ಹುಣಸೂರು: ಅಪಾರ ಸಾಲಮಾಡಿಕೊಂಡಿದ್ದ ರೈತರೊಬ್ಬರು ಸಾಲ ತೀರಿಸಲಾಗದೆ ಮನೆಯಲ್ಲೇ ನೇಣಿಗೆ ಶರಣಾಗಿರುವ ಘಟನೆ ತಾಲೂಕಿನ ಕರ್ಣಕುಪ್ಪೆಯಲ್ಲಿ ನಡೆದಿದೆ.
ಹುಣಸೂರು ತಾಲೂಕಿನ ಹನಗೋಡು ಹೋಬಳಿಯ ಕರ್ಣಕುಪ್ಪೆಯ ರಾಜಶೆಟ್ಟಿ(78) ಆತ್ಮಹತ್ಯೆ ಮಾಡಿಕೊಂಡವರು. ಇವರಿಗೆ ಪತ್ನಿ, ನಾಲ್ವರು ಮಕ್ಕಳಿದ್ದಾರೆ.
ರೈತ ರಾಜಶೆಟ್ಟರಿಗೆ ಗ್ರಾಮದಲ್ಲಿ ಐದು ಎಕರೆ ಜಮೀನಿದ್ದು, ತಂಬಾಕು, ರಾಗಿ ಮತ್ತಿತರ ಬೆಳೆ ಬೆಳೆಯುತ್ತಿದ್ದರು. ಕೃಷಿ ಚಟುವಟಿಕೆಗಾಗಿ ನಗರದ ಐಓಬಿ ಬ್ಯಾಂಕಿನಲ್ಲಿ ೪ ಲಕ್ಷರೂ ಬೆಳೆ ಸಾಲ, ಕರ್ಣಕುಪ್ಪೆ ಸೊಸೈಟಿಯಲ್ಲಿ 2.5 ಲಕ್ಷ ರೂ. ಹಾಗೂ ಸ್ನೇಹಿತರು ಕೈಸಾಲ ಹಾಗೂ ಪತ್ನಿ ಹೆಸರಲ್ಲಿ ಮಹಿಳಾ ಸಂಘಗಳಲ್ಲೂ ಸಾಲ ಪಡೆದಿದ್ದರು.
ಸಕಾಲದಲ್ಲಿ ಸಾಲ ತೀರಿಸಲಾಗದೆ ಬಡ್ಡಿ ಹೆಚ್ಚಾಗಿದ್ದರಿಂದ ಚಿಂತೆಗೀಡಾಗಿದ್ದ ತಣದೆಯವರಿಗೆ ರ್ಧೈರ್ಯ ಹೇಳಿದ್ದೆವು. ಶುಕ್ರವಾರ ರಾತ್ರಿ ತಮ್ಮ ರೂಮಿನಲ್ಲಿ ಮಲಗಿದ್ದರು, ಊಟಕ್ಕೆ ಬಾರದಿದ್ದರಿಂದ ಪತ್ನಿ ಕಾಳಮ್ಮ ಏಳಿಸಲು ಹೋದ ವೇಳೆ ಮನೆಯ ತೊಲೆಗೆ ಹಗ್ಗದಿಂದ ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದಾರೆ.
ಸಾಲ ತೀರಿಸಲಾಗದೆ ಜಿಗುಪ್ಸೆಗೊಂಡು ನೇಣು ಬಿಗಿದಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಮೃತರ ಪುತ್ರ ರಘು ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಾಗಿದೆ. ಶವವನ್ನು ಸಾರ್ವಜನಿಕ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ ನಂತರ ವಾರಸು ದಾರರಿಗೆ ಒಪ್ಪಿಸಲಾಗಿದ್ದು, ಸ್ವಗ್ರಾಮದಲ್ಲಿ ಶನಿವಾರ ಅಂತ್ಯಕ್ರಿಯೆ ನಡೆಸಲಾಗಿದೆ.