ಅಂತೂ ಇಂತೂ ಶಾಲೆಗೇನೋ ತಲುಪಿದೆವು. ಆದರೆ ಅಲ್ಲಿ ಟೀಚರ್‌ಗಳು ಏನು ಮಾಡುತ್ತಾರೆಂಬ ತಳಮಳ ನಮಗೆ. ಆಗ ಅಲ್ಲಿಗೆ ದೈಹಿಕ ಶಿಕ್ಷಕರು ಭೇಟಿ ಕೊಟ್ರಾ. ನಮಗೆಲ್ಲರಿಗೂ ನಾಗರಬೆತ್ತದಿಂದ ಎರಡೇಟು ಬಿತ್ತು.
ನಾನಾಗ ಎರಡನೇ ಕ್ಲಾಸಿನಲ್ಲಿ ಇದ್ದೆ. ನನ್ನ ಐದಾರು ಸ್ನೇಹಿತರೊಂದಿಗೆ ಕೂಡಿಕೊಂಡು ಮಾಸ್ಟರ್ ಪ್ಲಾನ್ ಹಾಕಿದೆ. ಮಧ್ಯಾಹ್ನ ಬೇಗ ಬುತ್ತಿ ಊಟ ತಿಂದು ಶಾಲೆಯ ಆಚೆ ಭಾಗಕ್ಕೆ ಹೋಗೋಣವೆಂದೆ. ಅಲ್ಲಿ ವಿವಿಧ ಜಾತಿಯ ಹೂ-ಹಣ್ಣುಗಳು ಹೇರಳವಾಗಿ ಇದ್ದವು. ಅಲ್ಲಿ ಹೋಗಿ ನಮ್ಮೆಲ್ಲರ ನೆಚ್ಚಿನ ನೇರಳೆ ಹಣ್ಣನ್ನು ತಿನ್ನಬೇಕೆಂಬುದು ನಮ್ಮೆಲ್ಲರ ಹೆಬ್ಬಯಕೆಯಾಗಿತ್ತು. ಅದಕ್ಕೆ ನಮ್ಮ ತಂಡದ ಸದಸ್ಯರು ಸಮ್ಮತಿ ಸೂಚಿಸಿದರು. ಊಟ ಮುಗಿಸಿ ಸುತ್ತಮುತ್ತ ಯಾರೂ ಇಲ್ಲವೆಂದು ಪರಿಶೀಲಿಸಿ ಲೆಫ್ಟ್-ರೈಟ್ ಹೇಳುತ್ತಾ, ನೇರಳೆ ಹಣ್ಣಿನ ಜಾಡನ್ನು ಅರಸುತ್ತ ಮುಂದೆ ಸಾಗಿದೆವು.
ನಡೆಯುತ್ತ ನಡೆಯುತ್ತ ದೂರ ಬಂದಿದ್ದೇ ಗೊತ್ತಾಗಲಿಲ್ಲ. ದುರದೃಷ್ಟವಶಾತ್ ನೇರಳೆ ಹಣ್ಣೂ ಸಿಗಲಿಲ್ಲ. ವಾಪಸ್ ಹೋಗೋಣವೆಂದರೆ ದಾರಿಯೂ ಸಿಗುತ್ತಿಲ್ಲ. ಏನು ಮಾಡೋಣವೆಂದು ಗೊತ್ತೇ ಆಗಲಿಲ್ಲ. ಪೇಚಿಗೆ ಸಿಲುಕಿಕೊಂಡೆವು. ಅದಾಗಲೇ ಸಮಯ ಜಾರುತ್ತಿತ್ತು. ಊಟದ ಅವಧಿ ಮುಗಿದು ಪಾಠ ಪ್ರಾರಂಭವಾಗುವ ಹೊತ್ತಾಗಿತ್ತು. ಸ್ವಲ್ಪ ದೂರದಲ್ಲಿ ಮನೆಯೊಂದು ಕಾಣಿಸಿತು. ಆ ಮನೆಗೆ ಹೋಗಿ ನಮ್ಮ ಸಮಸ್ಯೆಯನ್ನು ಹೇಳ್ಳೋಣವೆಂದಾಗ ಗೆಳತಿ ಅನನ್ಯ ನಕಾರವೆತ್ತಿದಳು. “ಹಾಗೆ ಯಾರ್ಯಾರ ಮನೆಗೆಲ್ಲ ಹೋಗ್ಬಾರ್ಧು ಅಂಥ ನಮ್ಮಮ್ಮ ಹೇಳ್ತಾರೆ’ ಎಂಬುದು ಅವಳ ವಾದ. ಕೊನೆಗೂ ಅವಳನ್ನು ಸಮಾಧಾನಿಸಿ ನಡುಗುತ್ತ ಆ ಮನೆಯ ಬಳಿಗೆ ಧಾವಿಸಿದೆವು.
ಅಲೊಬ್ಬರು ಆಂಟಿ ನಮ್ಮನ್ನು ಎದುರುಗೊಂಡರು. ಸಮವಸ್ತ್ರದಲ್ಲಿದ್ದ ನಮ್ಮನ್ನು ಕಂಡು, “ಏನ್ ಮಕೆ ನಿಮಗೆ ಶಾಲೆ ಇಲ್ವಾ?’ ಎಂದರು. ತಡವರಿಸಿಕೊಂಡು ನಮ್ಮ ಪರಿಸ್ಥಿತಿಯನ್ನು ವಿವರಿಸಿದಾಗ, “ಬನ್ನಿ ನಿಮ್ಮನ್ನು ಶಾಲೆಗೆ ಕರೆದುಕೊಂಡು ಹೋಗುವೆ’ ಎಂದರು. ಅಂತೂಇಂತೂ ಶಾಲೆಗೇನೋ ತಲುಪಿದೆವು. ಆದರೆ, ಅಲ್ಲಿ ಟೀಚರ್‌ಗಳು ಏನು ಮಾಡುತ್ತಾರೆಂಬ ತಳಮಳ ನಮಗೆ. ಒಬ್ಬರ ಮುಖವನ್ನೊಬ್ಬರು ನೋಡುತ್ತ¤ ಹೆದರುತ್ತ ನಿಂತೆವು. ಆಗ ಅಲ್ಲಿಗೆ ದೈಹಿಕ ಶಿಕ್ಷಕರು ಬಂದ್ರು. ಕೈಯನ್ನು ಬೆನ್ನಿಗೆ ಕಟ್ಟಿಕೊಂಡು ಬಂದ ಅವರು, ಸರಿಯಾಗಿ ಮಂಗಳಾರತಿ ಮಾಡಿ ನಮ್ಮ ಕೈಯನ್ನು ಮುಂದೆ ಚಾಚಲು ಹೇಳಿದರು. ನಮಗೆಲ್ಲರಿಗೂ ನಾಗರಬೆತ್ತದಿಂದ ಎರಡೇಟು ಬಿತ್ತು. ನೋವಿನಿಂದ ಅಳುತ್ತ ಇನ್ನೆಂದಿಗೂ ಈ ಥರದ ಕೆಲಸದಲ್ಲಿ ಭಾಗಿಯಾಗಬಾರದೆಂದು ನಿರ್ಧರಿಸಿದೆವು. ಇಂದಿಗೂ ನೇರಳೆ ಹಣ್ಣನ್ನು ಕಂಡಾಗ ಈ ಘಟನೆ ನೆನಪಾಗುತ್ತದೆ.
ಆದರೆ, ಇಂದಿನ ಮಕ್ಕಳಿಗೆ ಈ ರೀತಿಯಲ್ಲಿ ತಮ್ಮ ಬಾಲ್ಯವನ್ನು ಕಳೆಯುವ ಅವಕಾಶವೇ ಇಲ್ಲ. ಯಾಕೆಂದರೆ ಎಲ್ಲರೂ ಮೊಬೈಲ್ ಟಚ್ಚಿಂಗ್‌ನಲ್ಲೇ ಬ್ಯುಸಿ. ಇದಲ್ಲದೇ ಬೇರೆ ಜಗತ್ತಿನ ಅರಿವೇ ಇಲ್ಲ. ತಂತ್ರಜ್ಞಾನದ ಬೆಳವಣಿಗೆಯಿಂದ ಅತ್ಯಮೂಲ್ಯವಾದ ಕ್ಷಣಗಳನ್ನು ಕಳೆದುಕೊಳ್ಳುತ್ತಿದ್ದಾರೆ.
– ಪ್ರಜ್ಞಾ ಹೆಬ್ಟಾರ್
ದ್ವಿತೀಯ ಪತ್ರಿಕೋದ್ಯಮ
ಎಸ್‌ಡಿಎಂ ಕಾಲೇಜು, ಉಜಿರೆ