Advertisement
ಅಲ್ಲಾ, ಈ ಗಂಡಂದಿರು ಹೆಂಡತಿಗೆ ಯಾಕೆ ಇಷ್ಟು ಹೆದರುತ್ತಾರೆ?! “ಅವಳೇನು ಹುಲಿಯೇ, ಕರಡಿಯೇ, ಸಿಂಹವೇ? ಅಥವಾ ಭದ್ರಕಾಳಿಯೇ?’ ಗಂಡನ ಹತ್ರ ಕೇಳಿದೆ, “”ನೀವೂ ನನಗೆ ಹೆದರುತ್ತೀರಾ?” ಅವರು ಹೇಳಿದರು, “”ನಾನೇನು ನಿನಗೆ ಹೆದರುವುದಿಲ್ಲ. ಆದರೆ ಹೆದರಿದಂತೆ ನಟಿಸುತ್ತೇನೆ”. ಕಾರಣ ಏನು? ಕೇಳಿದರೆ ಗಂಡನಲ್ಲಿ ಉತ್ತರವಿಲ್ಲ. ಬಹುಶಃ ಸರಿಯಾದ ಕಾರಣ ಕೊಡಲು ನನ್ನ ಹೆದರಿಕೆಯೋ ಏನೋ! ಎಲ್ಲರ ಮನೆ ದೋಸೆಯೂ…
ಒಮ್ಮೆ ನಾನು ಗಂಡನೊಂದಿಗೆ ಮಡಿಕೇರಿಯಲ್ಲಿ ಸ್ಟಾರ್ ಹೊಟೇಲೊಂದಕ್ಕೆ ಊಟಕ್ಕೆ ಹೋಗಿದ್ದೆ. ಎದುರಿನ ಟೇಬಲಿನಲ್ಲಿ ಗಂಡನ ಸ್ನೇಹಿತರೊಬ್ಬರು ತಮ್ಮ ಸಹೋದ್ಯೋಗಿ ಹೆಂಗಸಿನ ಜೊತೆ ಊಟ ಮಾಡುತ್ತಿದ್ದರು. ಅವರಿಗೊಂದು ಫೋನ್ ಬಂತು. ಅವರು ಫೋನಿನಲ್ಲಿ ಹೇಳುತ್ತಿದ್ದರು “”ನಾನು ಊಟಕ್ಕೆ ಬರಲ್ಲ. ಆಫೀಸಿನಲ್ಲಿ ಸಿಕ್ಕಾಪಟ್ಟೆ ಕೆಲಸ. ರೂಮಿಗೇ ಕಾಫಿ, ಏನಾದ್ರು ತಿಂಡಿ ತರಿಸಿ ತಿಂತೇನೆ. ಕಾಯಬೇಡ”. ಈ ಮಾತನ್ನು ಅವರು ತಮ್ಮ ಹೆಂಡತಿಗೇ ಹೇಳಿದ್ದೆಂದು ಬೇರೆ ಹೇಳಬೇಕಾಗಿಲ್ಲ ತಾನೆ? ಸಹೋದ್ಯೋಗಿ ಜೊತೆ ಹೊಟೇಲಿನಲ್ಲಿ ಊಟ ಮಾಡುತ್ತಿದ್ದೇನೆ ಎಂದು ಹೇಳಲು ಏಕೆ ಹೆದರಿದರೋ!
Related Articles
Advertisement
ಹೆಂಡತಿಗೆ ಹೆದರುವ ಗಂಡಂದಿರು ಎಂದು ಹೇಳುವಾಗ ಇನ್ನೊಂದು ಘಟನೆ ನೆನಪಾಗುತ್ತದೆ. ನಮ್ಮ ಮನೆಯಿಂದ ಪೇಟೆಗೆ ಹೋಗಬೇಕಾದರೆ ಎಂಟು ಮೈಲು ನಡೆದೇ ಹೋಗಬೇಕು. ಬಸ್ ಸೌಕರ್ಯವಿಲ್ಲ. ಅದೃಷ್ಟವಿದ್ದರೆ ಬಾಡಿಗೆ ಜೀಪು ಸಿಗುತ್ತದೆ. ಒಮ್ಮೆ ಹೀಗೆ ನಾನು ಮನೆಯಿಂದ ಪೇಟೆಗೆ ನಡೆದು ಹೋಗುವಾಗ ಪರಿಚಿತರೊಬ್ಬರ ಬೈಕು ಸಿಕ್ಕಿತು. ಪೇಟೆಯಲ್ಲಿ ಅವರಿಗೆ ಅಂಗಡಿ ಇದೆ. ನಾವು ಅಲ್ಲಿಂದಲೇ ಸಾಮಾನು ಖರೀದಿಸುವುದು. “”ಬರುತ್ತೀರಾ?” ಎಂದು ಕೇಳಿದರು. ನಡೆದು ನಡೆದು ಸುಸ್ತಾಗಿದ್ದ ನಾನು ಇದಕ್ಕೇ ಕಾದಿದ್ದವಳಂತೆ ಬೈಕ್ ಹತ್ತಿದೆ. ಪೇಟೆಗೆ ಸ್ವಲ್ಪ ದೂರ ಇರುವಾಗ ಬೈಕ್ ನಿಲ್ಲಿಸಿ, “”ಇಳಿಯಿರಿ” ಎಂದರು. “”ಇನ್ನೂ ಪೇಟೆ ಬರಲಿಲ್ಲ ಅಲ್ವಾ?” ಎಂದೆ. “”ಈಗಲೇ, ಇಲ್ಲೇ ಇಳಿಯಿರಿ” ಎಂದರು ಚಳಿಯಲ್ಲಿ ನಡುಗುವವರಂತೆ. “”ಏಕೆ? ಏನಾಯ್ತು?” ಕೇಳಿದೆ. “”ಏನಿಲ್ಲ. ಇಂದು ಕೆಲಸದವನು ರಜೆ ಹಾಕಿದ್ದಾನೆ. ಅಂಗಡಿಯಲ್ಲಿ ನನ್ನ ಹೆಂಡತಿ ಕುಳಿತಿದ್ದಾಳೆ. ಅವಳು ಕಂಡರೆ ಕಷ್ಟ” ಎಂದರು. ಅವರ ಹೆದರಿಕೆ ಕಂಡು ನಾನು ಮನದಲ್ಲೇ ನಕ್ಕೆ.
“ಹೆಂಡತಿಯೊಬ್ಬಳು ಮನೆಯೊಳಗಿದ್ದರೆ ನನಗದೆ ಕೋಟಿ ರೂಪಾಯಿ. ಹೆಂಡತಿ ಒಬ್ಬಳು ಹತ್ತಿರವಿದ್ದರೆ ನಾನು ಒಬ್ಬ ಸಿಪಾಯಿ’ ಎಂದು ಹೆಂಡತಿಯ ಗುಣಗಾನ ಮಾಡಿದವರು ಕವಿ ಕೆ. ಎಸ್. ನರಸಿಂಹಸ್ವಾಮಿ ಒಬ್ಬರೇ ಇರಬಹುದು ಅಥವಾ ಹೆಂಡತಿಗೆ ಹೆದರಿ ಅವಳನ್ನು ಪೂಸಿ ಹೊಡೆಯಲು ಈ ಮಾತು ಹೇಳಿದ್ದರೋ ಏನೋ! ಯಾರಿಗೆ ಗೊತ್ತು? ಪತ್ರಿಕೆಯೊಂದರಲ್ಲಿ ಪ್ರಶ್ನೋತ್ತರ ಅಂಕಣಕ್ಕೆ ಒಬ್ಬರು ಒಂದು ಪ್ರಶ್ನೆ ಕೇಳಿದ್ದರು, “”ನನಗೆ ಆಫೀಸಿನಿಂದ ಮನೆಗೆ ಬಂದ ತಕ್ಷಣ ಬಿ.ಪಿ., ಶುಗರ್ ರೈಸ್ ಆಗುತ್ತದೆ. ಏನು ಮಾಡಬೇಕು?” ಉತ್ತರ ಹೀಗಿತ್ತು: “”ಹೆಂಡತಿಯನ್ನು ತವರಿಗೆ ಕಳಿಸಿ”. ಪಾಪ! ಹೆಂಡತಿಗೆ ಹೆದರಿ ಆರೋಗ್ಯವನ್ನೂ ಕಳಕೊಳ್ಳುತ್ತಾರೆಂದರೆ ಆ ಬಡಪಾಯಿ ಗಂಡಸರನ್ನು ದೇವರೇ ಕಾಪಾಡಬೇಕು!
ಹೆಂಡತಿಗೆ ಹೆದರುವುದು ಈಗಿನ ಕಾಲದ ಸಂಗತಿಯೇನೂ ಅಲ್ಲ, ರಾಜರ ಕಾಲದಿಂದಲೂ ಇತ್ತು ಎಂಬುದಕ್ಕೆ ಸಾವಿರ ಕುದುರೆಯ ಸರದಾರನಾದರೂ ಹೆಂಡತಿಗೆ ಗುಲಾಮ ಎಂಬ ಮಾತೇ ಸಾಕ್ಷಿ. ಮಾತ್ರವಲ್ಲ ಪುರಾಣ ಕಾಲದಲ್ಲೂ ಇತ್ತು. ಶ್ರೀಕೃಷ್ಣ ಪರಮಾತ್ಮ ತನ್ನ ಹೆಂಡತಿ ಸತ್ಯಭಾಮೆಗೆ ಹೆದರುವ ಕತೆ ಮಹಾಭಾರತದಲ್ಲಿ ಬರುತ್ತದೆ. “ಅಮ್ಮಾವ್ರ ಗಂಡ’ ಎಂಬುದು ಹೆಂಡತಿ ಹೇಳಿದ್ದನ್ನು ಚಾಚೂ ತಪ್ಪದೆ ಪಾಲಿಸುವ ಗಂಡಸಿಗೆ ಆಧುನಿಕ ಕಾಲದಲ್ಲಿ ಇಟ್ಟ ಹೆಸರು.
ಬುದ್ಧ ಕಿಸಾಗೋತಮಿಗೆ “ಸಾವಿಲ್ಲದ ಮನೆಯಿಂದ ಸಾಸಿವೆ ಕಾಳು ತಾ’ ಎಂದು ಹೇಳುವ ಬದಲು “ಹೆಂಡತಿಗೆ ಹೆದರದ ಗಂಡಿನ ಮನೆಯಿಂದ ಸಾಸಿವೆ ಕಾಳು ತಾ’ ಎಂದಿದ್ದರೂ ಸಾಸಿವೆ ಕಾಳು ಸಿಗುತ್ತಿರಲಿಲ್ಲ ಎಂಬುದು ನನ್ನ ಅಭಿಪ್ರಾಯ. ಹೆಂಡತಿಗೆ ಗಂಡಂದಿರು ಯಾಕೆ ಹೆದರುತ್ತಾರೆ? ಎಂಬುದು ಸಂಶೋಧನೆಗೆ ಯೋಗ್ಯವಾದ ವಿಷಯ. ಏನಂತೀರಿ?
– ಸಹನಾ ಕಾಂತಬೈಲು