Advertisement

Hunsur: ಆನೆ ನಡೆದದ್ದೇ ದಾರಿ! ಆನೆ ದಾಳಿಗೆ ಬೈಕ್ ಜಖಂ, ಕಾಂಪೌಂಡ್ ಗೆ ಹಾನಿ

02:23 PM May 07, 2024 | Team Udayavani |

ಹುಣಸೂರು: ನಾಗರಹೊಳೆ ಉದ್ಯಾನದ ವೀರನ ಹೊಸಹಳ್ಳಿ ವಲಯದಂಚಿನ ಹೊಸಹಳ್ಳಿ ಗ್ರಾಮದೊಳಕ್ಕೆ ಎಂಟ್ರಿ ಕೊಟ್ಟ ಆನೆ ಜನರೇ ಕಾಡಿನತ್ತ ಅಟ್ಟಿರುವ ಘಟನೆ ನಡೆದಿದೆ.

Advertisement

ವೀರನಹೊಸಹಳ್ಳಿ ವಲಯದಂಚಿನ  ಹೊಸಹಳ್ಳಿ ಗೇಟ್ ಬಳಿಯ ರೈಲ್ವೆ ಕಂಬಿ ತಡೆಗೋಡೆ ದಾಟಿ ಬಂದಿರುವ ಆನೆ ರಾತ್ರಿಯಿಡೀ ಹೊಸಹಳ್ಳಿ ಗ್ರಾಮದ ಸುತ್ತಮುತ್ತಲಿನಲ್ಲಿ ಬೆಳೆದಿರುವ ಜನೀನಿನಲ್ಲಿ ಬೆಳೆದ ಫಸಲುಗಳನ್ನು ತಿಂದಿದೆ.

ಮುಂಜಾನೆ  ಮರಳಿ ಕಾಡಿಗೆ ಹೋಗುವ ವೇಳೆ ಬೆಳಗಾಗಿದ್ದರಿಂದ ಜಮೀನು ಕೆಲಸಕ್ಕೆ ತೆರಳುತ್ತಿದ್ದ ರೈತರಿಗೆ ಆನೆ ಕಾಣಿಸಿದ್ದು, ತಕ್ಷಣವೇ ಕೂಗಾಟ ನಡೆಸಿ ಜನರು ಜಮಾಯಿಸಿದ್ದಾರೆ.

ಆನೆ ಕಂಡು ನಾಯಿಗಳು ಬೊಗಳಲಾರಂಭಿಸಿವೆ. ಜನರ ಕೂಗಾಟ, ನಾಯಿ ಬೊಗಳುವಿಕೆಯಿಂದ ದಿಕ್ಕಾಪಾಲಾಗಿ ಓಡಾಡಿದೆ. ಮನೆ ಬಳಿ ಸಂಗ್ರಹಿಸಿದ್ದ ಹುಲ್ಲಿನ ಮೆದೆಗಳನ್ನು ಎಳೆದು ಹಾಕಿದೆ. ಅಷ್ಟರಲ್ಲಿ  ಗ್ರಾಮಸ್ಥರು ಅರಣ್ಯ ಇಲಾಖೆಗೂ ಮಾಹಿತಿ ನೀಡಿದ್ದಾರೆ.

ಈ ವೇಳೆ ಆನೆ ಸೀದಾ ಹೊಸಹಳ್ಳಿ ಗ್ರಾಮದೊಳಗೆ ನುಗ್ಗಿದೆ. ಗ್ರಾಮದ ಯುವಕರು ಡಬ್ಬ ಮತ್ತು ಇತರ ವಸ್ತುಗಳಿಂದ ಜೋರಾಗಿ ಶಬ್ದ ಮಾಡುತ್ತಾ ಟಾಚ್೯ ಲೈಟ್ ಬಿಟ್ಟು ಕೂಗಾಟ ನಡೆಸಿದ್ದಾರೆ. ಆನೆಯು ಗ್ರಾಮದ ಬೀದಿಗಳಲ್ಲಿ ಅತ್ತಿಂದಿತ್ತ ಓಡಾಡಿದೆ.

Advertisement

ಕೋಪಗೊಂಡ ಜನರು ಕಲ್ಲುಗಳಿಂದ ಹೊಡೆಯುತ್ತಿದ್ದಂತೆ  ಕಲ್ಲಿನೇಟು ತಪ್ಪಿಸಿಕೊಳ್ಳುವ ಭರದಲ್ಲಿ ಗ್ರಾಮದಲ್ಲಿ ಸಿಕ್ಕಸಿಕ್ಕ ಕಡೆ ನುಗ್ಗಿದೆ. ಈ ವೇಳೆ ಮನೆ ಬಳಿ ನಿಲ್ಲಿಸಿದ್ದ ಬೈಕ್ ಅನ್ನು ಜಖಂಗೊಳಿಸಿದೆ. ಮನೆಯ ಕಾಂಪೌಂಡ್ ಹಾನಿ ಮಾಡಿದೆ.

ಕಲ್ಲಿನೇಟಿನಿಂದ ವಿಚಲಿತವಾಗಿದ್ದ ಆನೆ ಕೊನೆಗೆ ಗ್ರಾಮದೊಳಗಿಂದ ಮತ್ತೆ ಜಮೀನಿನ ಮೂಲಕ ತೆರಳಿ ಎದ್ದೆನೋ ಬಿದ್ದೆನೊ ಎಂಬಂತೆ ಓಡಿ ಕಾಡು ಸೇರಿಕೊಂಡಿದೆ.

ಅರಣ್ಯ ಸಿಬ್ಬಂದಿಗಳು ಬರುವಷ್ಟರಲ್ಲಿ ಅವಾಂತರ ಸೃಷ್ಟಿಸಿದ್ದ ಆನೆ ಕಾಡು ಸೇರಿತು. ವಿಷಯ ತಿಳಿದ ಅರಣ್ಯ ಇಲಾಖೆ ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next