Advertisement

ಪತಿ ನಿಧನ, ಪತ್ನಿ ಆಸ್ಪತ್ರೆಯಲ್ಲಿ

09:25 AM Apr 07, 2018 | Karthik A |

ಬೆಳ್ತಂಗಡಿ: ಪತ್ನಿ ಮತ್ತು ಪತಿಗೆ ಸ್ವಲ್ಪವೇ ಹೊತ್ತಿನ ಅಂತರದಲ್ಲಿ ಹೃದಯಾಘಾತ ಸಂಭವಿಸಿ, ಪತಿ ನಿಧನ ಹೊಂದಿದ್ದು, ಪತ್ನಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಘಟನೆ ಓಡಿಲ್ನಾಳ ಗ್ರಾಮದ ಕರ್ನಂತೋಡಿ ಎಂಬಲ್ಲಿ ನಡೆದಿದೆ. ಕೃಷಿಕರಾಗಿರುವ ಗೆಳೆಯ ಗೌಡ (65) ಮೃತಪಟ್ಟಿದ್ದು, ಇವರ ಪತ್ನಿ ಪುಷ್ಪಾ (55) ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Advertisement

ಅನಾರೋಗ್ಯದಿಂದ ಬಳಲುತ್ತಿದ್ದ ಪುಷ್ಪಾ ಅವರಿಗೆ ಎ. 6ರಂದು ಬೆಳಗ್ಗೆ 3 ಗಂಟೆ ಸುಮಾರಿಗೆ ಉಸಿರಾಟದ ಸಮಸ್ಯೆ ಉಂಟಾಗಿದ್ದು, ಇಬ್ಬರು ಮಕ್ಕಳ ಜತೆ ಗೆಳೆಯ ಗೌಡ ಅವರೂ ರಿಕ್ಷಾದಲ್ಲಿ ಆಸ್ಪತ್ರೆಗೆ ತೆರಳಿದ್ದರು. ಈ ವೇಳೆ ಆರೋಗ್ಯ ಚೀಟಿ ಮನೆಯಲ್ಲೇ ಇರುವ ವಿಚಾರ ತಿಳಿದು ಮತ್ತೆ ಮನೆಗೆ ಹಿಂದಿರುಗಿದ್ದಾರೆ. ಈ ವೇಳೆ ಗೆಳೆಯ ಗೌಡ ಅವರಿಗೆ ಎದೆನೋವು ಕಾಣಿಸಿಕೊಂಡಿದ್ದು, ಮನೆಯ ಬಳಿಯೇ ಕುಸಿದಿದ್ದಾರೆ. ತತ್‌ಕ್ಷಣ ಸ್ಥಳೀಯ ಖಾಸಗೀ ಆಸ್ಪತ್ರೆಗೆ ಕರೆದುಕೊಂಡು ಹೋದರೂ ಪ್ರಯೋಜನವಾಗಲಿಲ್ಲ.

ಮಕ್ಕಳಿಗೆ ಆತಂಕ
ಇತ್ತ ತಂದೆ ನಿಧನರಾದದ್ದು, ತಾಯಿಗೂ ಹೃದಯಾಘಾತ ಉಂಟಾಗಿರುವುದನ್ನು ಗಮನಿಸಿದ ಇಬ್ಬರು ಪುತ್ರರಿಗೆ ಆಘಾತ ಉಂಟಾಗಿದೆ. ಪುಷ್ಪಾ ಅವರನ್ನು ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು, ಬಳಿಕ ಅವರು ಚೇತರಿಸಿಕೊಂಡಿದ್ದಾರೆ. ಪತಿ ನಿಧನರಾಗಿರುವ ವಿಚಾರ ತಿಳಿದರೆ ಅವರು ಆಘಾತಕ್ಕೆ ಈಡಾಗಬಹುದು ಎಂಬ ದೃಷ್ಟಿಯಿಂದ ತಂದೆಯ ನಿಧನದ ವಿಚಾರ ತಾಯಿಗೆ ತಿಳಿಸಿಲ್ಲ. ತಂದೆಯನ್ನು ಕಳೆದುಕೊಂಡಿದ್ದೇವೆ, ತಾಯಿಯನ್ನಾದರೂ ಕಾಪಾಡಿಕೊಳ್ಳಬೇಕು ಎಂದು ದುಃಖಿತರಾಗಿರುವ ಕಿರಿಯ ಪುತ್ರ ಗೋವಿಂದ ಹೇಳಿದ್ದಾರೆ.

ಕೃಷಿಕರು
ಗೆಳೆಯ ಗೌಡ ಕೃಷಿಕರಾಗಿದ್ದು, ಹೈನುಗಾರಿಕೆ ನಡೆಸುತ್ತಿದ್ದರು. ಹೆಂಚಿನ ಮನೆಯಲ್ಲಿ ಪತ್ನಿ ಹಾಗೂ ಇಬ್ಬರು ಪುತ್ರರೊಂದಿಗೆ ಜೀವನ ನಡೆಸುತ್ತಿದ್ದರು. ಹಿರಿಯ ಪುತ್ರ ಶೋಭಾನಂದ ಬೆಳ್ತಂಗಡಿಯಲ್ಲಿ ಗ್ಯಾರೇಜ್‌ ನಡೆಸುತ್ತಿದ್ದಾರೆ. ಕಿರಿಯ ಪುತ್ರ ಗೋವಿಂದ ಅವರೂ ಟಯರ್‌ ಪಂಕ್ಚರ್‌ ಆಂಗಡಿ ನಡೆಸುತ್ತಿದ್ದು, ಇಬ್ಬರೂ ಅವಿವಾಹಿತರು.

ಸುದೀರ್ಘ‌ ಅನಾರೋಗ್ಯವಿರಲಿಲ್ಲ
ಗೆಳೆಯ ಗೌಡ ಅವರು ಆರೋಗ್ಯವಂತರಾಗಿದ್ದು, ಕೃಷಿ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದರು. ಪುಷ್ಪಾ ಅವರು ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಆದರೆ ಶುಕ್ರವಾರ ಬೆಳಗ್ಗೆ ಆರೋಗ್ಯದಲ್ಲಿ ಏರುಪೇರು ಉಂಟಾಗಿದ್ದರಿಂದ ಆಸ್ಪತ್ರೆಗೆ ದಾಖಲಿಸಲು ಕರೆದೊಯ್ಯಲಾಗಿದೆ.

Advertisement

ಕುಟುಂಬಕ್ಕೆ ಆತಂಕ
ಗೆಳೆಯ ಗೌಡ ನಿಧನರಾಗಿದ್ದರೂ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಪುಷ್ಪಾ ಅವರಿಗೆ ನಿಧನದ ಮಾಹಿತಿ ತಿಳಿದಿಲ್ಲ. ಶುಕ್ರವಾರ ಮಧ್ಯಾಹ್ನ ಗೆಳೆಯ ಗೌಡ ಅವರ ಅಂತ್ಯಸಂಸ್ಕಾರ ನಡೆಸಲಾಗಿದೆ. ಈ ವೇಳೆ ಪುಷ್ಪಾ ಅವರನ್ನು ಆಸ್ಪತ್ರೆಯಿಂದ ಕರೆದುಕೊಂಡು ಬರುವ ನಿರ್ಧಾರವನ್ನು ಕುಟುಂಬಸ್ಥರು ಮಾಡಿದ್ದರು. ಆದರೆ ಮುಂದಿನ ಅನಾಹುತ ತಪ್ಪಿಸುವ ಸಲುವಾಗಿ ನಿಧನದ  ವಿಷಯವನ್ನು  ಮುಚ್ಚಿಡಲಾಗಿದೆ. ಸದ್ಯ ಮಂಗಳೂರು ಆಸ್ಪತ್ರೆಯಲ್ಲಿ  ಚಿಕಿತ್ಸೆ  ಪಡೆಯುತ್ತಿದ್ದು , ಚೇತರಿಸಿಕೊಳ್ಳುತ್ತಿದ್ದಾರೆ. ಆದರೆ ಮಾಹಿತಿ ನೀಡುವುದು ಹೇಗೆ ಎಂಬ ಆತಂಕ ಮನೆ ಮಂದಿಯದ್ದು.

Advertisement

Udayavani is now on Telegram. Click here to join our channel and stay updated with the latest news.

Next