Advertisement

ಜನ-ಜಾನುವಾರುಗಳಿಗೆ ನೀರಿನ ಸಮಸ್ಯೆ ಎದುರಾಗದಂತೆ ನೋಡಿಕೊಳ್ಳಿ: ಸಿದ್ದಗಂಗಮ್ಮ

11:09 AM Oct 05, 2023 | Team Udayavani |

ಹುಣಸೂರು: ಮಳೆ ಪ್ರಮಾಣ ಕಡಿಮೆಯಾಗಿದ್ದು, ಮುಂದೆ ಜನ-ಜಾನುವಾರುಗಳಿಗೆ ನೀರಿನ ಬವಣೆ ಎದುರಾಗದಂತೆ ಕ್ರಮವಹಿಸಬೇಕು. ಸಂದಿಗ್ದ ಪರಿಸ್ಥಿತಿ ಎದುರಿಸಲು ತಾಲೂಕು ಆಡಳಿತ ಸನ್ನದವಾಗುವಂತೆ ತಾಲೂಕು ಪಂಚಾಯಿತಿ ಆಡಳಿತಾಧಿಕಾರಿ ಸಿದ್ದಗಂಗಮ್ಮ ಸೂಚಿಸಿದರು.

Advertisement

ನಗರದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಮಾತನಾಡಿ, ಈ ಸಾಲಿನಲ್ಲಿ ಮಳೆ ಕೊರತೆ ಕಾಡಿದ್ದು, ಕುಡಿಯುವ ನೀರಿನ ಸಮಸ್ಯೆ ಎದುರಾಗದಂತೆ ಕ್ರಮವಹಿಸುವಂತೆ ಸೂಚಿಸಿದರು.

ಜಿ.ಪಂ ಕುಡಿಯುವ ನೀರು ವಿಭಾಗದ ಎಇಇ ಮಹಮದ್ ಕಲೀಂ ಮಾತನಾಡಿ, ತಾಲೂಕಿನಲ್ಲಿ ಜೆಜೆಎಂ ಯೋಜನೆಯಲ್ಲಿ 316 ಗ್ರಾಮಗಳಿಗೆ ಕುಡಿಯುವ ನೀರು ಸಂಪರ್ಕ ವಿವಿಧ ಹಂತದಲ್ಲಿ ಕಾಮಗಾರಿ ಪ್ರಗತಿಯಲ್ಲಿದೆ. ಈ ಪೈಕಿ ಬಿಳಿಕೆರೆ ಹೋಬಳಿ ಭಾಗದಲ್ಲಿ ಕುಡಿಯುವ ನೀರಿನ ಸಮಸ್ಯೆ ನೀಗಿಸಲಾಗಿದೆ ಎಂದರು.

ಹಳ್ಳಿಗಳಿಗೆ ಕಾವೇರಿ ನೀರು ಪೂರೈಕೆ:

ತಾಲೂಕಿನಲ್ಲಿ ನೀರಿನ ಸಮಸ್ಯೆ ಎದುರಗಬಹುದಾದ 13 ಗ್ರಾಮಗಳನ್ನು ಗುರುತಿಸಿದ್ದು, ಪರ್ಯಾಯ ವ್ಯವಸ್ಥೆ ಮಾಡಲು ಸಿದ್ದರಿದ್ದೇವೆ.  ಮುಂದಿನ 8 ತಿಂಗಳೊಳಗಾಗಿ ತಾಲೂಕಿನ ಪ್ರತಿಯೊಂದು ಗ್ರಾಮಗಳಿಗೂ ಕಾವೇರಿ ಕುಡಿಯುವ ನೀರು ಸರಬರಾಜಿಗೆ ಸಿದ್ದತೆ ನಡೆದಿದೆ ಎಂದು ತಿಳಿಸಿದರು.

Advertisement

30 ಕೋಟಿ ವಿದ್ಯುತ್ ಬಿಲ್ ಬಾಕಿ:

ಸೆಸ್ಕ್ ಎಇಇ ಸಿದ್ದಪ್ಪ ಮಾತನಾಡಿ ಗ್ರಾ.ಪಂ.ಗಳು ಕುಡಿಯುವ ನೀರು, ಬೀದಿ ದೀಪದ ಬಿಲ್ ಬಾಕಿ ಪಾವತಿಗಾಗಿ ನೋಟೀಸ್ ನೀಡಿದ್ದರೂ ಈವರೆಗೂ ಪಾವತಿಸಿಲ್ಲ. ಹುಣಸೂರು ಮತ್ತು ಬಿಳಿಕೆರೆ ವಿಭಾಗದಿಂದ ಒಟ್ಟು  31 ಕೋಟಿ ಬಿಲ್ ಬಾಕಿ ಉಳಿದಿದೆ. ವಿದ್ಯುತ್ ಸರಬರಾಜು ಸ್ಥಗಿತಗೊಳಿಸಲು ಆದೇಶವಿದೆ. ಬಾಕಿ ಪಾವತಿಗೆ ಗ್ರಾ.ಪಂ.ಗಳವರಿಗೆ ಸೂಚನೆ ನೀಡಬೇಕೆಂದರು.

ತಾ.ಪಂ. ಕಾರ್ಯನಿರ್ವಾಹಣಾಧಿಕಾರಿ ಮನು ಉತ್ತರಿಸಿ ಅ.12 ರಂದು ಗ್ರಾ.ಪಂ.ಪಿಡಿಓಳೊಂದಿಗೆ ಸಭೆ ನಡೆಸಿ ಬಿಲ್ ಬಾಕಿ ಪಾವತಿಸಲು ಕ್ರಮವಹಿಸುತ್ತೇನೆ ಎಂದರು.

ಹಾಸ್ಟೆಲ್ ಕರೆಂಟ್ ಕಟ್ ಮಾಡಬೇಡಿ: ಬಿಇಓ ಮನವಿ:

ಬಿಇಓ ರೇವಣ್ಣ ಮಾತನಾಡಿ, ರತ್ನಪುರಿಯ ಕಿತ್ತೂರು ರಾಣಿ ಚೆನ್ನಮ್ಮ ಬಾಲಕಿಯರ ಹಾಸ್ಟೆಲ್‌ ಅಕ್ಕಪಕ್ಕ ಹುಡುಗರ ಹಾವಳಿ ಇದೆ. ಕಾಂಪೌಂಡ್ ಎತ್ತರಿಸಬೇಕು, ಚೆಸ್ಕಾಂನವರು ಬಿಲ್ ಕಟ್ಟಿಲ್ಲವೆಂದು ಕರೆಂಟ್ ಕಟ್ ಮಾಡಲು ಬಂದಿದ್ದಾರೆ. ನಮ್ಮಲ್ಲಿ ಹಣವಿದೆ ಆದರೆ ತಾಂತ್ರಿಕ ಸಮಸ್ಯೆಯಿಂದ ತಡವಾಗುತ್ತಿದೆ. ಬಾಲಕಿಯರ ಹಿತದೃಷ್ಟಿಯಿಂದ ವಿದ್ಯುತ್ ಸ್ಥಗಿತಗೊಳಿಸದಂತೆ ಮನವಿ ಮಾಡಿದರೆ. ಚೆಸ್ಕಾಂ ಎಇಇ ಸಿದ್ದಪ್ಪ ಹಣವಿದ್ದರೆ ಕಟ್ಟಬೇಕು. ಹಿರಿಯ ಅಧಿಕಾರಿಗಳ ಆದೇಶದಂತೆ ಆರೋಗ್ಯ, ಪೊಲೀಸ್ ಹಾಗೂ ನ್ಯಾಯಾಲಯ ಹೊರತಾಗಿ ಎಲ್ಲರೂ ಕಾಲಕಾಲಕ್ಕೆ ಪಾವತಿಸಬೇಕು ಇಲ್ಲದಿದ್ದಲ್ಲಿ ವಿದ್ಯುತ್ ಸ್ಥಗಿತವಾಗಲಿದೆ ಎಂದರು.

ಬೆಳೆಗಳು ಒಣಗುತ್ತಿವೆ 589 ಕೋಟಿ ಲುಕ್ಸಾನು:

ತಾಲೂಕಿನಲ್ಲಿ ನಿರೀಕ್ಷಿತ ಮಳೆ ಇಲ್ಲದೆ ವಾಣಿಜ್ಯ ಬೆಳೆ ಮುಸುಕಿನ ಜೋಳ 6635 ಸಾವಿರ ಹೆಕ್ಟೇರ್ ಹಾಗೂ ಹತ್ತಿ 485 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ 12808 ರೈತರು ಬೆಳೆ ಒಣಗಿದ್ದು, ಅಂದಾಜು 5.89 ಕೋಟಿ ಲುಕ್ಸಾನಾಗಿದೆ ಎಂದು ಅಂದಾಜಿಸಿ ಪರಿಹಾರಕ್ಕೆ ವರದಿ ಸಲ್ಲಿಸಲಾಗಿದೆ ಎಂದು ಕೃಷಿ ಇಲಾಖೆ ಅಧಿಕಾರಿ ವೆಂಕಟಾಚಲ ಮಾಹಿತಿ ನೀಡಿದರು.

ಇನ್ನು ಅಲ್ಲಲ್ಲಿ ಬಿದ್ದ ಮಳೆ, ಬೋರ್‌ವೆಲ್ ಇದ್ದವರು 19 ಸಾವಿರ ಹೆಕ್ಟೇರ್‌ನಲ್ಲಿ ರಾಗಿ ಬೇಸಾಯ ನಡೆದಿದೆ ಮಳೆ ಬಂದಲ್ಲಿ ಬೆಳೆ ಕೈ ಸೇರಲಿದೆ ಎಂದರು.

ಎಸ್.ಟಿ.ಸಮಾಜಕ್ಕೆ ಸೌಲಭ್ಯ ಕಲ್ಪಿಸಲಾಗುತ್ತಿಲ್ಲ:

ತಾಲೂಕಿನ ಗಿರಿಜನ ಸಮುದಾಯಕ್ಕೆ ಸರ್ಕಾರ ನೀಡುವ ಗ್ಯಾರೆಂಟಿ ಯೋಜನೆಗಳು ಸಿಗಲು ಆಧಾರ್ ಮತ್ತು ಮೊಬೈಲ್ ಲಿಂಕ್ ಇಲ್ಲದೆ ಈ ಸಮುದಾಯಕ್ಕೆ ಯೋಜನೆ ತಲಪಿಸಲಾಗುತ್ತಿಲ್ಲ, ಸಂಬಂಧಿಸಿದ ಕಂದಾಯ ಇಲಾಖೆ ಅಧಿಕಾರಿಗಳು ದಾಖಲಾತಿ ನೀಡುತ್ತಿಲ್ಲ, ಎಲ್ಲದಕ್ಕೂ ನಮ್ಮ ಇಲಾಖೆಯನ್ನೇ ದೂರುತ್ತಾರೆ, ಪರಿಶಿಷ್ಟರು ಹಾಗೂ ಬುಡಕಟ್ಟು ಸಮುದಾಯಕ್ಕೆ ಸೌಲಭ್ಯ ಕಲ್ಪಿಸಲು ಎಲ್ಲ ಇಲಾಖೆಯುವರೂ ಕೈಜೋಡಿಸಬೇಕೆಂದು ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಬಸವರಾಜ್ ಕೋರಿದರು.

604 ಕುಟುಂಬಕ್ಕೆ ಗ್ಯಾರಂಟಿ ಸೌಲಭ್ಯಕ್ಕೂ ಕುತ್ತು:

ತಾಲೂಕಿನ ಲಕ್ಷ್ಮಿಪುರ ಹಾಡಿಯ ನಿವಾಸಿಗರ ಹೆಸರು ನೊಂದಣಿಗೆ ತಾಂತ್ರಿಕ ಸಮಸ್ಯೆ ಎದುರಾಗಿದೆ. ತರಿಕಲ್ ಹಾಡಿಯಲ್ಲಿ 154 ಕುಟುಂಬ ಮತ್ತು ಹನಗೋಡು ಹೋಬಳಿಯ 23 ಹಾಡಿಗಳಲ್ಲಿ 450 ಸೇರಿದಂತೆ 604 ಕುಟುಂಬಗಳಿಗೆ ಗ್ಯಾರಂಟಿ ಸೌಲಭ್ಯವೇಸಿಕ್ಕಿಲ್ಲ. ಎಸ್.ಟಿ. ಇಲಾಖೆ ಈಗಾಗಲೇ ಹಾಡಿ ಮತ್ತು ಪುನರ್ವಸತಿ ಕೇಂದ್ರದಲ್ಲಿ ಆಧಾರ್ ಲಿಂಕ್ ಮಾಡಿಸುವ ಶಿಬಿರ ನಡೆಸಿ 424 ಕುಟುಂಬಗಳ ದಾಖಲೆ ಆನ್ ಲೈನ್ ಲಿಂಕ್ ಮಾಡಿಸಿದೆ ಎಂದರು.

ಗ್ಯಾರಂಟಿ ಯೋಜನೆ ತಾಲೂಕಿನ 3850 ಗಿರಿಜನ ಕುಟುಂಬಗಳಿಗೆ ತಲಪಿಸುವ ಜವಾಬ್ದಾರಿ ಎಸ್.ಟಿ. ಇಲಾಖೆಗೆ ಸೀಮಿತಗೊಳಿಸದೆ ನಮ್ಮೊಂದಿಗೆ ಇತರೆ ಇಲಾಖೆ ಅಧಿಕಾರಿಗಳು ಸಹಕರಿಸುವಂತೆ ಸಭೆಯಲ್ಲಿ ಮನವಿ ಮಾಡಿದರು.

ತಾಲೂಕಿನಲ್ಲಿ 49 ಅಂಗನವಾಡಿ ಕೇಂದ್ರಗಳಿಗೆ ನಿವೇಶನವಿಲ್ಲದೆ ಕಟ್ಟಡ ನಿರ್ಮಿಸಲಾಗುತ್ತಿಲ್ಲ. 7 ಕಟ್ಟಡಗಳು ಶಿಥಿಲವಾಗಿ ಪರ್ಯಾಯ ವ್ಯವಸ್ಥೆ ಮಾಡಲಾಗಿದೆ ಎಂದು ಸಿಡಿಪಿಒ ರಶ್ಮಿ ಸಭೆಗೆ ಮಾಹಿತಿ ನೀಡಿದರು. ತಾ.ಪಂ. ಆಡಳಿತಾಧಿಕಾರಿ ಲೋಕೇಶ್ ಇದ್ದರು.

ವಿವಿಧ ಇಲಾಖೆ ಅಧಿಕಾರಿಗಳು ಆಯಾ ಇಲಾಖೆಗಳ ಮಾಹಿತಿ ನೀಡಿದರು. ತಾಲೂಕು ಯೋಜನಾಧಿಕಾರಿ ರಾಜೇಶ್ ಇದ್ದರು.

 

Advertisement

Udayavani is now on Telegram. Click here to join our channel and stay updated with the latest news.

Next