ಅಲಹಾಬಾದ್: ವಿವಾಹ ವಿಚ್ಛೇದನ ಪಡೆದ ನಂತರವೂ ಕೂಡಾ ಪತ್ನಿ ಮತ್ತು ಮಕ್ಕಳ ಜೀವನ ನಿರ್ವಹಣೆಗೆ ಪತಿ ಜೀವನಾಂಶ ಕೊಡಬೇಕು ಎಂದು ಮಹತ್ವದ ಬೆಳವಣಿಗೆಯೊಂದರಲ್ಲಿ ಅಲಹಾಬಾದ್ ಹೈಕೋರ್ಟ್ ಬುಧವಾರ(ನವೆಂಬರ್ 4, 2020) ಆದೇಶ ನೀಡಿದೆ.
ಇಡೀ ಕುಟುಂಬವನ್ನು ಕಾಪಾಡುವುದು ಕಾನೂನಾತ್ಮಕ, ನೈತಿಕ ಹಾಗೂ ಸಾಮಾಜಿಕ ಹೊಣೆಗಾರಿಕೆ ಮತ್ತು ಬದ್ಧತೆಯಾಗಿದೆ ಎಂದು ಹೈಕೋರ್ಟ್ ನೀಡಿರುವ ಆದೇಶದಲ್ಲಿ ಉಲ್ಲೇಖಿಸಿದೆ ಎಂದು ವರದಿ ತಿಳಿಸಿದೆ.
ಪೋಷಕರ ಜತೆ ವಾಸವಾಗಿರುವ ಪತ್ನಿಗೆ ಜೀವನಾಂಶ ನೀಡಲು ನಿರಾಕರಿಸಿರುವ ಪತಿಯ ವಿರುದ್ಧ ಜಾನ್ಸಿ ಕೌಟುಂಬಿಕ ನ್ಯಾಯಾಲಯ ಹೈಕೋರ್ಟ್ ಗೆ ಸಲ್ಲಿಸಿರುವ ದೂರಿನ ವಿಚಾರಣೆ ನಡೆಸಿದ ಸಂದರ್ಭದಲ್ಲಿ ಈ ಆದೇಶವನ್ನು ಹೊರಡಿಸಿರುವುದಾಗಿ ವರದಿ ವಿವರಿಸಿದೆ.
ಜಾನ್ಸಿ ಕೌಟುಂಬಿಕ ನ್ಯಾಯಾಲಯದಲ್ಲಿದ್ದ ಪ್ರಕರಣ ಹೈಕೋರ್ಟ್ ಮೆಟ್ಟಿಲೇರಿದಾಗ, ಭಾರತೀಯ ಸಮಾಜದಲ್ಲಿ ಮದುವೆಗೆ ಹೆಚ್ಚಿನ ಪ್ರಾಮುಖ್ಯತೆ ಇದೆ. ತನ್ನ ಮಗಳನ್ನು ತಮಗಿಂತ ಹೆಚ್ಚಾಗಿ ಅತ್ತೆ, ಮಾವಂದಿರು ಪ್ರೀತಿಸಲಿ ಎಂದು ಬಯಸುತ್ತಾರೆ ಎಂಬುದಾಗಿ ತಿಳಿಸಿ, ಪತಿಯ ಅರ್ಜಿಯನ್ನು ವಜಾಗೊಳಿಸಿತ್ತು.
ಮದುವೆ ಮಾಡಿಕೊಟ್ಟ ಮೇಲೆ ಮಗಳಿಗೆ ಕಿರುಕುಳ, ಚಿತ್ರಹಿಂಸೆ ಕೊಟ್ಟರೆ, ಅವರ ಪೋಷಕರ ಕನಸು ಭಗ್ನಗೊಂಡಂತೆ, ಅಷ್ಟೇ ಅಲ್ಲ ಅವರಿಗೆ ಆಘಾತವನ್ನು ತಂದೊಡ್ಡಲಿದೆ ಎಂದು ಕೋರ್ಟ್ ಅಭಿಪ್ರಾಯವ್ಯಕ್ತಪಡಿಸಿದೆ. ಒಂದು ಬಾರಿ ಹೆಣ್ಣು ತನ್ನ ಮನೆ ಬಿಟ್ಟು ಮಾವನ ಮನೆ ಸೇರಿದ ಮೇಲೆ ಆಕೆಯನ್ನು ನೈತಿಕವಾಗಿ ಮತ್ತು ಕಾನೂನುಬದ್ಧವಾಗಿ ಚೆನ್ನಾಗಿ ನೋಡಿಕೊಳ್ಳುವ ಹೊಣೆಗಾರಿಕೆ ಪತಿಯದ್ದಾಗಿದೆ ಎಂದು ಆದೇಶದಲ್ಲಿ ಉಲ್ಲೇಖಿಸಿದೆ.