ಹುಣಸೂರು: ಶ್ರೀರಂಗಪಟ್ಟಣ- ಕುಶಾಲನಗರ ಹೆದ್ದಾರಿಗೆ ಭೂಮಿ ನೀಡುವ ರೈತರಿಗೆ ಎಕರೆಗೆ ಕನಿಷ್ಟ 40 ನೀಡಬೇಕು. ಕುಟುಂಬಕ್ಕೆ ಉದ್ಯೋಗ ಕಲ್ಪಿಸಲು ಆಗ್ರಹಿಸಿ ರೈತರ ಸರ್ವೆ ಕಾರ್ಯಕ್ಕೆ ತಡೆ ಒಡ್ಡಿರುವ ಘಟನೆ ನಡೆದಿದೆ.
ತಾಲೂಕಿನ ಗಾವಡಗೆರೆ ಹೋಬಳಿಯ ಅಗ್ರಹಾರಕ್ಕೆ ಶುಕ್ರವಾರ ಸರ್ವೆ ನಡೆಸಲು ತೆರಳಿದ್ದ ಅಧಿಕಾರಿಗಳನ್ನು ತಡೆದ ರೈತರು ಅವರನ್ನು ವಾಪಸ್ ಕಳುಹಿಸಿದ್ದು, ಹೆದ್ದಾರಿ ನಿರ್ಮಾಣ ಕಾರ್ಯ ಮತ್ತಷ್ಟು ವಿಳಂಬವಾಗಲಿದೆ.
ಈ ಹೆದ್ದಾರಿ ನಿರ್ಮಾಣ ಕಾರ್ಯಕ್ಕೆ ಕೇಂದ್ರ ಸರಕಾರ ಈಗಾಗಲೆ 3.500 ಕೋಟಿರೂ ಬಡುಗಡೆಗೊಳಿಸಿದ್ದು, ಖಾಸಗಿ ಜಮೀನು ಸ್ವಾದೀನ ಪ್ರಕ್ರಿಯೆ ಆರಂಭವಾಗಿದ್ದು, ಟೆಂಡರ್ ಪ್ರಕ್ರಿಯೆ ಮುಗಿದು ಗುತ್ತಿಗೆದಾರ ಈಗಾಗಲೇ ಸಾಮಗ್ರಿ ದಾಸ್ತಾನು ಮಾಡಿದ್ದು, ಕೆಲವೆಡೆ ಪರಿಹಾರ ವಿತರಿಸಲಾಗಿದೆ.
ಹುಣಸೂರು ಮತ್ತು ಪಿರಿಯಾಪಟ್ಟಣದಲ್ಲಿ ಭೂಮಿ ವಶ ಪಡಿಸಿಕೊಳ್ಳಬೇಕಿದೆ. ಇದಕ್ಕಾಗಿ ಸರ್ವೆ ಕಾರ್ಯ ಆರಂಭವಾಗಿದ್ದು, ಹಲವೆಡೆ ಸರಕಾರಿ ಭೂಮಿಗಳಲ್ಲಿ ಸಾಮಗ್ರಿ ಹಾಕಿಕೊಂಡಿದ್ದಾರೆ.
ಈ ನಡುವೆ ಸರ್ವೆ ನಡೆಸಲು ಬಂದಿದ್ದವರನ್ನು ತಡೆದ ರೈತರು ಸೂಕ್ತ ಪರಿಹಾರ ನೀಡುವವರೆಗೆ ಭೂಮಿ ಸರ್ವೆ ನಡೆಸಲು ಬಿಡುವುದಿಲ್ಲವೆಂದು ಪಟ್ಟು ಹಿಡಿದರು.
ವಿಷಯ ತಿಳಿದು ಬಿಳಿಕೆರೆ ಠಾಣೆ ಇನ್ಸ್ ಪೆಕ್ಟರ್ ಲೋಲಾಕ್ಷಿ ಭೇಟಿ ನೀಡಿ, ಈ ಸಂಬಂದ ರೈತರು ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಬೇಕು. ಸರ್ವೆ ಕಾರ್ಯಕ್ಕೆ ಅಡ್ಡಿ ಪಡಿಸುವಂತಿಲ್ಲ. ಅಧಿಕಾರಿಗಳು ಮತ್ತೊಂದು ದಿನ ಸರ್ವೆ ನಡೆಸಲು ಬರುವವರಿದ್ದು, ಸಹಕಾರ ನೀಡಬೇಕೆಂಬ ಸೂಚನೆ ನೀಡಿದರು.
ಈ ಸಂಬಂಧ ರೈತ ಮುಖಂಡರು ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಲು ಒಪ್ಪಿದರು.