ಸೆಲ್ಫಿಯಿಂದಲೇ ತಮ್ಮ ಸೌಂದರ್ಯವನ್ನು ಪದೇಪದೆ ಪರೀಕ್ಷಿಸಿಕೊಳ್ಳುತ್ತಾ, ಹಿಂದಿನ ಮುಖಭಾವಗಳಿಗೆ ಹೋಲಿಸಿಕೊಳ್ಳುತ್ತಾ, ಸೌಂದರ್ಯವನ್ನು ಎಲ್ಲರೆದುರು ಪ್ರದರ್ಶಿಸಿಕೊಳ್ಳುವ ಗೀಳು ಅನೇಕ ಹುಡುಗಿಯರಿಗೆ ಇರುತ್ತೆ. ಅಂಥವರಿಗೆಲ್ಲ ಸೆಲ್ಫಿ ಎಲ್ಬೋ ಸಾಮಾನ್ಯವಾಗಿ ಕಾಡುವ ಸಮಸ್ಯೆ…
ತೂಕದ ಬ್ಯಾಟ್ ಹಿಡಿದ ಸಚಿನ್ ತೆಂಡೂಲ್ಕರ್ ಕೈಗೆ ಟೆನಿಸ್ ಎಲ್ಬೋ ಬಂದ ಕತೆ ಹಳತು. ಸಾನಿಯಾ ಮಿರ್ಜಾಗೆ ಟೆನಿಸ್ ರಾಕೆಟ್ ಹಿಡಿದು, ಆಕೆಗೂ ಟೆನಿಸ್ ಎಲ್ಬೋ ಬಂದಿದ್ದು ಒಂದೆರಡು ವರುಷದ ಕೆಳಗೆ. ಕ್ರೀಡಾಪಟುಗಳಿಗೆ ಸಾಮಾನ್ಯವಾಗಿ ಕೈ ಗಂಟುಗಳಲ್ಲಿ ಕಾಣಿಸುವ ಈ ನೋವನ್ನು, ಆ ಜಾಗದ ಹೆಸರನ್ನೇ ಆಧರಿಸಿ “ಎಲ್ಬೋ’ ಎಂದು ಕರೆಯುವುದು ಗೊತ್ತೇ ಇದೆ. ಆದರೆ, ಈಗ ಎಲ್ಬೋ ಸಮಸ್ಯೆ ಕ್ರೀಡಾಪಟುಗಳಿಗಷ್ಟೇ ಕಾಡುವುದಿಲ್ಲ.
ಸೆಲ್ಫಿ ಸೆಲ್ಫಿ ಎಂದು ಕ್ಯಾಮೆರಾ ಹಿಡಿದು ಫಳಫಳನೆ ಫ್ಲ್ಯಾಷ್ ಬೀರುವವವರಿಗೂ ಎಲ್ಬೋ ಕಾಡುತ್ತಿದೆ. ಅದರ ಹೆಸರೇ ಸೆಲ್ಫಿ ಎಲ್ಬೋ! ಅದರಲ್ಲೂ ಅನೇಕ ಯುವತಿಯರ ಕೈಗಳಲ್ಲಿ “ಸೆಲ್ಫಿ ಎಲ್ಬೋ’ ಸದ್ದಿಲ್ಲದೇ ತಂಟೆ ಮಾಡುತ್ತಿದೆ. ಈ ಸೆಲ್ಫಿ ಎಲ್ಬೋ, ಸ್ಮಾರ್ಟ್‌ಫೋನುಗಳ “ಕೃಪೆ’. ಸೆಲ್ಫಿಗಾಗಿ ಕೈ ಚಾಚುವುದು, ಬೇರೆ ಬೇರೆ ದಿಕ್ಕಿಗೆ ಕೈಯನ್ನು ಬಾಗಿಸುವಾಗ ಕೈ ಮೂಳೆಯ ಸಂದುಗಳಲ್ಲಿ ನೋವು ಕಾಣಿಸಿಕೊಳ್ಳುತ್ತದೆ.
ವಿಶೇಷವಾಗಿ, ಮುಂದೋಳು ಸಂದಿಸುವ ಜಾಗದಲ್ಲಿ “ಸೆಲ್ಫಿ ಎಲ್ಬೋ’ ಕಾಣಿಸುತ್ತದೆ. ಸ್ನಾಯುವಿಗೂ, ಮಾಂಸಖಂಡವನ್ನು ಮೂಳೆಗೆ ಬಂಧಿಸುವ ಗಟ್ಟಿಯಾದ ತಂತು ನಡುವೆ ಒತ್ತಡ ಬೀಳುತ್ತದೆ. ಕೈಯನ್ನು ಹಿಂದೆ ಮುಂದೆ ಮಾಡಿದಾಗಲೆಲ್ಲ ಈ ನೋವು ಜಾಸ್ತಿಯಾಗುತ್ತಲೇ ಇರುತ್ತೆ. ಸೆಲ್ಫಿ ಗೀಳಿಗೆ ಒಳಗಾಗುವವರು ಪುರುಷರಿಗಿಂತ ಮಹಿಳೆಯರೇ ಹೆಚ್ಚು ಎಂಬುದನ್ನು ಹಲವು ವರದಿಗಳು ಹೇಳಿವೆ.
ಸೆಲ್ಫಿಯಿಂದಲೇ ತಮ್ಮ ಸೌಂದರ್ಯವನ್ನು ಪದೇಪದೆ ಪರೀಕ್ಷಿಸಿಕೊಳ್ಳುತ್ತಾ, ಹಿಂದಿನ ಮುಖಭಾವಗಳಿಗೆ ಹೋಲಿಸಿಕೊಳ್ಳುತ್ತಾ, ಸೌಂದರ್ಯವನ್ನು ಎಲ್ಲರೆದುರು ಪ್ರದರ್ಶಿಸಿಕೊಳ್ಳುವ ಗೀಳು ಅನೇಕ ಹುಡುಗಿಯರಿಗೆ ಇರುತ್ತೆ. ಅಂಥವರು ಸೆಲ್ಫಿ ಸಂಖ್ಯೆಗೆ ನಿಯಂತ್ರಣ ಹೇರುವುದು ಉತ್ತಮ. ಅಂದಹಾಗೆ, ಈ ಸೆಲ್ಪಿ ಎಲ್ಬೋ ಎಲ್ಲರಿಗೂ ಬರುವುದಿಲ್ಲ.
ಯಾರಿಗೆ ಸೆಲ್ಫಿ ತೆಗೆಯುವುದೇ ಗೀಳಾಗಿರುತ್ತದೋ, ಯಾರು ಸ್ಟೈಲಿಷ್ ಸೆಲ್ಫಿಗೆ ಸದಾ ಹಾತೊರೆಯುತ್ತಿರುತ್ತಾರೋ, ಅಂಥವರಿಗೆ ಸೆಲ್ಫಿ ಎಲ್ಬೋ ಸಾಮಾನ್ಯ ಶತ್ರು. ಕೇವಲ ಸೆಲ್ಫಿ ಅಲ್ಲದೇ, ನಿರಂತರವಾಗಿ ಸ್ಮಾರ್ಟ್‌ಫೋನಿನಲ್ಲಿ ಮೆಸೇಜನ್ನು ಟೈಪಿಸುವವರು, ಗೇಮ್ ಆಡುವವರ ಎಲ್ಬೋ ಸ್ನಾಯುಗಳು ಆಯಾಸಗೊಳ್ಳುತ್ತವೆ. ಅಂಥವರಿಗೂ ಈ ಸೆಲ್ಫಿ ಎಲ್ಬೋ ಕಾಡುವ ಅಪಾಯವಿರುತ್ತದೆ.
ಸೆಲ್ಫಿ ತೆಗೆಯಿರಿ. ಬೇಡ ಎನ್ನುವುದಿಲ್ಲ. ಆದರೆ, ಹಾಗೆ ತೆಗೆಯುವಾಗ ಮುಂದೋಳು ಸಂದಿಸುವ ಸ್ನಾಯುಗಳಿಗೆ ಆಯಾಸವಾಗುತ್ತಿದೆಯಾ, ಆ ಭಾಗದಲ್ಲಿ ನಿರಂತರವಾಗಿ ನೋವು ಕಾಣಿಸಿಕೊಳ್ಳುತ್ತಿದೆಯಾ ಎಂಬುದನ್ನು ಗಮನಿಸಿ. ಹಾಗೇನಾದರೂ ನೋವಿದ್ದರೆ, ಅದೇ ಸೆಲ್ಫಿ ಎಲ್ಬೋ. ಸಮೀಪದ ಮೂಳೆ ತಜ್ಞರನ್ನು ಆದಷ್ಟು ಬೇಗ ಸಂಪರ್ಕಿಸುವುದು ಉತ್ತಮ.