Advertisement

ಔಷಧ ಹೊರಗೆ ಮಾರಿದ್ರೆ ಹುಷಾರ್‌..

07:30 AM Feb 03, 2019 | Team Udayavani |

ಬಳ್ಳಾರಿ: ಸರ್ಕಾರದಿಂದ ವಿಮ್ಸ್‌ಗೆ ಪೂರೈಕೆಯಾಗುವ ಔಷಧಗಳು ಅಕ್ರಮವಾಗಿ ಮಾರಾಟವಾಗುತ್ತಿವೆ ಎಂಬ ಮಾಹಿತಿಯಿದೆ. ಅದನ್ನು ತಡೆಗಟ್ಟಲು ಔಷಧಗಳ ಮೇಲೆ ಒಪಿಡಿ ಶೀಲ್‌ ಹಾಕಬೇಕು. ನಾನು ಖಾಸಗಿ ಔಷಧ ಮಳಿಗೆಗಳ ಮೇಲೆ ದಿಢೀರ್‌ ದಾಳಿ ಮಾಡಿದಾಗ ಒಪಿಡಿ ಔಷಧಗಳು ಪತ್ತೆಯಾದರೆ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ವೈದ್ಯಕೀಯ ಶಿಕ್ಷಣ ಸಚಿವ ಈ.ತುಕಾರಾಂ ವಿಮ್ಸ್‌ ವೈದ್ಯಾಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

Advertisement

ನಗರದ ವಿಮ್ಸ್‌ ಆಸ್ಪತ್ರೆಗೆ ಶನಿವಾರ ಭೇಟಿ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಮ್ಸ್‌ ಆಸ್ಪತ್ರೆಗೆ ಸರ್ಕಾರದಿಂದ ಪೂರೈಕೆಯಾಗುವ ಔಷಧಗಳನ್ನು ಅಕ್ರಮವಾಗಿ ಮಾರಾಟ ಮಾಡಲಾಗುತ್ತಿದೆ ಎಂಬ ಮಾಹಿತಿಯಿದೆ. ಅದನ್ನು ನಿಯಂತ್ರಿಸಲು ಕೂಡಲೇ ಔಷಧಗಳ ಮೇಲೆ ವಿಮ್ಸ್‌ ಶೀಲು ಹಾಕಬೇಕು ಎಂದು ಈಗಾಗಲೇ ವಿಮ್ಸ್‌ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಅದು ಆಗದಿದ್ದರೆ ಖಾಸಗಿ ಔಷಧ ಮಳಿಗೆಗಳ ಮೇಲೆ ದಿಢೀರ್‌ ದಾಳಿ ನಡೆಸುತ್ತೇನೆ. ನನಗೆ ಇಂಥಹದ್ದೇ ವಾಹನದಲ್ಲಿ ಸಂಚರಿಸಬೇಕೆಂಬ ನಿಯಮವಿಲ್ಲ. ಯಾವ ವಾಹನದಲ್ಲಾದರೂ ಬರಬಹುದು. ಅಪರಿಚಿತ ವಾಹನದಲ್ಲಿ ಬಂದು ಖಾಸಗಿ ಮೆಡಿಕಲ್‌ ಶಾಪ್‌ಗ್ಳ ಮೇಲೆ ದಾಳಿ ಮಾಡಿದಾಗ, ಸರ್ಕಾರ ಪೂರೈಸಿದ ಔಷಧಗಳು ಪತ್ತೆಯಾದರೆ ಸಂಬಂಧಪಟ್ಟ ವೈದ್ಯಾಧಿಕಾರಿಗಳ ಮೇಲೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.

ನನ್ನ ರಾಜ್ಯಭಾರ ನೋಡ್ತೀರಾ..: ಇದೇ ವೇಳೆ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಸಚಿವ ಈ.ತುಕಾರಾಂ, ಈಗಾಗಲೇ ತುಕಾರಾಂ ಮಾತು ಕಮ್ಮಿ, ಕೆಲಸ ಜಾಸ್ತಿ ಎಂದು ಎಲ್ಲರೂ ಹೇಳುತ್ತಾರೆ. ಅದರಂತೆ ನಾನು ಸಹ ರಾಜ್ಯಭಾರ ಹೇಗೆ ಮಾಡಬೇಕೆಂದು ತಿಳಿದುಕೊಂಡು ಇದೀಗ ರಾಜ್ಯಭಾರ ಮಾಡಲು ಬಂದಿದ್ದೇನೆ. ಹೇಗೆ ಮಾಡಬೇಕೆಂಬುದು ನನಗೂ ಗೊತ್ತಿದೆ. ಸ್ವಲ್ಪ ಸಮಯ ಕೊಟ್ಟು ಮುಂದಿನ ದಿನಗಳಲ್ಲಿ ನನ್ನ ರಾಜ್ಯಭಾರ ಹೇಗಿರುತ್ತದೆ ಎಂಬುದನ್ನು ಸೂಕ್ಷ್ಮವಾಗಿ ಗಮನಿಸಿರಿ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ವಿಮ್ಸ್‌ ಆಸ್ಪತ್ರೆಯ ಸರ್ವಾಂಗೀಣ ಅಭಿವೃದ್ಧಿಗೆ ಆದ್ಯತೆ ನೀಡಲಾಗುವುದು. ಹಾಗೂ ವಿವಿಧ ಕಾಯಿಲೆಗಳಿಂದ ನೊಂದು ಆಸ್ಪತ್ರೆಗೆ ಬರುವ ರೋಗಿಗಳಿಗೆ ಎಲ್ಲ ರೀತಿಯ ಸೌಲಭ್ಯಗಳು ಲಭಿಸುವಷ್ಟು ಅಭಿವೃದ್ಧಿ ಪಡಿಸಲಾಗುವುದು. ವಿಮ್ಸ್‌ನಲ್ಲಿನ 7 ಡಯಾಲಿಸಿಸ್‌ ಘಟಕಗಳು ಕೆಟ್ಟು ನಿಂತಿವೆ. ಹೊಸದಾಗಿ 4 ಡಯಾಲಿಸಿಸ್‌ ಘಟಕ, ವೆಂಟಿಲೇಟರ್‌ ಖರೀದಿಸಲು ಅನುದಾನ ನೀಡಲಾಗಿದೆ. ಹೊಸದಾಗಿ ನಾಲ್ಕು ಕುಡಿವ ನೀರಿನ ಘಟಕಗಳನ್ನು ನಿರ್ಮಿಸಲಾಗುತ್ತದೆ. ಲಾಂಡ್ರಿಯನ್ನು ಪಿಪಿಪಿ ಯೋಜನೆಯಡಿ ಮಾಡಿಸಲು ಚಿಂತನೆ ನಡೆಸಿದ್ದೇವೆ. ಒಟ್ಟು 4.5 ಕೋಟಿ ರೂ. ಅನುದಾನ ಸಾಮಗ್ರಿ ಖರೀದಿಸಲು ಅನುದಾನ ಬಿಡುಗಡೆ ಮಾಡಲಾಗಿದೆ. ಔಷಧಕ್ಕಾಗಿ 3 ಕೋಟಿ ರೂ.ಮೀಸಲಿಡಲಾಗಿದೆ ಎಂದು ತಿಳಿಸಿದರು.

ವಿಮ್ಸ್‌ನಲ್ಲಿನ ಕ್ಯಾನ್ಸರ್‌ ವಿಭಾಗ ಸ್ಥಗಿತಗೊಂಡಿರುವ ಬಗ್ಗೆ ಮಾಹಿತಿಯಿದೆ. ಆಪರೇಷನ್‌ ಥಿಯೇಟರ್‌ ಸಿದ್ಧಗೊಳ್ಳುತ್ತಿದೆ. ವಿಮ್ಸ್‌ನಲ್ಲಿ ಒಳ್ಳೆಯ ವಾತಾವರಣ ಇರಬೇಕೆಂಬ ಉದ್ದೇಶದಿಂದ ಅಧಿಕಾರಿಗಳಿಗೆ ಈಗಾಗಲೇ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.

Advertisement

ಹತ್ತು ವರ್ಷದ ಹಿಂದೆ ಖರೀದಿಸಿದ ಎಲ್ಲ ವಸ್ತುಗಳು ಸುಸ್ಥಿತಿಯಲ್ಲಿಲ್ಲ. ಹೊಸ ವೈದ್ಯಕೀಯ ಪರಿಕರಗಳೊಂದಿಗೆ ಫೆಬ್ರುವರಿ 28 ರೊಳ‌ಗಾಗಿ ರಿಬ್ಬನ್‌ ಕಟ್ ಆಗ್ಬೇಕು. ವಿಮ್ಸ್‌ ಆಸ್ಪತ್ರೆ ಡಿಜಿಟಲೀಕರಣಕ್ಕಾಗಿ 2 ಕೋಟಿ ರೂ. ಟೆಂಡರ್‌ ಕರೆಯುತ್ತೇವೆ. ರಾತ್ರಿ ಪಾಳಿ ಕೆಲಸ ಮಾಡದ ವೈದ್ಯರ ಮೇಲೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದರು.

ವಿಮ್ಸ್‌ ಆಸ್ಪತ್ರೆ ಅಭಿವೃದ್ಧಿಗೆ ಯಾವುದೇ ಅನುದಾನ ಕೊರತೆ ಇಲ್ಲ. ಈ ಮೈತ್ರಿಕೂಟ ಸರ್ಕಾರದಲ್ಲಿ ಶಿಕ್ಷಣ, ಆರೋಗ್ಯಕ್ಕೆ ಯಾವುದೇ ಕೊರತೆ ಇಲ್ಲದಂತೆ ನೋಡಿಕೊಳ್ಳುತ್ತಿದ್ದೇವೆ ಎಂದರು.

ಇದೇ ವೇಳೆ ವಿಮ್ಸ್‌ನ ಪೆಥಾಲಜಿ ವಿಭಾಗದ ಪ್ರೊ| ಶಾಂತಿ, ತಮ್ಮ ವಿಭಾಗದಲ್ಲಿನ ಸಮಸ್ಯೆಗಳ ಬಗ್ಗೆ ಸಚಿವರ ಬಳಿ ಹೇಳಿಕೊಂಡರು. ಪೆಥಾಲಜಿ ವಿಭಾಗದಲ್ಲಿ ಕಳೆದ 20 ವರ್ಷಗಳಿಂದ ಮೈಕ್ರೋಸ್ಕೋಪ್‌ ಖರೀದಿಸಿಲ್ಲ. ಇರುವ ಮೈಕ್ರೋಸ್ಕೋಪ್‌ಗ್ಳನ್ನಾದರೂ ರಿಪೇರಿ ಮಾಡಿಸಿಲ್ಲ. ಇದರಿಂದ ವೈದ್ಯಕೀಯ ವಿದ್ಯಾರ್ಥಿಗಳು ಸಾಕಷ್ಟು ಸಮಸ್ಯೆ ಎದುರಿಸುತ್ತಿದ್ದಾರೆ ಎಂದು ಅಳಲು ತೋಡಿಕೊಂಡರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ಈ.ತಕಾರಾಂ, ಈ ಕುರಿತು ಈಗಾಗಲೇ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.

ಇದಕ್ಕೂ ಮುನ್ನ ವಿಮ್ಸ್‌ ಆಸ್ಪತ್ರೆಯ ತುರ್ತು ಚಿಕಿತ್ಸಾ ವಿಭಾಗ, ರಕ್ತಭಂಡಾರ, ಮಕ್ಕಳ ವಿಭಾಗ ಸೇರಿದಂತೆ ವಿವಿಧ ವಿಭಾಗಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ವೇಳೆ ವಿಮ್ಸ್‌ ನಿರ್ದೇಶಕ ಡಾ| ಕೃಷ್ಣಸ್ವಾಮಿ, ಅಧೀಕ್ಷಕ ಡಾ| ಮರಿರಾಜ, ವೈದ್ಯಕೀಯ ಶಿಕ್ಷಣ ಇಲಾಖೆ ಕಾರ್ಯದರ್ಶಿ ಗಿರೀಶ್‌ ಸೇರಿದಂತೆ ವಿಮ್ಸ್‌ ವೈದ್ಯರು, ಅಧಿಕಾರಿಗಳು, ಸಿಬ್ಬಂದಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next