ಹುಣಸೂರು: ತಮ್ಮನ್ನು ಮೈಮುಲ್ ಅಧ್ಯಕ್ಷ ಸ್ಥಾನದಿಂದ ವಜಾಗೊಳಿಸಲು ಪಶು ಸಂಗೋಪನೆ ಸಚಿವ ಕೆ.ವೆಂಕಟೇಶ್ ಸಹಕಾರ ಇಲಾಖೆಯ ಅಧಿಕಾರಿಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆಂದು ಮೈಮುಲ್ ಅಧ್ಯಕ್ಷ ಪಿ.ಎಂ. ಪ್ರಸನ್ನಕುಮಾರ್ ತಿಳಿಸಿದರು.
ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಹುಣಸೂರಿನ ಸಹಕಾರ ಸಂಘಗಳ ನಿಬಂಧಕರ ಕಚೇರಿಯ ನ್ಯಾಯಾಲಯಕ್ಕೆ ಆಗಮಿಸಿದ್ದ ಅವರು ಪತ್ರಕರ್ತರೊಂದಿಗೆ ಮಾತನಾಡಿದರು.
ಕ್ಷೇತ್ರದಲ್ಲಿ ತಮ್ಮ ಪುತ್ರನ ರಾಜಕೀಯ ಭವಿಷ್ಯಕ್ಕಾಗಿ ಸಚಿವರು ಇಲ್ಲಸಲ್ಲದ ರಾಜಕೀಯ ಮಾಡುತ್ತಿದ್ದಾರೆ. ತಾವು ಕಗ್ಗುಂಡಿ ಗ್ರಾಮದ ಮತದಾರನಾಗಿದ್ದು, ಗ್ರಾಮದ ಡೇರಿಯ ಅಧ್ಯಕ್ಷನಾಗಿದ್ದು, ಈ ಡೇರಿಯನ್ನು ಪ್ರತಿನಿಧಿಸಿ ಮೈಮುಲ್ ನಿರ್ದೇಶಕನಾಗಿ ಅಧ್ಯಕ್ಷನು ಆಗಿದ್ದು, ವಾಸ ಸ್ಥಳದ ಧೃಡಿಕರಣ ರದ್ದುಗೊಳಿಸುವುದಕ್ಕೆ ಬಾರಿ ಪ್ರಯತ್ನ ನಡೆಸಿದ್ದಾರೆ ಎಂದರು.
ಈ ಸಂಬಂಧ 2015 ರಿಂದಲೂ ನ್ಯಾಯಾಲಯದಲ್ಲಿ ತಡೆಯಾಜ್ಞೆ ಇದ್ದರೂ ಇದೀಗ ಮತ್ತೆ ವಾಸ ಸ್ಥಳದ ಧೃಡಿಕರಣ ರದ್ದಿಗೆ ಸಹಕಾರ ಇಲಾಖೆ ಅಧಿಕಾರಿಗಳ ಮುಖಾಂತರ ಒತ್ತಡ ಹಾಕುತ್ತಿದ್ದಾರೆ. ಅಲ್ಲದೆ ತಾಂತ್ರಿಕ ಕಾರಣ ಮುಂದೊಡ್ಡಿ ಕಗ್ಗುಂಡಿ ಡೇರಿಯ ಎಲ್ಲಾ ನಿರ್ದೇಶಕರಿಗೂ ನೋಟಿಸ್ ನೀಡಿದ್ದಾರೆ. ಮೈಮುಲ್ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸುವಂತೆ ನಿರ್ದೇಶಕರ ಮೇಲೆ ಒತ್ತಡ ಹಾಕುತ್ತಿದ್ದಾರೆಂದು ಗಂಭೀರ ಆರೋಪ ಮಾಡಿದರು.
ಪಿರಿಯಾಪಟ್ಟಣ ತಾಲೂಕು ಪಂಚವಳ್ಳಿ ಬಳಿಯ 60 ಕೋಟಿ ವೆಚ್ಚದ ಪಶು ಆಹಾರ ಘಟಕ ನಿರ್ಮಾಣಕ್ಕೆ ಹಿಂದೆಯೇ ಗುದ್ದಲಿ ಪೂಜೆ ನಡೆದಿದೆ. ಅದಕ್ಕೂ ತಡೆಯೊಡ್ಡಿದ್ದಾರೆ. ತಮ್ಮ ಅವಧಿಯಲ್ಲಿ ಮೈಮುಲ್ ಪ್ರಗತಿಗೆ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದ್ದೇನೆ. ಒಟ್ಟಾರೆ ತಮ್ಮನ್ನು ಕೆಳಗಿಳಿಸಲು ಸಚಿವರು ಜಿದ್ದಿಗೆ ಇಳಿದಿದ್ದಾರೆ. ಅಲ್ಲದೆ ನಂದಿನಾಥಪುರದ ಆಡಳಿತ ಮಂಡಳಿಯನ್ನು ವಜಾಗೊಳಿಸಿ, ಇಲ್ಲಿಂದ ಮೈಮುಲ್ ನಿರ್ದೇಶಕರಾಗಿದ್ದ ರಾಜೇಂದ್ರಪ್ಪರ ಅಕಾರಕ್ಕ ಸಂಚಾಕಾರ ತಂದಿರುವ ಸಚಿವರಿಗೆ ಜಿಲ್ಲೆಗೆ 68 ಕೋಟಿ ಹಾಲಿನ ಪ್ರೋತ್ಸಾಹ ಧನ ಸರಕಾರದಿಂದ ಬಾಕಿ ಬರಬೇಕಿದ್ದು, ಹಣವನ್ನು ಮಂಜೂರು ಮಾಡಿಸಲು ವಿಫಲವಾಗಿದ್ದಾರೆ. ಮುಖ್ಯಮಂತ್ರಿಗಳ ಕ್ಷೇತ್ರದಲ್ಲೇ ಅಧಿಕಾರ ದುರ್ಬಳಕೆಯಾಗುತ್ತಿರುವುದು ಯಾವ ನ್ಯಾಯ ಎಂದು ಪ್ರಶ್ನಿಸಿ, ಇದು ಮುಂದುವರೆದಲ್ಲಿ ಸಹಕಾರಿಗಳು ಬೀದಿಗಿಳಿದು ಹೋರಾಟ ನಡೆಸಲಿದ್ದಾರೆ ಎಂದು ಎಚ್ಚರಿಸಿದರು.
ದೊಡ್ಡ ಬ್ಯಾಲಾಳು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಶಿವಣ್ಣ ಮಾತನಾಡಿ, ತಮ್ಮ ಅಧ್ಯಕ್ಷತೆಯಲ್ಲಿ ನಡೆಯಬೇಕಿದ್ದ ಸಂಘದ ಮಹಾ ಸಭೆಯ ಮುನ್ನಾ ದಿನ ತಮ್ಮ ವಿರುದ್ದ ದೂರು ದಾಖಲಾಗುವಂತೆ ಸಚಿವ ವೆಂಕಟೇಶ್ ಅವರು ಚಿಂತನೆ ನಡೆಸಿ, ಸಭೆ ನಡೆಯದಂತೆ ನೋಡಿಕೊಂಡಿದ್ದಲ್ಲದೆ ಒಂದಿಲ್ಲೊಂದು ರೀತಿಯಲ್ಲಿ ಕಿರುಕುಳ ನೀಡುತ್ತಾ ಬಂದಿದ್ದಾರೆ ಎಂದರು.
ದೇವರಾಜ ಅರಸರ ನಂತರ ಜಿಲ್ಲೆಯಲ್ಲಿ ಸಿದ್ದಮಯ್ಯನವರು ಎರಡನೇ ಬಾರಿ ಮುಖ್ಯಮಂತ್ರಿಯಾಗಿ ಹಿಂದುಳಿದವರು, ಬಡವರು ಶೋಷಿತರ ಧ್ವನಿಯಾಗಿ ಉತ್ತಮ ಕಾರ್ಯ ನಿರ್ವಹಿಸುತ್ತಿದ್ದು, ಇಂತಹ ನಾಯಕತ್ವದಲ್ಲಿ ವೆಂಕಟೇಶ್ ಸಚಿವರಾಗಿದ್ದುಕೊಂಡು ಬಡವರ ಕೆಲಸ ಮಾಡುವ ಬದಲು ಸಹಕಾರ ಸಂಘಗಳಲ್ಲಿ ಒಡಕು ಮೂಡಿಸುವುದು, ಸೂಪರ್ ಸೀಡ್ ಮಾಡಿಸುವುದು ಮಾಡುತ್ತಿರುವುದು ತರವಲ್ಲಾ, ವರ್ತನೆಯನ್ನು ಬದಲಾಯಿಸಿಕೊಳ್ಳದಿದ್ದಲ್ಲಿ ಜಿಲ್ಲಾದ್ಯಂತ ಸಹಕಾರಿಗಳೊಳಗೂಡಿ ಪ್ರತಿಭಟನೆ ನಡೆಸಲಾಗುವುದೆಂದು ಎಚ್ಚರಿಸಿದರು.
ಈ ವೇಳೆ ಕಗ್ಗುಂಡಿ ಡೇರಿಯ ಉಪಾಧ್ಯಕ್ಷ ಕೆ.ಟಿ.ಕೃಷ್ಣೇಗೌಡ ಹಾಗೂ ನಿರ್ದೇಶಕರು ಇದ್ದರು.