Advertisement
ಅದರೊಂದಿಗೆ ಕೆಲವು ಕಡೆ ತಾಳ್ಮೆ ಕಳೆದುಕೊಳ್ಳುವಂತಹ ದೃಶ್ಯಗಳೂ ಕಾಣಸಿಗುತ್ತವೆ. ಚಿತ್ರದ ಬಗ್ಗೆ ಸಿಂಪಲ್ ಆಗಿ ಹೇಳುವುದಾದರೆ, ಪತಿ, ಪತ್ನಿ ಮತ್ತು ಅವನು. ಇಷ್ಟು ಹೇಳಿದ ಮೇಲೆ, ಗಂಡ ಹೆಂಡತಿ ನಡುವೆ ಎಂಟ್ರಿಯಾಗುವ ವ್ಯಕ್ತಿಯಿಂದ ಏನೆಲ್ಲಾ ಸಮಸ್ಯೆ ಎದುರಾಗುತ್ತೆ ಅನ್ನೋದೇ ಕಥೆ. ಇಲ್ಲಿ ಪ್ರೀತಿ, ಮೋಸ, ದ್ವೇಷ, ಸಂಬಂಧ, ಅನುಬಂಧ ಇತ್ಯಾದಿ ವಿಷಯಗಳಿವೆ.
Related Articles
Advertisement
ಗಂಡ ಹೆಂಡತಿ ಮಧ್ಯೆ ಬರುವ ಆ ವ್ಯಕ್ತಿ ಯಾರು? ಅಲ್ಲಿಂದ ಸಿನಿಮಾ ಯಾವ ತಿರುವು ಪಡೆದುಕೊಳ್ಳುತ್ತೆ ಎಂಬ ಕುತೂಹಲವಿದ್ದರೆ ಒಮ್ಮೆ ಸಿನಿಮಾ ನೋಡಬಹುದು. ಮೊದಲೇ ಹೇಳಿದಂತೆ ಇದು ಸರಳ ಕಥೆ. ವಿದೇಶದಲ್ಲಿ ದುಡಿದು ಇಂಡಿಯಾಗೆ ಹಿಂದಿರುಗಿರುವ ನಾಯಕನದು ಲವ್‌ಮ್ಯಾರೇಜ್. ಅವನಿಗೆ ತನ್ನ ಹೆಂಡತಿ ಮತ್ತು ತಾನು ಕಟ್ಟಿಸಿರುವ ಮನೆ ಅಂದರೆ ಎಲ್ಲಿಲ್ಲದ ಪ್ರೀತಿ.
ಅವನ ಹೆಂಡತಿಗೆ ಅವನೆಂದರೆ ಪ್ರೀತಿ ಅಷ್ಟಕ್ಕಷ್ಟೇ. ಅವನು ಕಟ್ಟಿಸಿರುವ ಮನೆ ಮಾರಿ, ವಿದೇಶಕ್ಕೆ ಹೋಗಿ ನೆಲೆಸಬೇಕೆಂಬ ಆಸೆ. ಆದರೆ, ಅವನಿಗೆ ಇಷ್ಟವಿಲ್ಲ. ಗಂಡನಿಗೆ ಸುಳ್ಳು ಹೇಳಿ ತನ್ನ ಫ್ಯಾಮಿಲಿ ಡಾಕ್ಟರ್ ಜೊತೆ ಸಂಬಂಧ ಇಟ್ಟುಕೊಂಡಿರುವ ಆಕೆಗೆ ಗಂಡನಿಂದ ದೂರವಾಗಬೇಕೆಂಬ ಯೋಚನೆ. ಆ ಯೋಚನೆಗೆ ಸಾಥ್ ಕೊಡುವ ಆ ಡಾಕ್ಟರ್ ಅವಳ ಗಂಡನನ್ನೇ ಕೊಲೆ ಮಾಡಿ, ಆಸ್ತಿ ಮಾರಿ ದೊಡ್ಡದ್ದೊಂದು ಆಸ್ಪತ್ರೆ ಕಟ್ಟಿಸಿ, ರಾಯಲ್ ಲೈಫ್ ಕಳೆಯಬೇಕೆಂಬ ದುರಾಸೆಯನ್ನು ತೋರಿಸುತ್ತಾನೆ.
ಅವನ ಮಾತಿಗೆ ಮೊದಲು ಅವಳು ಸಮ್ಮತಿಸದಿದ್ದರೂ, ಪರಿಸ್ಥಿತಿಯೇ ಅವಳಿಂದ ಗಂಡನನ್ನು ಕೊಲೆ ಮಾಡಿಸಿಬಿಡುತ್ತೆ. ಕೊನೆಗೆ ಅದೊಂದು ಹೃದಯಾಘಾತದ ಸಾವು ಎಂದು ಬಿಂಬಿಸಿ, ಯಾರಿಗೂ ಅನುಮಾನ ಬರದಂತೆ ಮಣ್ಣಲ್ಲಿ ಹೂತು ಹಾಕುತ್ತಾರೆ. ಆದರೆ, ಅವರಂದುಕೊಂಡಿದ್ದು ಯಾವುದೂ ಆಗೋದಿಲ್ಲ. ಕಾರಣ, ಪತಿ ಆ ಗೋರಿಯಿಂದ ಎದ್ದು ಬರುತ್ತಾನೆ! ಅವನು ಹೇಗೆ ಬಂದ, ಆಮೇಲೆ ಅವರನ್ನು ಏನು ಮಾಡುತ್ತಾನೆ ಎಂಬ ಕುತೂಹಲವೇನಾದರೂ ಮೂಡಿದರೆ “ಖನನ’ದತ್ತ ಮುಖ ಮಾಡಬಹುದು.
ಆರ್ಯವರ್ಧನ್ ಪಾತ್ರಕ್ಕೆ ತಕ್ಕಂತೆ ದೇಹ ಸೌಂದರ್ಯವನ್ನೂ ಹೆಚ್ಚಿಸಿಕೊಂಡಿರುವುದಷ್ಟೇ ಅಲ್ಲ, ನಟನೆಯಲ್ಲೂ ಗಮನಸೆಳೆಯುತ್ತಾರೆ. ಸಣ್ಣಪುಟ್ಟ ತಪ್ಪುಗಳಿದ್ದರೂ ಮೊದಲ ಚಿತ್ರವಾದ್ದರಿಂದ ಅವನ್ನೆಲ್ಲಾ ಪಕ್ಕಕ್ಕೆ ಸರಿಸಬಹುದು. ಇನ್ನು, ಕರಿಷ್ಮಾ ಬರುಹ ಗ್ಲಾಮರ್‌ಗಷ್ಟೇ ಸೀಮಿತ. ಉಳಿದಂತೆ ನಿರ್ದೇಶಕರು ಹೇಳಿದ್ದನ್ನಷ್ಟೇ ಮಾಡಿದ್ದಾರೆ. ಅವರಿಗೆ ಸಿಕ್ಕ ಪಾತ್ರದಲ್ಲಿ ತೂಕವಿದೆ.
ಆದರೆ, ಅದನ್ನು ಸರಿಯಾಗಿ ನಿರ್ವಹಿಸುವಲ್ಲಿ ವಿಫಲ. ಅವಿನಾಶ್ ಪೊಲೀಸ್ ಅಧಿಕಾರಿಯಾಗಿ ಇಷ್ಟವಾಗುತ್ತಾರೆ. ಉಳಿದಂತೆ ಓಂಪ್ರಕಾಶ್‌ರಾವ್, ಮಹೇಶ್ ಸಿದ್ದು, ಮೋಹನ್ ಜುನೇಜ, ಕೆಂಪೇಗೌಡ ಇರುವಷ್ಟು ಕಾಲ ಕಚಗುಳಿ ಇಡುತ್ತಾರೆ. ಕುನ್ನಿ ಗುಡಿಪಾಟಿ ಸಂಗೀತಕ್ಕಿಂತ ಹಿನ್ನೆಲೆ ಸಂಗೀತ ಗಮನಸೆಳೆಯುತ್ತದೆ. ರಮೇಶ್ ತಿರುಪತಿ ತಮ್ಮ ಛಾಯಾಗ್ರಹಣದಲ್ಲಿ ಎಲ್ಲರನ್ನೂ ಅಂದಗಾಣಿಸಿದ್ದಾರೆ.
ಚಿತ್ರ: ಖನನನಿರ್ಮಾಣ: ಶ್ರೀನಿವಾಸ್
ನಿರ್ದೇಶನ: ರಾಧ
ತಾರಾಗಣ: ಆರ್ಯವರ್ಧನ್, ಕರಿಷ್ಮಾ ಬರುಹ, ಯುವ ಕಿಶೋರ್, ಅವಿನಾಶ್, ವಿನಯಾ ಪ್ರಸಾದ್, ಓಂ ಪ್ರಕಾಶ್‌ರಾವ್, ಮಹೇಶ್ ಸಿದ್ದು ಇತರರು. * ವಿಜಯ್ ಭರಮಸಾಗರ