Advertisement

ತಲಾಖ್ ಕೊಟ್ಟ ಪತಿ ವಿರುದ್ಧ ದೂರು ನೀಡಿದ ಪತ್ನಿಯನ್ನು ಬೆಂಕಿಹಚ್ಚಿ ಕೊಂದ ಗಂಡ

09:47 AM Aug 20, 2019 | Nagendra Trasi |

ಶ್ರಾವಸ್ತಿ(ಉತ್ತರಪ್ರದೇಶ): ತಲಾಖ್ ಮೂಲಕ ವಿಚ್ಛೇದನ ನೀಡಿದ್ದ ಗಂಡನ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮುಂದಾಗಿದ್ದ ಪತ್ನಿ(22ವರ್ಷ)ಯನ್ನು ಗಂಡ ಹಾಗೂ ಮಾವ ಜೀವಂತವಾಗಿ ಸುಟ್ಟುಹಾಕಿರುವ ಹೃದಯವಿದ್ರಾವಕ ಘಟನೆ ಉತ್ತರಪ್ರದೇಶದ ಶ್ರಾವಸ್ತಿ ಜಿಲ್ಲೆಯಲ್ಲಿ ನಡೆದಿದೆ.

Advertisement

ಮುಸ್ಲಿಂ ಮಹಿಳೆ(ವಿವಾಹ ರಕ್ಷಣಾ ಹಕ್ಕುಗಳ ಕಾಯ್ದೆ) ಕಾಯ್ದೆ 2019 ಜುಲೈ 25ರಂದು ಲೋಕಸಭೆಯಲ್ಲಿ ಹಾಗೂ ರಾಜ್ಯಸಭೆಯಲ್ಲಿ ಅಂಗೀಕಾರಗೊಂಡಿತ್ತು. ಈ ಮಸೂದೆ ಪ್ರಕಾರ, ಬರವಣಿಗೆ ಮೂಲಕವಾಗಲಿ, ಮೌಖಿಕವಾಗಿ ಹಾಗೂ ವಿದ್ಯುನ್ಮಾನ ಸಂಪರ್ಕದ ಮೂಲಕ ತ್ರಿವಳಿ ತಲಾಖ್ ನೀಡುವುದು ಕಾನೂನು ಬಾಹಿರ ಮತ್ತು ಶಿಕ್ಷಾರ್ಹ ಅಪರಾಧವಾಗಿದೆ. ತ್ರಿವಳಿ ತಲಾಖ್ ಆರೋಪ ಸಾಬೀತಾದಲ್ಲಿ ಮೂರು ವರ್ಷಗಳ ಜೈಲುಶಿಕ್ಷೆಗೆ ಗುರಿಯಾಗಬೇಕಾಗುತ್ತದೆ.

ಮೊಬೈಲ್ ಕರೆ ಮಾಡಿ ತಲಾಖ್ ಕೊಟ್ಟಿದ್ದ ಪತಿ:

ಸಂತ್ರಸ್ತೆಯ ತಂದೆಯ ದೂರಿನ ಪ್ರಕಾರ, ಆಗಸ್ಟ್ 6ರಂದು ಮುಂಬೈನಲ್ಲಿ ಉದ್ಯೋಗದಲ್ಲಿರುವ ಗಂಡ ನಫೀಸ್ ಹೆಂಡತಿಗೆ(ಸಯೀದಾ) ಮೊಬೈಲ್ ಕರೆ ಮಾಡಿ ತಲಾಖ್ ನೀಡಿದ್ದ. ಈ ಹಿನ್ನೆಲೆಯಲ್ಲಿ ಮಗಳು ಸಯೀದಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲು ತೆರಳಿದ್ದಳು. ಆದರೆ ಪೊಲೀಸರು ಪತಿ ಮುಂಬೈಯಿಂದ ಬರಲಿ ಇತ್ಯರ್ಥಪಡಿಸುವ ಭರವಸೆ ನೀಡಿ ಸಯೀದಾಳನ್ನು ವಾಪಸ್ ಕಳುಹಿಸಿಕೊಟ್ಟಿರುವುದಾಗಿ ತಂದೆ ತಿಳಿಸಿದ್ದಾರೆ.

ಪತಿ ತನಗೆ ನಿರಂತರವಾಗಿ ಹೊಡೆಯುತ್ತಿದ್ದರು. ಆದರೆ ಯಾವತ್ತೂ ನಾನು ವಿರೋಧ ವ್ಯಕ್ತಪಡಿಸಿಲ್ಲ. ಆದರೆ ಈಗ ತಲಾಖ್ ನೀಡಿದ್ದಾರೆ ಎಂದು ಸಯೀದಾ ಮತ್ತು ಪತಿ ನಫೀಸ್ ನನ್ನು ಠಾಣೆಗೆ ಕರೆಯಿಸಿದ್ದಾಗ ಆರೋಪಿಸಿದ್ದಳು. ಕೊನೆಗೆ ಪೊಲೀಸರ ಮಧ್ಯಸ್ಥಿಕೆಯಲ್ಲಿ ರಾಜಿ ಮಾಡಿಸಿದ್ದರು. ತನಗೆ ಮತ್ತೊಂದು ಅವಕಾಶ ಕೊಡಿ ಎಂದು ಪತಿ ಪೊಲೀಸರಲ್ಲಿ ಮನವಿ ಮಾಡಿಕೊಂಡಿದ್ದ ಎಂದು ಸಯೀದಾ ತಂದೆ ರಮ್ಜಾನ್ ಅಲಿ ಖಾನ್ ವಿವರಿಸಿದ್ದಾರೆ.

Advertisement

ಕಳೆದ ವಾರ ದಂಪತಿಯನ್ನು ಠಾಣೆಗೆ ಕರೆಯಿಸಿ, ನಫೀಸ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವ ಮುನ್ನ, ನೀವಿಬ್ಬರೂ ಒಟ್ಟಿಗೆ ಇರಿ ಎಂದು ಸಲಹೆ ನೀಡಿ ಕಳುಹಿಸಿಕೊಟ್ಟಿದ್ದರು. ಈ ಸಂದರ್ಭದಲ್ಲಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲು ಹೋದ ವಿಚಾರಕ್ಕೆ ಸಂಬಂಧಿಸಿದಂತೆ ಪತಿ, ಪತ್ನಿ ನಡುವೆ ವಾಗ್ವಾದ ನಡೆದಿದ್ದು, ಈ ವೇಳೆ ಗಂಡ ಮತ್ತು ಮಾವ ಆಕೆಯನ್ನು ಹೊರಗೆ ತಳ್ಳಿ, ಮೈಮೇಲೆ ಸೀಮೆಎಣ್ಣೆ ಸುರಿದು ಬೆಂಕಿಹಚ್ಚಿರುವುದಾಗಿ ವರದಿ ತಿಳಿಸಿದೆ. ಈ ಘಟನೆಗೆ ಸಯೀದಾಳ ಅಪ್ರಾಪ್ತ ವಯಸ್ಸಿನ ಮಗಳು ಪ್ರತ್ಯಕ್ಷ ಸಾಕ್ಷಿಯಾಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ದೂರನ್ನು ದಾಖಲಿಸಿಕೊಂಡಿರುವ ಪೊಲೀಸರು ನಫೀಸ್ ಹಾಗೂ ತಂದೆಯನ್ನು ಬಂಧಿಸಿದ್ದು, ಉಳಿದವರನ್ನು ಬಂಧಿಸಲಾಗುವುದು ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ದೂರಿನಲ್ಲಿ ಎಂಟು ಮಂದಿಯ ಹೆಸರನ್ನು ದಾಖಲಿಸಲಾಗಿದ್ದು, ತನಿಖೆ ನಡೆಯುತ್ತಿದೆ. ಉಳಿದವರನ್ನು ಬಂಧಿಸಲು ಕಾರ್ಯಪ್ರವೃತ್ತರಾಗಿರುವುದಾಗಿ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಬಿಎಸ್ ದುಬೆ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next