Advertisement

Hunsur: ಅರಣ್ಯ ಇಲಾಖೆ ದಿನಗೂಲಿ ನೌಕರರ ಪ್ರತಿಭಟನೆ

09:46 AM Aug 22, 2023 | Team Udayavani |

ಹುಣಸೂರು: ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ನಾಗರಹೊಳೆ ವನ್ಯಜೀವಿ ವಿಭಾಗದಲ್ಲಿ ಕೆಲಸ ಮಾಡುತ್ತಿರುವ ದಿನಗೂಲಿ ನೌಕರರು ನಾಗರಹೊಳೆ ಉದ್ಯಾನದ ಹುಲಿ ಯೋಜನಾ ನಿರ್ಧೇಶಕರ ಕಚೇರಿ ಎದುರು ಪ್ರತಿಭಟನಾ ಧರಣಿ ಆರಂಭಿಸಿದ್ದಾರೆ.

Advertisement

ನಗರಸಭಾ ಮೈದಾನದಲ್ಲಿ ಸಮಾವೇಶಗೊಂಡ ದಿನಗೂಲಿ ಹಾಗೂ ಕ್ಷೇಮಾಭಿವೃದ್ದಿ ಸಂಘದ ನೌಕರರು ಕೈಯಲ್ಲಿ ಫಲಕ ಹಿಡಿದು ಅರಣ್ಯ ಇಲಾಖೆ ಹೊರಗುತ್ತಿಗೆ ಹಾಗೂ ಇತರೆ ಕ್ಷೇಮಾಭಿವೃದ್ದಿ ಸಂಘದ ನೌಕರರ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಘೋಷಣೆ ಕೂಗಿದರು.

ನಂತರ ಹುಣಸೂರಿನ ನಾಗರಹೊಳೆ ಉದ್ಯಾನವನದ ನಿರ್ದೇಶಕರ ಕಚೇರಿ ಬಳಿಗೆ ಮೆರವಣಿಗೆಯಲ್ಲಿ ಸಾಗಿ ಬಂದು ನಿರ್ದೇಶಕರ ಕಚೇರಿ ಎದುರು ಧರಣಿ ಆರಂಭಿಸಿದರು.

ಈ ವೇಳೆ ಮಾತನಾಡಿದ ಸಂಘದ ಜಿಲ್ಲಾಧ್ಯಕ್ಷ ನಟೇಶ್ ಹೊರಗುತ್ತಿಗೆ ಪಡೆದಿರುವ ಏಜೆನ್ಸಿಯವರು ನೌಕರರ ಇಪಿಎಫ್ ಮತ್ತು ಇಎಸ್ಐ ಹಣ ನಿಯಮಿತವಾಗಿ ಪಾವತಿಯಾಗುತ್ತಿಲ್ಲ. ಈ ಬಗ್ಗೆ ಪ್ರಶ್ನಿಸಿದರೆ ಉಡಾಫೆ ಉತ್ತರ ನೀಡುತ್ತಿದ್ದು, ನೌಕರರ ಹಿತ ಕಾಯಬೇಕಾದ ಅಧಿಕಾರಿಗಳು ಸಹ ಪ್ರಶ್ನಿಸುತ್ತಿಲ್ಲ ಎಂದರು.

ಮುಂದುವರೆದು ಮಾತನಾಡಿ, ಪ್ರಾಣದ ಹಂಗು ತೊರೆದು ಅರಣ್ಯದೊಳಗೆ ಕೆಲಸ ಮಾಡುವವರ ಪಾಡು ಅರಣ್ಯ ರೋಧನವಾಗಿದೆ. ಕಳೆದ ನಾಲ್ಕು ತಿಂಗಳಿನಿಂದ ಸರಿಯಾಗಿ ಸಂಬಳವೂ ಪಾವತಿಯಾಗುತ್ತಿಲ್ಲ. ಹೀಗಾದರೆ ನಮ್ಮ ಪಾಡಿರಲಿ ಊರೊಳಗಿರುವ ಕುಟುಂಬದವರು ಸಾಲಗಾರರಿಂದ ಬೈಸಿಕೊಳ್ಳುವಂತಾಗಿದೆ ಎಂದು ಹೇಳಿದರು.

Advertisement

ತಕ್ಷಣವೇ ಸಂಬಳ ಪಾವತಿಯಾಗಬೇಕು ಎಂದ ಅವರು ನಮ್ಮ ಇಎಸ್ ಐ ಮತ್ತು ಇಪಿಎಫ್ ಹಣದ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕೆಂದು ಒತ್ತಾಯಿಸಿದರು.

ನಾಗರಹೊಳೆ ಉದ್ಯಾನದ 8 ವಲಯಗಳ ಸಂಘದ ಪದಾಧಿಕಾರಿಗಳು ಸೇರಿದಂತೆ ನೂರಕ್ಕೂ ಹೆಚ್ಚು ಮಂದಿ ಧರಣಿ ಆರಂಭಿಸಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next