Advertisement

ಮತ್ತೂಮ್ಮೆ ಬಾಲ ಬಿಚ್ಚಿದ್ರೆ ಹುಷಾರ್‌!

06:16 PM Sep 13, 2018 | Team Udayavani |

ಕಲಬುರಗಿ: ಏನೋ ನೀನು ರೌಡಿನಾ? ಕೈಯಲ್ಲಿ ಖಡ್ಗ ಯಾಕೋ ಬೇಕು ನಿನಗೆ? ಇದೇನು ಇಷ್ಟುದ್ದ ಕೂದಲು? ಬಾರೋ ಇಲ್ಲಿ, ಮತ್ತೂಮ್ಮೆ ಬಾಲ ಬಿಚ್ಚಿದ್ರೆ ಹುಷಾರ್‌ಎಂದು ನಗರದ ರೌಡಿಗಳಿಗೆ ಬುಧವಾರ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಎನ್‌. ಶಶಿಕುಮಾರ್‌ ನೇತೃತ್ವದಲ್ಲಿ ಪೊಲೀಸರು ಕ್ಲಾಸ್‌ ತೆಗೆದುಕೊಂಡರು.

Advertisement

ನಗರದ ಜಿಲ್ಲಾ ಪೊಲೀಸ್‌ ಮೈದಾನದಲ್ಲಿ ಸೆ.13ರಂದು ಗೌರಿ-ಗಣೇಶ, ಸೆ.21ರಂದು ಮೋಹರಂ ಹಬ್ಬ ಆಚರಿಸುತ್ತಿರುವ ಹಿನ್ನೆಲೆಯಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಪೊಲೀಸರು ರೌಡಿಗಳ ಪರೇಡ್‌ ನಡೆಸಿ, ಸಮಾಜದ ಶಾಂತಿ
ಕದಡಿದರೆ ಪರಿಣಾಮ ನೆಟ್ಟಗಿರಲ್ಲ. ಕುಕೃತ್ಯಗಳಲ್ಲಿ ತೊಡಗಿದರೆ ಸುಮ್ಮನಿರೋದಿಲ್ಲ ಎಂದು ಎಚ್ಚರಿಸಿದರು.

ಇದಕ್ಕೂ ಮುನ್ನ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಸ್‌ಪಿ ಎನ್‌. ಶಶಿಕುಮಾರ, ಸದ್ಯ ಜಿಲ್ಲೆಯಲ್ಲಿ 3,800 ರೌಡಿಗಳಿದ್ದು, ಗೌರಿ ಗಣೇಶ ಹಾಗೂ ಮೋಹರಂ ಹಬ್ಬಗಳ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಜಿಲ್ಲೆ ಹಾಗೂ ತಾಲೂಕುಗಳಲ್ಲಿ 1,000 ರೌಡಿಗಳ ಪರೇಡ್‌ ನಡೆಸಲಾಯಿತು ಎಂದರು.
 
ಗ್ರಾಮೀಣ, ವಿಶ್ವವಿದ್ಯಾಲಯ, ರಾಘವೇಂದ್ರ ನಗರ, ಸ್ಟೇಷನ್‌ ಬಜಾರ್‌ ಪೊಲೀಸ್‌ ಠಾಣೆಗಳ ವ್ಯಾಪ್ತಿಯ ಸುಮಾರು 400 ರೌಡಿಗಳ ಪರೇಡ್‌ ಮಾಡಲಾಯಿತು. ಕಳೆದ ವರ್ಷ ಅನಾರೋಗ್ಯ, ಸನ್ನಡತೆ, ವಯಸ್ಸಾದವರು, ದೈಹಿಕ ಅಸಾಮರ್ಥ್ಯರು, ಜೀವಂತ ಇಲ್ಲದ 42 ರೌಡಿಗಳನ್ನು ಗುರುತಿಸಿ ರೌಡಿಶೀಟರ್‌ ಪಟ್ಟಿಯಿಂದ ಕೈಬಿಡಲಾಗಿದೆ
ಎಂದರು. 

ರೌಡಿಗಳಲ್ಲಿ ಮೂರು ಹಂತ: ಕೊಲೆ, ಕೊಲೆಗೆ ಯತ್ನ, ದರೋಡೆ, ಅಪಹರಣ ಮುಂತಾದ ಕೃತ್ಯದಲ್ಲಿ ಭಾಗಿಯಾದವರ ವಿರುದ್ಧ ರೌಡಿಶೀಟರ್‌ ಪಟ್ಟಿ ತೆರೆಯಲಾಗಿದೆ. ಈ ರೌಡಿಗಳನ್ನು ಎ, ಬಿ ಹಾಗೂ ಸಿ ಎಂದು ವರ್ಗೀಕರಿಸಲಾಗಿದೆ. ಎ ಹಂತದಲ್ಲಿ ಸ್ಥಳೀಯ ರೌಡಿಗಳು, ಬಿ ಹಂತದಲ್ಲಿ ಸ್ಥಳೀಯವಾಗಿ ಕೃತ್ಯ ನಡೆಸಿ ಹೊರಗಡೆ ವಾಸವಾಗಿರುವರು. ಸಿ ಹಂತದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ನಿಂದನೆ, ಸಮಾಜದಲ್ಲಿ ಸೌಹಾರ್ದತೆ ಕದಡುವರು, ಶಾಂತಿಗೆ ಭಂಗವುಂಟು
ಮಾಡುವವರು ಎಂದು ವರ್ಗಾಯಿಸಲಾಗಿದೆ. ಎ, ಬಿ ಹಂತದ ರೌಡಿಗಳನ್ನು ರೌಡಿಶೀಟರ್‌ ಪಟ್ಟಿಯಿಂದ ಕೈಬಿಡಲು ಎಸ್‌ಪಿಗೆ ಅವಕಾಶವಿದ್ದರೆ, ಸಿ ಹಂತ ರೌಡಿಗಳನ್ನು ಡಿಎಸ್‌ಪಿಗಳೇ ಕೈಬಿಡಬಹುದು ಎಂದು ಮಾಹಿತಿ ನೀಡಿದರು.

ಎ ಉಪವಿಭಾಗದ ಎಎಸ್‌ಪಿ ಲೋಕೇಶ ಬಿ.ಜೆ., ಪಿಐಗಳಾದ ಪಾಂಡುರಂಗಯ್ಯ, ವಾಜೀದ್‌ ಪಟೇಲ್‌, ಶಕೀಲ್‌ ಅಂಗಡಿ, ಪಿಎಸ್‌ಐಗಳಾದ ಅಕ್ಕಮಹಾದೇವಿ, ಜಗದೇವಪ್ಪ ಪಾಳಾ, ಚಂದ್ರಶೇಖರ ತಿಗಡಿ ಹಾಗೂ ಇತರರಿದ್ದರು. 

Advertisement
Advertisement

Udayavani is now on Telegram. Click here to join our channel and stay updated with the latest news.

Next