ಬೆಂಗಳೂರು: ನವ ವಿವಾಹಿತನೊಬ್ಬ ಪತ್ನಿಯೊಂದಿಗಿನ ಖಾಸಗಿ ವಿಡಿಯೋ ಸೆರೆಹಿಡಿದು 10 ಲಕ್ಷ ರೂ. ಹಾಗೂ ಪೂರ್ತಿ ವೇತನ ನೀಡುವಂತೆ ಪತ್ನಿಗೆ ಬ್ಲ್ಯಾಕ್ ಮೇಲ್ ಮಾಡಿರುವ ವಿಚಿತ್ರ ಪ್ರಕರಣವೊಂದು ತಡವಾಗಿ ಬೆಳಕಿಗೆ ಬಂದಿದೆ.
ಬೆಂಗಳೂರಿನ 28 ವರ್ಷದ ಮಹಿಳೆ ಕೊಟ್ಟ ದೂರಿನ ಆಧಾರದ ಮೇಲೆ ಆಕೆಯ ಪತಿ ಸ್ವರೂಪ್ ವಿರುದ್ಧ ಬಸವನಗುಡಿ ಮಹಿಳಾ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
2022 ನವೆಂಬರ್ ನಲ್ಲಿ ದೂರುದಾರ ಮಹಿಳೆಯು ಉದ್ಯಮಿ ಸ್ವರೂಪ್ ಜೊತೆಗೆ ಹಸಮಣೆ ಏರಿದ್ದರು. ಇದಾದ ಬಳಿಕ ನವ ವಿವಾಹಿತರು ಹನಿಮೂನ್‌ಗೆ ಥೈಲ್ಯಾಂಡ್‌ಗೆ ಹೋಗಿದ್ದರು. ಆ ವೇಳೆ ತನ್ನ ವರಸೆ ಬದಲಿಸಿದ ಸ್ವರೂಪ್ ಮೊಬೈಲ್‌ನಲ್ಲಿ ಅಶ್ಲೀಲ ವಿಡಿಯೋ ತೋರಿಸಿ ಅದೇ ರೀತಿಯಲ್ಲಿ ತನ್ನೊಂದಿಗೆ ವರ್ತಿಸುವಂತೆ ಕಿರುಕುಳ ಕೊಟ್ಟಿದ್ದ. ಸಾಲದಕ್ಕೆ ಬಲವಂತವಾಗಿ ಮದ್ಯಪಾನ ಮಾಡಿಸಿದ್ದ. ಮತ್ತೆ ಬೆಂಗಳೂರಿಗೆ ಮರಳಿ ಕೆಲ ದಿನಗಳ ಬಳಿಕ ಸ್ವರೂಪ್‌ಗೆ ಕೆಲಸವಿಲ್ಲದ ಸಂಗತಿ ಪತ್ನಿ ಗಮನಕ್ಕೆ ಬಂದಿದೆ. ಈ ಬಗ್ಗೆ ಪ್ರಶ್ನಿಸಿದಾಗ ಸೂಕ್ತ ರೀತಿಯಲ್ಲಿ ಪತಿ ಸ್ಪಂದಿಸುತ್ತಿರಲಿಲ್ಲ. ಇನ್ನು ಮನೆಯಲ್ಲಿ ಪಾಲಕರಿಲ್ಲದ ಸಮಯ ನೋಡಿಕೊಂಡು ಪತ್ನಿಯನ್ನು ಸೇರಲು ಬಯಸಿ ಮೊಬೈಲ್‌ನಲ್ಲಿ ಖಾಸಗಿ ದೃಶ್ಯವನ್ನು ಸೆರೆ ಹಿಡಿಯುತ್ತಿದ್ದ. ಈ ನಡುವೆ ವೇತನವನ್ನು ತನ್ನ ಖಾತೆಗೆ ವರ್ಗಾವಣೆ ಮಾಡುವಂತೆ ಪತ್ನಿಗೆ ಹಿಂಸೆಕೊಟ್ಟಿದ್ದ. ವೇತನದ ದುಡ್ಡು ಹಾಗೂ ತವರು ಮನೆಯಿಂದ 10 ಲಕ್ಷ ರೂ. ತರದಿದ್ದರೆ ಖಾಸಗಿ ದೃಶ್ಯವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕುವುದಾಗಿ ಬೆದರಿಸಿದ್ದ. ಜೊತೆಗೆ ಖಾಸಗಿ ದೃಶ್ಯ ಸೆರೆಹಿಡಿದಿರುವುದನ್ನು ಯಾರ ಬಳಿಯ ಹೇಳದಂತೆ ಬೆದರಿಸಿದ್ದಾನೆ ಎಂದು ಪತ್ನಿ ದೂರಿನಲ್ಲಿ ಆರೋಪಿಸಿ, ಠಾಣೆ ಮೆಟ್ಟಿಲೇರಿದ್ದಾರೆ.
ವಿವಾಹವಾದ ಬಳಿಕ ಅಸಲಿ ಬಣ್ಣ ಬಯಲು: ವಿವಾಹಕ್ಕೂ ಮೊದಲು ತನಗೆ ಸ್ವಂತ ಕನಸ್ಟ್ರಕ್ಷನ್ ಕಂಪನಿಯಿದ್ದು, ಹಲವು ಪ್ರಾಜೆಕ್ಟ್ ಮಾಡುತ್ತಿರುವುದಾಗಿ ನಂಬಿಸಿದ್ದ. ಖಾಸಗಿ ಕಂಪನಿಯಲ್ಲಿ ಉತ್ತಮ ವೇತನದ ಕೆಲಸದಲ್ಲಿದ್ದ ದೂರುದಾರ ಮಹಿಳೆ ಹಲವು ಕನಸು ಕಟ್ಟಿಕೊಂಡು ಸಪ್ತಪದಿ ತುಳಿಯಲು ಒಪ್ಪಿದ್ದಳು. ಕೆಲ ದಿನಗಳಲ್ಲಿ ಪತಿಯ ಅಸಲಿ ಬಣ್ಣ ಬಯಲಾಗಿತ್ತು. ಇನ್ನು ವಾರಾಂತ್ಯ ರಜೆಯಲ್ಲಿ ಪತಿ ಊರಿಗೆ ಕರೆದುಕೊಂಡು ಹೋಗಿ ಮತ್ತೆ ಬೆಂಗಳೂರಿಗೆ ತಂದು ಬಿಡುತ್ತಿದ್ದ ಎಂದು ಪತ್ನಿ ದೂರಿನಲ್ಲಿ ತಿಳಿಸಿದ್ದಾರೆ. ಬಸವನಗುಡಿ ಮಹಿಳಾ ಠಾಣೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.