ಚೆನ್ನೈ: ಗಂಡ ಕಳೆದು ಹೋಗಿದ್ದಾನೆಂದು ಹುಡುಕುತ್ತ ಆಕೆ ಎಲ್ಲೆಲ್ಲಿ ಸುತ್ತಿದ್ದಾಯಿತು. ಎಲ್ಲರ ಬಳಿ ಹೇಳಿ ಅತ್ತು ಕರೆದು ಮಾಡಿದ್ದಾಯಿತು. ಆದರೆ ಏನೂ ಪ್ರಯೋಜನವಾಗಿರಲಿಲ್ಲ. ಆದರೆ ತಂತ್ರಜ್ಞಾನದ ಈ ದಿನಗಳಲ್ಲಿ ಏನು ಕೂಡ ಸಾಧ್ಯವಿದೆ ಎಂಬುದು ನಡೆದು ಹೋಗಿದೆ. ಅಚ್ಚರಿ ಎಂದರೆ ಇನ್ನು ಬರುವುದೇ ಕಷ್ಟ, ಎಂದು ಕೊಂಡಿದ್ದ, ಕಳೆದು ಹೋದ ಗಂಡ ಟಿಕ್‌ಟ್ಯಾಕ್‌ನಲ್ಲಿ ಪತ್ತೆ ಯಾಗಿದ್ದಾನೆ! ಹೌದು ಅಚ್ಚರಿಯಾದರೂ, ಇದು ಅಪ್ಪಟ ಸತ್ಯ. ಮೂರು ವರ್ಷದ ಹಿಂದೆ ಪತ್ನಿ ಜತೆ ಜಗಳವಾಡಿ ಮನೆ ಬಿಟ್ಟು ಹೋಗಿದ್ದ ಪತಿ, ಈಗ ಟಿಕ್‌ಟ್ಯಾಕ್ ವಿಡಿಯೋ ಮೂಲಕ ಸಿಕ್ಕಿ ಬಿದ್ದಿದ್ದಾನೆ. ಪೊಲೀಸರಿಗೆ ದೂರು ಕೊಟ್ಟು, ಎಲ್ಲ ಕಡೆ ಹುಡು ಕಾಡಿತಲೆ ಮೇಲೆ ಕೈಹೊತ್ತು ಕುಳಿತಿದ್ದ ಪತ್ನಿಗೆ ಟಿಕ್‌ಟ್ಯಾಕ್‌ನಿಂದಾಗಿ ಹೊಸ ಬದುಕೇ ಸಿಕ್ಕಿದಂತಾಗಿದೆ.
ಆಗಿದ್ದಿಷ್ಟು; ಕೃಷ್ಣ ಗಿರಿ ಜಿಲ್ಲೆಯ ಸುರೇಶ್‌ಗೆ ಜಯಪ್ರದಾ ಎಂಬಾಕೆಯ ಜತೆಗೆ ವಿವಾಹವಾಗಿತ್ತು. ಇಬ್ಬರು ಮುದ್ದಾದ ಮಕ್ಕಳು ಇದ್ದಾರೆ. ಸಂಸಾರವೆಂದರೆ ಜಗಳ-ಕೋಪ-ತಾಪ ಇದ್ದದ್ದೆ ತಾನೆ? 2016ರಲ್ಲಿ ಏನೋ ಕಾರಣಕ್ಕೆ ಸುರೇಶ್ ಪತ್ನಿ ಜತೆ ಜಗಳವಾಡಿದ. ಜತೆಗೆ ಮನೆಯನ್ನೂ ಬಿಟ್ಟು ಹೋದ. ಗಂಡ ತಾನೇ ಮನೆಗೆ ಬರಬಹುದೆಂದು ನಿರೀಕ್ಷಿಸುತ್ತಿದ್ದ ಪತ್ನಿಗೆ ನಿರಾಸೆಯಾಯಿತು. ಪತಿರಾಯ ಬರಲಿಲ್ಲ. ಸೀದಾ ಠಾಣೆಗೆ ತೆರಳಿ ದೂರು ನೀಡಿದರೂ, ಫಲ ಶೂನ್ಯ. ಎಷ್ಟು ಹುಡುಕಿದರೂ ಪತ್ತೆಯಾಗಿರಲಿಲ್ಲ.
ಅಚಾನಕ್ ಆಗಿ ಕೆಲ ದಿನಗಳ ಹಿಂದೆ ಜಯಪ್ರದಾ ಸಂಬಂಧಿ ಟಿಕ್‌ಟಾಕ್‌ನಲ್ಲಿ ಸುರೇಶ್‌ಗೆ ಹೋಲುವ ವ್ಯಕ್ತಿಯನ್ನು ಕಂಡಿದ್ದಾಗಿ ಹೇಳಿದರು. ಅಷ್ಟಾಗಿ ಆಕೆ ಸುಮ್ಮನೆ ಕೂರಲಿಲ್ಲ. ಎಲ್ಲರ ಬಳಿ ಹೇಳಿದ್ದಳು. ಅದರಂತೆ ಹಲವರು ಪರಿಶೀಲನೆ ನಡೆಸಿದ್ದು, ಆ ವ್ಯಕ್ತಿ ಸುರೇಶ್ ಎಂದು ಖಚಿತ ಮಾಡಿಕೊಂಡು ಪೊಲೀಸರ ಸಹಾಯ ಪಡೆದು ಆತನನ್ನು ಪತ್ತೆ ಮಾಡಿದ್ದಾರೆ. ಕೌಟುಂಬಿಕ ಸಮಸ್ಯೆ ಕಾರಣ ಆತ ಪತ್ನಿ ತೊರೆದಿದ್ದನಂತೆ. ಹೊಸೂರಿನಲ್ಲಿ ನೆಲೆಸಿದ್ದ ಆತ ಟಿಕ್‌ಟಾಕ್ ವಿಡಿಯೋದಲ್ಲಿರುವ ಮಹಿಳೆ ಜೊತೆ ಸಂಬಂಧ ಹೊಂದಿದ್ದ ಎಂದು ಪೊಲೀಸರು ಹೇಳಿದ್ದಾರೆ. ಸುರೇಶ್, ಜಯಪ್ರದಾರಿಗೆ ಆಪ್ತ ಸಮಾಲೋಚನೆ ನೀಡಿ ಅವರನ್ನು ಮನೆಗೆ ಕಳಿಸಲಾಗಿದೆ.