Advertisement

ಕೌಟುಂಬಿಕ ಕಲಹಕ್ಕೆ ತಾನೇ ಪತಿಯನ್ನು ಕೊಲೆಗೈದು ಅಪರಿಚಿತರಿಂದ ಹಲ್ಲೆ ಎಂದು ಕಥೆ ಕಟ್ಟಿದ ಪತ್ನಿ

12:59 PM Apr 12, 2022 | Team Udayavani |

ಬೆಂಗಳೂರು: ಕೌಟುಂಬಿಕ ಕಲಹಕ್ಕೆ ಪತ್ನಿಯೇ ಪತಿಯನ್ನು ಕಬ್ಬಿಣದ ರಾಡ್‌ನಿಂದ ಹಲ್ಲೆ ನಡೆಸಿ ಹತ್ಯೆಗೈದಿರುವ ಘಟನೆ ಬ್ಯಾಡರಹಳ್ಳಿ ಠಾಣೆ ವ್ಯಾಪ್ತಿಯಲ್ಲಿ ಸೋಮವಾರ ನಡೆದಿದ್ದು, ಕೃತ್ಯ ಎಸಗಿ ಸುಳ್ಳು ಕಥೆ ಕಟ್ಟಿದ ಪತ್ನಿಯನ್ನು ಪೊಲೀಸರು ಬಂಧಿಸಿದ್ದಾರೆ.

Advertisement

ಅಂದ್ರಹಳ್ಳಿ ನಿವಾಸಿ ಉಮೇಶ್‌(52) ಕೊಲೆಯಾದ ಪತಿ. ಕೃತ್ಯ ಎಸಗಿದ ಆತನ ಪತ್ನಿ ವರಲಕ್ಷ್ಮೀ (48)ಯನ್ನು ಬಂಧಿಸಲಾಗಿದೆ.

ಆರೋಪಿಯ ವಿರುದ್ಧ ಬ್ಯಾಡರಹಳ್ಳಿ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಿಸಲಾಗಿದೆ. ತುಮಕೂರು ಜಿಲ್ಲೆ ಕುಣಿಗಲ್‌ ತಾಲೂಕು ಮೂಲದ ಉಮೇಶ್‌ 28 ವರ್ಷಗಳ ಹಿಂದೆ ಸೋದರ ಮಾವನ ಮಗಳಾದ ವರಲಕ್ಷ್ಮೀ ಯನ್ನು ಮದುವೆಯಾಗಿದ್ದು,ದಂಪತಿಗೆ ಇಬ್ಬರು ಹೆಣ್ಣು ಮಕ್ಕಳು ಇದ್ದಾರೆ.

ಈ ಮೊದಲು ಕಾರ್ಖಾನೆಯೊಂದರಲ್ಲಿ ಕೆಲಸ ಮಾಡುತ್ತಿದ್ದ ಉಮೇಶ್‌ ಕುಟುಂಬ ಸಮೇತ ಪ್ರಕಾಶ್‌ನಗರ ದಲ್ಲಿ ವಾಸವಾಗಿದ್ದರು. ಆರೇಳು ವರ್ಷಗಳಿಂದ ರಿಯಲ್‌ ಎಸ್ಟೇಟ್‌ ಹಾಗೂ ಫೈನಾನ್ಸಿಯರ್‌ ವ್ಯವಹಾರ ಮಾಡಿಕೊಂಡಿದ್ದರು. ಅಂದ್ರಹಳ್ಳಿ ಯಲ್ಲಿ ಸ್ವಂತ ಮನೆಯಲ್ಲಿ ವಾಸವಾಗಿದ್ದರು. ಮೊದಲ ಮಗಳು ಎಂಜಿನಿಯರ್‌ ವ್ಯಾಸಂಗ ಮಾಡಿದ್ದು, 2ನೇ ಮಗಳು ಬಿ.ಕಾಂ ಪದವಿ ಪಡೆದು, ಇಬ್ಬರು ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ.

ಇದನ್ನೂ ಓದಿ : ಈಶ್ವರಪ್ಪ ವಿರುದ್ಧ ಕಮಿಷನ್ ಆರೋಪ ಮಾಡಿದ್ದ ಗುತ್ತಿಗೆದಾರ ಸಂತೋಷ್ ಉಡುಪಿಯಲ್ಲಿ ಆತ್ಮಹತ್ಯೆ!

Advertisement

ಈ ನಡುವೆಯೂ ದಂಪತಿ ನಡುವೆ ನಿತ್ಯ ಜಗಳ ನಡೆಯುತ್ತಿತ್ತು. ಗಂಡು ಮಕ್ಕಳಿಗೆ ಜನ್ಮ ನೀಡಲಿಲ್ಲ ಎಂದು ಪತ್ನಿ ಜತೆ ಜಗಳ, ಹಲ್ಲೆ ನಡೆಸುತ್ತಿದ್ದ. ಇಬ್ಬರು ಹೆಣ್ಣು ಮಕ್ಕಳ ಮೇಲೂ ಆಗಾಗ್ಗೆ ಹಲ್ಲೆ ನಡೆಸುತ್ತಿದ್ದ ಎಂದು ಹೇಳಲಾಗಿದೆ. ಅಲ್ಲದೆ, ಅಡುಗೆ ಮಾಡುವುದು ಸೇರಿ ಸಣ್ಣ-ಪುಟ್ಟ ವಿಚಾರಕ್ಕೂ ದಂಪತಿ ನಡುವೆ ಜಗಳ ನಡೆಯುತ್ತಿತ್ತು. ಅಲ್ಲದೆ, ಉಮೇಶ್‌ ಹೆಸರಿನಲ್ಲಿರುವ ನಿವೇಶವನ್ನು ತನ್ನ ಹಾಗೂ ಮಕ್ಕಳ ಹೆಸರಿಗೆ ವರ್ಗಾಯಿಸುವಂತೆ ಪತ್ನಿ ಕೇಳಿದ್ದರು. ಆದರೆ, ಪತಿ ಒಪ್ಪಿರಲಿಲ್ಲ. ಬದಲಿಗೆ ಮೂವರನ್ನು ಪೆಟ್ರೋಲ್‌ ಹಾಕಿ ಸುಟ್ಟು ಹಾಕುತ್ತೇನೆ ಹೊರತು, ನಿವೇಶನ ಕೊಡುವುದಿಲ್ಲ ಎಂದೆಲ್ಲ ಉಮೇಶ್‌ ಬೆದರಿಕೆ ಹಾಕಿದ್ದ ಎಂದು ಹೇಳಲಾಗಿದೆ.

ಹೀಗಾಗಿ ಉಮೇಶ್‌ ಮನೆಯ ಮದ್ಯ ಕೋಣೆ ಯಲ್ಲಿ ಮಲಗುತ್ತಿದ್ದರೆ, ಪತ್ನಿ ಮತ್ತು ಮಕ್ಕಳು ಪ್ರತ್ಯೇಕ ಕೋಣೆಗಳಲ್ಲಿ ಮಲಗುತ್ತಿದ್ದರು. ಸೋಮವಾರ ಮುಂಜಾನೆ 4 ಗಂಟೆ ಸುಮಾರಿಗೆ ಎಚ್ಚರಗೊಂಡ ವರಲಕ್ಷ್ಮೀಯ ಮನೆಯ ಮುಂಭಾಗದಲ್ಲಿರುವ ಶೌಚಾಲಯಕ್ಕೆ ಹೋಗಿ, ವಾಪಸ್‌ ಕೋಣೆಗೆ ಹೋಗುವಾಗ ಪತಿ ಉಮೇಶ್‌ ಕಾಲು ತಗುಲಿದೆ. ಅಷ್ಟಕ್ಕೆ ಎಚ್ಚರಗೊಂಡ ಉಮೇಶ್‌ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಅಲ್ಲದೆ, ಪತ್ನಿಗೆ ಕಾಲಿನಿಂದ ಒದ್ದಿದ್ದರಿಂದ ಆಕೆ ಸ್ವಲ್ಪ ದೂರ ಹೋಗಿ ಬಿದ್ದಿದ್ದರು ಎಂದು ಪೊಲೀಸರು ಹೇಳಿದರು.

ಕಬ್ಬಿಣದ ರಾಡ್‌ನಿಂದ ಕೊಲೆ: ನಂತರ ಅಳುತ್ತಲ್ಲೇ ಕೋಣೆಗೆ ಹೋದ ವರಲಕ್ಷ್ಮೀ, ಈ ಹಿಂದಿನ ಘಟನೆಗಳ ಬಗ್ಗೆ ಯೋಚಿಸಿ, ಈತ ಬದುಕಿದ್ದರೆ, ತನಗೂ, ಮಕ್ಕಳಿಗೂ ಬದುಕಲು ಬಿಡುವುದಿಲ್ಲ. ನಿತ್ಯ ಈತನ ಕಿರುಕುಳಕ್ಕೆ ನರಳಬೇಕಾಗುತ್ತದೆ ಎಂದು ನಿರ್ಧರಿಸಿ, ಮಕ್ಕಳು ಮಲಗಿದ್ದ ಕೋಣೆಯ ಬಾಗಿಲು ಚೀಲಕ ಹಾಕಿದ್ದಾರೆ. ಬಳಿಕ ಮನೆಯ ಹಿಂಭಾಗದಲ್ಲಿದ್ದ ಕಬ್ಬಿಣದ ರಾಡ್‌ ನಿಂದ ತಲೆಗೆ ಹೊಡೆದಿದ್ದು, ತೀವ್ರರಕ್ತಸ್ರಾವದಿಂದ ಸ್ಥಳದಲ್ಲೇ ಉಮೇಶ್‌ ಮೃತಪಟ್ಟಿದ್ದಾರೆ. ಸುಮಾರು ಎರಡು ಗಂಟೆಗಳ ಕಾಲ ಪತಿಯ ಶವದ ಎದುರು ಕುಳಿತ್ತಿದ್ದ ವರಲಕ್ಷ್ಮೀ ನಂತರ ಇಬ್ಬರು ಮಕ್ಕಳನ್ನು ಎಚ್ಚರಿಸಿದ್ದಾರೆ.

ನಂತರ ಕೂಡಲೇ ಸಮೀಪದ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ, ವೈದ್ಯರು ಚಿಕಿತ್ಸೆ ಫ‌ಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ತಿಳಿಸಿ ದ್ದಾರೆ ಎಂದು ಪೊಲೀಸರು ಹೇಳಿದರು.

ಅಪರಿಚಿತರಿಂದ ಹಲ್ಲೆ ಎಂದು ಕಥೆ! : ವಿಷಯ ತಿಳಿದು ಸ್ಥಳಕ್ಕೆ ಧಾವಿಸಿದ ಪೊಲೀಸರು ಪ್ರಕರಣ ದಾಖಲಿಸಿಕೊಂಡು ವರಲಕ್ಷ್ಮೀ ವಿಚಾರಣೆಯಲ್ಲಿ ಗೊಂದಲ ಹೇಳಿಕೆ ನೀಡಿದ್ದರು. ಅಲ್ಲದೆ, ಪತಿ ತನ್ನೊಂದಿಗೆ ಹೆಚ್ಚು ಮಾತನಾಡುವುದಿಲ್ಲ. ತಡರಾತ್ರಿ ಯಾರೊಂದಿಗೂ ಗಲಾಟೆ ಮಾಡಿಕೊಂಡು ಬಂದು ಮನೆಯಲ್ಲಿ ಮಲಗಿದ್ದಾರೆ. ಮುಂಜಾನೆ ತಾವು ಎದ್ದು ನೋಡಿದಾಗ ಘಟನೆ ಬೆಳಕಿಗೆ ಬಂದಿದೆ ಎಂದು ಕಥೆ ಸೃಷ್ಟಿಸಿದ್ದರು. ಬಳಿಕ ಮನೆಗೆ ಹೋಗಿ ನೋಡಿದಾಗ, ರಕ್ತದ ಕಲೆಗಳನ್ನು ತೊಳೆದಿರುವುದು ಗಮನಕ್ಕೆ ಬಂದಿದೆ. ಕೂಡಲೇ ಆಕೆಯನ್ನು ವಶಕ್ಕೆ ಪಡೆದು ತೀವ್ರ ರೀತಿಯಲ್ಲಿ ವಿಚಾರಣೆ ನಡೆಸಿದಾಗ ಸತ್ಯಾಂಶ ಬೆಳಕಿಗೆ ಬಂದಿದೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next