ಹುಣಸೂರು: ಸೋಮವಾರವೂ ತಾಲೂಕಿನಾದ್ಯಂತ ಭಾರೀ ಮಳೆ ಮುಂದುವರೆದಿದ್ದು, ತಂಬಾಕು ಹದ ಮಾಡುವ ಎರಡು ಬಾರನ್ ಹಾಗೂ ಮನೆಯೊಂದು ಕುಸಿದು ಬಿದ್ದಿದೆ. ಕೆರೆಯೊಂದರ ಕೋಡಿ ಒಡೆದಿದೆ. ತಂಬಾಕು ಹಾಗೂ ಶುಂಠಿ ಹೊಲಗಳಲ್ಲಿ ಅಪಾರ ಪ್ರಮಾಣದ ನೀರು ನಿಂತಿದ್ದು, ಬೆಳೆಗಳು ಕೊಳೆಯುವ ಭೀತಿ ಎದುರಾಗಿದೆ.
ಹನಗೋಡು ಹೋಬಳಿಯ ಕಚುವಿನಹಳ್ಳಿ ಗ್ರಾಮದ ಲೇ.ಜವರೇಗೌಡರ ಪತ್ನಿ ಜಯಮ್ಮ ಮತ್ತು ಹರೀನಹಳ್ಳಿಯ ರುದ್ರಾರಾಧ್ಯರ ಪತ್ನಿ ಲಲಿತಮ್ಮರಿಗೆ ಸೇರಿದ ತಂಬಾಕು ಹದಗೊಳಿಸುವ ಬ್ಯಾರನ್ ಕಟ್ಟಡದ ಗೋಡೆ ಕುಸಿದು ಬಿದ್ದು ಸಂಪೂರ್ಣ ಹಾನಿಯಾಗಿದೆ. ಅರಸುಕಲ್ಲಹಳ್ಳಿಯ ಕುಮಾರ್ ಎಂಬವರಿಗೆ ಸೇರಿದ ಮನೆ ಬಿದ್ದು ಹೋಗಿದೆ.
ಹಾರಿ ಹೋದ ಮೇಲ್ಛಾವಣಿ:
ಚಿಲ್ಕುಂದದಲ್ಲಿ ಸೋಮವಾರ ಸಂಜೆ ಬೀಸಿದ ಬಿರುಗಾಳಿಗೆ ರಾಮಶೆಟ್ಟರ ಮನೆ ಮೇಲ್ಚಾವಣಿ ಹಾಗೂ ಚಂದ್ರು ಎಂಬವರ ಕೊಟ್ಟಿಗೆಗೆ ಹಾಕಿದ್ದ ಕಲ್ನಾರ್ ಶೀಟ್ ಹಾರಿ ಹೋಗಿ ಮನೆಯೊಳಗಿದ್ದ ದವಸ-ಧಾನ್ಯ, ಬಟ್ಟೆ, ಮತ್ತಿತರ ವಸ್ತುಗಳು ನೀರಿನಲ್ಲಿ ತೋಯ್ದು ಹಾಳಾಗಿದೆ.
ಜೋಳದ ಬಿತ್ತನೆ ನಾಶ:
ಗುರುಪುರ ಗ್ರಾ.ಪಂ. ವ್ಯಾಪ್ತಿಯ ಕಾಳೇನಹಳ್ಳಿಯ ತಗ್ಗು ಪ್ರದೇಶದ ಜಮೀನುಗಳಲ್ಲಿ ಅಪಾರ ಪ್ರಮಾಣದ ಮಳೆ ನೀರು ನಿಂತಿದ್ದು, ಇತ್ತೀಚೆಗೆ ಬಿತ್ತನೆ ಮಾಡಿದ್ದ ನಟೇಶ್, ಶ್ರೀನಿವಾಸ್, ಆನಂದ, ಕಲೀಂ ಮತ್ತಿತರ ರೈತರಿಗೆ ಸೇರಿದ ಮುಸುಕಿನ ಜೋಳ ಹಾಗೂ ರಸಗೊಬ್ಬರ ಸಹಿತ ನೀರು ಪಾಲಾಗಿದೆ.
ಕೋಡಿ ಒಡೆದ ಅತ್ತಿಕುಪ್ಪೆ ಕೆರೆ:
ಅತ್ತಿಕುಪ್ಪೆಯ 7 ಎಕರೆ ವಿಸ್ತೀರ್ಣದ ಸರಕಾರಿ ಕೆರೆಯ ಕೋಡಿ ಒಡೆದು ಅಪಾರ ಪ್ರಮಾಣದ ನೀರು ಜಮೀನಿನ ಮೇಲೆ ಹರಿದಿದ್ದು, ಕೆರೆ ಕೆಳಬಾಗದ ಅಡಿಕೆ, ತೆಂಗಿನ ತೋಟ, ಶುಂಠಿ, ತಂಬಾಕು ಜಮೀನು ಜಲಾವೃತವಾಗಿದ್ದು, ಕಣ್ಣು ಹಾಯಿಸಿದೆಲ್ಲೆಡೆ ಜಮೀನು ಕೆರೆಗಳಂತೆ ಗೋಚರಿಸುತ್ತಿವೆ.
ಕಂದಾಯಾಧಿಕಾರಿಗಳ ಭೇಟಿ:
ಹನಗೋಡು ನಾಡಕಚೇರಿಯ ರಾಜಸ್ವ ನಿರೀಕ್ಷಕ ಪ್ರಶಾಂತ ರಾಜೇ ಅರಸ್, ಗ್ರಾಮ ಆಡಳಿತಾಧಿಕಾರಿಗಳಾದ ಸುನಿಲ್ ಅಂತೋಣಿರಾಜ್, ಮಲ್ಲೇಶ್, ಸುಮಂತ್, ಅತ್ತಿಕುಪ್ಪೆಯ ಕೆರೆ ಕೋಡಿ ಒಡೆದು ಹಾನಿಗೊಳಗಾಗಿರುವ ಪ್ರದೇಶ ಹಾಗೂ ಕಲ್ಲಹಳ್ಳಿ, ತಟ್ಟೆಕೆರೆ, ಹೊಸಕೋಟೆ, ಕಚುವಿನಹಳ್ಳಿ ಗ್ರಾಮಗಳಿಗೆ ಭೇಟಿ ನೀಡಿ ಬೆಳೆ, ಮನೆ, ಬಾರನ್ ಹಾನಿ ಪರಿಶೀಲಿಸಿದರು.
ಇಷ್ಟೊಂದು ಬೆಳೆ ನಷ್ಟವಾಗಿದ್ದರೂ ಯಾವುದೇ ಜನಪ್ರತಿನಿಧಿಗಳಾಗಲಿ ಹಿರಿಯ ಅಧಿಕಾರಿಗಳಾಗಲಿ ಹಾನಿ ಪ್ರದೇಶಕ್ಕೆ ಭೇಟಿ ನೀಡದಿರುವುದು ರೈತರಲ್ಲಿ ಆಕ್ರೋಶ ಮಡುಗಟ್ಟಿದೆ.