ಜತೆಗೆ ಕಸವನ್ನು ಸಹ ಸಂಗ್ರಹ ಮಾಡಿಕೊಂಡು ಚೀಲದಲ್ಲಿ ತುಂಬಿಕೊಂಡು ತ್ಯಾಜ್ಯ ವಿಲೇವಾರಿ ಘಟಕಕ್ಕೆ ಕಳಹಿಸಿಕೊಟ್ಟರು. ಪೊಲೀಸರ ಕಾರ್ಯಕ್ಕೆ ಜನರು ಮೆಚ್ಚುಗೆ ವ್ಯಕ್ತಪಡಿಸಿದರು. ಎಸ್ಪಿ ಡಾ.ಕೆ.ವಂಶಿಕೃಷ್ಣ ಮಾತನಾಡಿ, ಬೆಟ್ಟಗುಡ್ಡಗಳು, ಮರಗಿಡಗಳು, ಮೋಡವನ್ನು ತಡೆದು ಮಳೆ ಸುರಿಸಿ, ಪರಿಸರ ಸಂರಕ್ಷಿಸಿಮಾನವನು ಸೇರಿದಂತೆ ಪಕ್ಷಿ ಪ್ರಾಣಿಗಳಿಗೆಅಗತ್ಯವಿರುವ ಎಲ್ಲಾ ಸೌಲಭ್ಯಗಳು ನೀಡುತ್ತಿವೆ. ಈಸ್ಥಳಗಳಲ್ಲಿ ಪ್ಲಾಸ್ಟಿಕ್ ಘನ ತಾಜ್ಯ ವಸ್ತುಗಳು ಹಾಗೂ ಮಧ್ಯಪಾನ ಸೇವನೆ ನಿಷೇಧಿಸಿದೆ. ಇದು ಕಾನೂನಿಗೆವಿರುದ್ಧವಾಗಿದೆ ಇದನ್ನು ಉಲ್ಲಂಘನೆ ಮಾಡುವ ವ್ಯಕ್ತಿಗಳಿಗೆ ಶಿಕ್ಷೆ ವಿಧಿಸಲು ಕಾನೂನಿನಲ್ಲಿ ಅವಕಾಶವಿದೆ ಎಂದು ಎಚ್ಚರಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಕೆ. ವಂಶಿಕೃಷ್ಣ, ಎಎಸ್‌ಪಿ ಉದ್ದೇಶ ಅವರ ನೇತೃತ್ವದಲ್ಲಿ ಪ್ರೋಬೆಷನರಿ ಐಪಿಎಸ್ ಅಧಿಕಾರಿ ಕನ್ನಿಕಾ ಸಗರವಾಲ್, ಕುಣಿಗಲ್ ಡಿವೈಎಸ್‌ಪಿ ಜಗದೀಶ್ ಟ್ರಕ್ಕಿಂಗ್ ಹೋಗಿದ್ದರು.