Advertisement

ಮನೆ ಆಸೆಗಾಗಿ ಪತಿ ಅಪಹರಣ

12:26 PM Oct 10, 2018 | |

ಬೆಂಗಳೂರು: ಬಾಡಿಗೆ ಮನೆಗಳನ್ನು ತನ್ನ ಹೆಸರಿಗೆ ನೊಂದಾಯಿಸಲು ನಿರಾಕರಿಸಿದ ಪತಿಯನ್ನು ಅಪಹರಿಸಿ ಹಲ್ಲೆ ನಡೆಸಿ ಕೊಲೆಗೆ ಯತ್ನಿಸಿದ ಪತ್ನಿ, ಇಬ್ಬರು ಮಕ್ಕಳು ಸೇರಿ ನಾಲ್ವರು ಎಚ್‌ಎಎಲ್‌ ಪೊಲೀಸರ ಬಲೆಗೆ ಬಿದ್ದಿದ್ದಾರೆ.

Advertisement

ಕಿತ್ತಗಾನಹಳ್ಳಿಯ ಮುನಿರತ್ನಮ್ಮ (45), ಈಕೆಯ ಮಕ್ಕಳಾದ ಚೇತನ್‌ (20), ಅಭಿಷೇಕ್‌ (19) ಹಾಗೂ ಮುನಿರತ್ನಮ್ಮ ಸಹೋದರ ಶಿವಕುಮಾರ್‌ (42) ಬಂಧಿತರು. ಆರೋಪಿಗಳು ಅ.5ರಂದು ಎಚ್‌ಎಎಲ್‌ನ ಕಾಳಪ್ಪ ಲೇಔಟ್‌ ನಿವಾಸಿ ರಾಮಚಂದ್ರ (48) ಅವರನ್ನು ಅಪಹರಿಸಿ ಕೊಲೆಗೆ ಯತ್ನಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಸರಕು ಸಾಗಾಟ ಆಟೋ ಇಟ್ಟುಕೊಂಡಿರುವ ರಾಮಚಂದ್ರ ಕಳೆದ 21 ವರ್ಷಗಳ ಹಿಂದೆ ಆರೋಪಿ ಮುನಿರತ್ನಮ್ಮರನ್ನು ಮದುವೆಯಾಗಿದ್ದರು. ದಂಪತಿಗೆ ಚೇತನ್‌ ಮತ್ತು ಅಭಿಷೇಕ್‌ ಎಂಬ ಮಕ್ಕಳಿದ್ದಾರೆ. ರಾಮಚಂದ್ರ ಹೆಸರಿನಲ್ಲಿ ಕಿತ್ತಗಾನಹಳ್ಳಿಯಲ್ಲಿ ತಮ್ಮ ಹೆಸರಿನಲ್ಲಿದ್ದ ಒಂದೂವರೆ ಗುಂಟೆ ಖಾಲಿ ನಿವೇಶನದಲ್ಲಿ ಕೆಲ ವರ್ಷಗಳ ಹಿಂದೆ 8 ಮನೆಗಳನ್ನು ನಿರ್ಮಿಸಿ ಬಾಡಿಗೆಗೆ ನೀಡಿದ್ದರು.

ಸಂಚು ಹೇಗೆ?: ಮೊದಲೇ ಸಂಚು ರೂಪಿಸಿದಂತೆ ನಾಲ್ವರು ಆರೋಪಿಗಳ ಪೈಕಿ ಒಬ್ಟಾತ ಅ.5ರಂದು ರಾತ್ರಿ 8 ಗಂಟೆ ಸುಮಾರಿಗೆ ಅಪರಿಚಿತ ಮೊಬೈಲ್‌ ನಂಬರ್‌ನಿಂದ ಕರೆ ಮಾಡಿ, ಮನೆ ಶಿಫ್ಟ್ ಮಾಡಬೇಕಿದ್ದು, ವಸ್ತುಗಳನ್ನು ಕೊಂಡೊಯ್ಯಲು ಗೂಡ್ಸ್‌ರಿûಾ ಬೇಕಿದೆ ಎಂದಿದ್ದರು. ಇದನ್ನು ನಂಬಿದ ರಾಮಚಂದ್ರ ಆರೋಪಿಗಳು ಸೂಚಿಸಿದ ಎಚ್‌ಎಎಲ್‌ ಕಾಪೌಂಡ್‌ ಬಳಿ ಹೋಗಿದ್ದಾರೆ. ಸ್ಥಳಕ್ಕೆ ಹೋಗುತ್ತಿದ್ದಂತೆ ಇಬ್ಬರು ಮತ್ತು ಭಾಮೈದ ಶಿವಕುಮಾರ್‌ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದಾರೆ.

ಹಲ್ಲೆಯಿಂದ ಅರೆಪ್ರಜ್ಞಾಸ್ಥಿತಿ ತಲುಪಿದ ರಾಮಚಂದ್ರರ ಕೈ, ಕಾಲುಗಳನ್ನು ಕಟ್ಟಿಹಾಕಿದ್ದಾರೆ. ಬಳಿಕ ಅವರದ್ದೇ ಗೂಡ್ಸ್‌ ರಿûಾದಲ್ಲಿ ಅಪಹರಿಸಿ ಕಿತ್ತಗಾನಹಳ್ಳಿ ಮನೆಯ ಕೊಠಡಿಯೊಂದರಲ್ಲಿ ಕೂಡಿ ಹಾಕಿದ್ದಾರೆ. ಕೆಲ ಹೊತ್ತಿನ ಬಳಿಕ ಕೊಠಡಿಗೆ ಬಂದ ಪತ್ನಿ ಮುನಿರತ್ನಮ್ಮ ಪತಿ ಮೇಲೆ ಹಲ್ಲೆ ನಡೆಸಿದಲ್ಲದೆ, ಕಿತ್ತಗಾನಹಳ್ಳಿಯ ಬಾಡಿಗೆ ಮನೆಗಳನ್ನು ತನ್ನ ಹೆಸರಿಗೆ ನೊಂದಾಯಿಸುವಂತೆ ಬೆದರಿಸಿದ್ದಾರೆ.

Advertisement

ಸ್ಥಳೀಯರಿಂದ ಪ್ರಕರಣ ಹೊರಗೆ: ಈ ನಡುವೆ ಅ.8ರಂದು ತೀವ್ರ ಗಾಯಗಳಿಂದ ರಾಮಚಂದ್ರ ಜೋರಾಗಿ ಚೀರಾಟ ನಡೆಸುತ್ತಿದ್ದರು. ಇದನ್ನು ಕೇಳಿದ ಸ್ಥಳೀಯರೊಬ್ಬರು ಕಿಟಕಿಯಿಂದ ನೋಡಿದಾಗ ರಾಮಚಂದ್ರರನ್ನು ಗೃಹ ಬಂಧನದಲ್ಲಿರಿಸಿರುವುದು ಕಂಡು ಬಂದಿದೆ.

ಕೂಡಲೇ ರಾಮಚಂದ್ರ ಸಹೋದರನಿಗೆ ಕರೆ ಮಾಡಿ ವಿಚಾರ ತಿಳಿಸಿದ್ದಾರೆ. ಈ ಸಂಬಂಧ ಸಹೋದರ ರಾಮಚಂದ್ರ ಕಾಣಿಯಾಗಿದ್ದಾರೆ ಎಂದು ಎಚ್‌ಎಎಲ್‌ ಠಾಣೆಗೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ತನಿಖೆ ನಡೆಸಿದ ಪೊಲೀಸರು ಅ.9ರಂದು ರಾಮಚಂದ್ರರನ್ನು ರಕ್ಷಿಸಿ ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.

ಪತ್ನಿಯಿಂದಲೇ ಸಂಚು: ಕೌಟುಂಬಿಕ ವಿಚಾರವಾಗಿ 4 ವರ್ಷಗಳಿಂದ ದಂಪತಿ ನಡುವೆ ಆಗಾಗ್ಗೆ ಜಗಳ ನಡೆಯುತ್ತಿತ್ತು. ಇದರಿಂದ ಆಕ್ರೋಶಗೊಂಡ ಮುನಿರತ್ನಮ್ಮ ತನ್ನ ಇಬ್ಬರು ಮಕ್ಕಳನ್ನು ತವರು ಮನೆಗೆ ಕರೆದೊಯ್ದರು. ಬಳಿಕ ತಾನೂ ಹಾಗೂ ಮಕ್ಕಳ ಜೀವನ ನಿರ್ವಹಣೆಗಾಗಿ ಕಿತ್ತಗಾನಹಳ್ಳಿಯಲ್ಲಿರುವ ಬಾಡಿಗೆ ಮನೆಗಳನ್ನು ತಮ್ಮ ಹೆಸರಿಗೆ ನೊಂದಾಯಿಸುವಂತೆ ಪತಿಗೆ ಪೀಡಿಸುತ್ತಿದ್ದರು.

ಆದರೆ, ಇದಕ್ಕೆ ರಾಮಚಂದ್ರ ಒಪ್ಪಿರಲಿಲ್ಲ. ಇದಕ್ಕೆ ಕೋಪಗೊಂಡ ಮುನಿರತ್ನಮ್ಮ ತನ್ನ ಇಬ್ಬರು ಮಕ್ಕಳು ಹಾಗೂ ಸಹೋದರನ ಜತೆ ಸೇರಿ ಪತಿಯನ್ನು ಅಪಹರಿಸಿ ಜಾಗವನ್ನು ಪಡೆದುಕೊಳ್ಳಲು ಸಂಚು ರೂಪಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next