ಹುಣಸೂರು: ತಾಲೂಕಿನ ಮರದೂರು ಗ್ರಾಮದ ಬಳಿ ಲಕ್ಷ್ಮಣ ತೀರ್ಥ ನದಿಯಿಂದ ಬಿಳಿಕೆರೆ ಹೋಬಳಿ ವ್ಯಾಪ್ತಿಯ 47 ಕೆರೆ ಕಟ್ಟೆಗಳ ಕುಡಿಯುವ ನೀರಿಗಾಗಿ ನೀರು ತುಂಬಿಸುವ ಯೋಜನೆಗೆ ನೀಡಿರುವ ತಾತ್ಕಾಲಿಕ ತಡೆಯನ್ನು ತೆರವು ಮಾಡಿ ಯೋಜನೆ ಪ್ರಾರಂಭಿಸಲು ಸಂಬಂದಪಟ್ಟ ಇಲಾಖೆ ಅಧಿಕಾರಿಗಳಿಗೆ ಆದೇಶಿಸಬೇಕೆಂದು ಉಪಮುಖ್ಯಮಂತ್ರಿ ಹಾಗೂ ಜಲಸಂಪನ್ಮೂಲ ಇಲಾಖೆ ಸಚಿವ ಡಿ. ಕೆ ಶಿವಕುಮಾರ್ ಅವರಿಗೆ ಬೆಂಗಳೂರಿನ ವಿಧಾನಸೌಧದಲ್ಲಿ ಹುಣಸೂರಿನ ಮಾಜಿ ಶಾಸಕ ಎಚ್ ಪಿ ಮಂಜುನಾಥ್ ಮನವಿ ಸಲ್ಲಿಸಿದರು.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಅಲ್ಪ ಮತಗಳಿಂದ ಸೋತಿದ್ದರೂ, ತಾಲೂಕಿನ ಅಭಿವೃದ್ಧಿ ಕಾರ್ಯಗಳಿಗೆ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಹಾಗೂ ಸಂಬಂದಪಟ್ಟ ಸಚಿವರ ಬೆನ್ನ ಹಿಂದೆ ಬಿದ್ದು ಅರೆ -ಬರೆಕೊಂಡಿರುವ ಕಾಮಗಾರಿಗಳನ್ನು ಪೂರ್ಣಗೊಳಿಸಲು ಅನುದಾನ ಬಿಡುಗಡೆಗೆ ಮುಂದಾಗಿರುವ ಹುಣಸೂರಿನ ಮಾಜಿ ಶಾಸಕ ಹೆಚ್ ಪಿ ಮಂಜುನಾಥ್ ಹುಣಸೂರು ತಾಲೂಕಿನ ಬಿಳಿಕೆರೆ ಹೋಬಳಿ ವ್ಯಾಪ್ತಿಯ 47 ಕೆರೆಗಳಿಗೆ ಲಕ್ಷ್ಮಣತೀರ್ಥ ನದಿಯಿಂದ ಏತ ನೀರಾವರಿ ಮೂಲಕ ನೀರು ತುಂಬಿಸುವ ಯೋಜನೆಗೆ ಈ ಹಿಂದೆ ಟೆಂಡರ್ ಪ್ರಕ್ರಿಯೆ ನಡೆದಿತ್ತು .
ಈಗ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿದ್ದು, ಹುಣಸೂರು ತಾಲೂಕಿನ ಲಕ್ಷ್ಮಣ ತೀರ್ಥ ನದಿಯಿಂದ ಮರದೂರು ಬಳಿ ತಾಲೂಕಿನ 47 ಕೆರೆಗಳಿಗೆ 85 ಕೋಟಿ ರೂ. ಯೋಜನಾ ವೆಚ್ಚದ ಏತ ನೀರಾವರಿ ಮುಖಾಂತರ ನೀರು ತುಂಬಿಸುವ ಯೋಜನೆಗೆ ಈ ಹಿಂದೆಯೇ ಆಡಳಿತಾತ್ಮಕ ಅನುಮೋದನೆ ನೀಡಿದ್ದು,ಕಾಮಗಾರಿ ಟೆಂಡರ್ ಪ್ರಕ್ರಿಯೆ ಹಂತದಲ್ಲಿದೆ.
ಪ್ರಸ್ತುತ ಸರ್ಕಾರ ಸಾರ್ವತ್ರಿಕವಾಗಿ ಎಲ್ಲಾ ಇಲಾಖೆಗಳಲ್ಲಿ ಪ್ರಾರಂಭವಾಗದಿರುವ ಕಾಮಗಾರಿಗಳಿಗೆ ತಡೆಹಿಡಿಯುವಂತೆ ಸರ್ಕಾರ ಆದೇಶಿಸಿರುವ ಹಿನ್ನಲೆಯಲ್ಲಿ ಮೇಲ್ಕಂಡ ಹುಣಸೂರು ತಾಲೂಕಿನ ಮರದೂರು ಏತ ನೀರಾವರಿ ಯೋಜನೆಯ ಅನುಷ್ಠಾನ ಪ್ರಕ್ರಿಯೆ ಸ್ಥಗಿತಗೊಳಿಸಲಾಗಿರುತ್ತದೆ.
ಈ ಯೋಜನೆಯಿಂದ ಹುಣಸೂರು ತಾಲೂಕಿನ 70 ಕ್ಕೂ ಹೆಚ್ಚು ಹಳ್ಳಿಗಳು ಮಳೆ ಆಶ್ರಿತ ಪ್ರದೇಶದ ಜನ ಜಾನುವಾರುಗಳಿಗೆ ಕುಡಿಯಲು ನೀರಿಗಾಗಿ ಮತ್ತು ಅಂತರ್ಜಲ ಮಟ್ಟದ ಸುದಾರಣೆಗೆ ನೆರವಾವಾಗಲಿದ್ದು ಯೋಜನೆಯ ಪ್ರಸ್ತಾವನೆ ಹಾಗೂ ಅನುಮೋದನೆಗಾಗಿ ಕಳೆದ ಹತ್ತು ವರ್ಷಗಳಿಂದ ಪ್ರಯತ್ನಿಸಿರುತ್ತೇನೆ.
ಪ್ರಸ್ತುತ ಸರ್ಕಾರದಲ್ಲಿ ಅನುಮೋದನೆ ದೊರೆತಿರುವುದು ಈ ಭಾಗದ ರೈತರಲ್ಲಿ ವಿಶ್ವಾಸವನ್ನು ಹೆಚ್ಚಿಸಿದ್ದು, ಬೆಳೆ ಬೆಳೆಯುಲು ಅದರ ಫಲವನ್ನು ಅನುಭವಿಸಲು ರೈತರು ಕಾಯುತ್ತಿದ್ದು. ಕಾರ್ಯಕ್ರಮ ಶೀಘ್ರ ಅನುಷ್ಟಾನದ ಅವಶ್ಯಕತೆ ಹೆಚ್ಚಿರುವುದರಿಂದ ಈ ಹಿನ್ನಲೆಯಲ್ಲಿ ಸರ್ಕಾರ ನೀಡಿರುವ ತಾತ್ಕಾಲಿಕ ತಡೆಯನ್ನು ಹಿಂಪಡೆದು ಯೋಜನೆಯನ್ನು ಅನುಷ್ಟಾನಗೊಳಿಸಲು ಸಂಬಂಧಿಸಿದ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳಿಗೆ ಆದೇಶಿಸಬೇಕೆಂದು ಈ ಮೂಲಕ ಕೋರುತ್ತೇನೆ ಎಂದು ಉಪಮುಖ್ಯಮಂತ್ರಿ, ಜಲ ಸಂಪನ್ಮೂಲ ಇಲಾಖೆ ಸಚಿವ ಡಿಕೆ ಶಿವಕುಮಾರ್ ಗೆ ಹುಣಸೂರಿನ ಮಾಜಿ ಶಾಸಕ ಎಚ್ ಪಿ. ಮಂಜುನಾಥ್ ಮನವಿ ಮಾಡಿದ್ದಾರೆ.