ಹುಣಸೂರು: ಹಾಡಹಗಲೇ ಮೇಯಲು ಬಿಟ್ಟಿದ್ದ ಹಸುವಿನ ಮೇಲೆ ಹುಲಿ ದಾಳಿ ನಡೆಸಿದ ಪರಿಣಾಮ ಹಸು ತೀವ್ರಗಾಯಗೊಂಡಿರುವ ಘಟನೆ ತಾಲೂಕಿನ ಹನಗೋಡು ಹೋಬಳಿಯ ಗುರುಪುರ ಟಿಬೇಟ್ ಕ್ಯಾಂಪ್ ಬಳಿ ಜ.8ರ ಬುಧವಾರ ನಡೆದಿದೆ.
ಗುರುಪುರ ಗ್ರಾ.ಪಂ. ವ್ಯಾಪ್ತಿಯ ಹೊಸೂರು ಗೇಟ್ನ ಸದಸ್ಯ ಪ್ರಶಾಂತ್ ಅವರಿಗೆ ಸೇರಿದ ಗಬ್ಬದ ಹಸುವಿನ ಮೇಲೆ ದಾಳಿಯಾಗಿದ್ದು, ತೀವ್ರ ಗಾಯಗೊಂಡು ನರಳಾಡುತ್ತಿದ್ದ, ಮೇಲೇಳಲಾರದ ಹಸುವಿಗೆ ಪಶು ವೈದ್ಯರು ಸ್ಥಳದಲ್ಲೇ ಚಿಕಿತ್ಸೆ ನೀಡಿದ್ದಾರೆ.
ನಾಗರಹೊಳೆ ಉದ್ಯಾನದಂಚಿನ ವೀರನಹೊಸಹಳ್ಳಿ ವಲಯದ ಸಮೀಪ ಬುಧವಾರ ಪ್ರಶಾಂತ ಅವರ ತಾಯಿ ಪುಟ್ಟಮ್ಮ, ಗುರುಪುರ ಟಿಬೇಟ್ ಕ್ಯಾಂಪ್ ಬಳಿಯ ಜಮೀನಿನಲ್ಲಿ ದನಗಳನ್ನು ಮೇಯಿಸುತ್ತಿದ್ದರು. ಈ ವೇಳೆ ಪಕ್ಕದ ಕುರುಚಲು ಕಾಡಿನಿಂದ ಬಂದ ಹುಲಿಯೊಂದು ಒಮ್ಮೆಲೆ ಹಸುವಿನ ಮೇಲೆ ದಾಳಿ ನಡೆಸಿದ್ದು, ದಾಳಿಯನ್ನು ಕಣ್ಣಾರೆ ಕಂಡ ಪುಟ್ಟಮ್ಮ ಗಾಬರಿಗೊಂಡು ಕಿರುಚಿಕೊಳ್ಳುತ್ತಿದ್ದಂತೆ ಅಕ್ಕಪಕ್ಕದ ಜಮೀನಿನಲ್ಲಿದ್ದವರು ಧಾವಿಸುತ್ತಿದ್ದಂತೆ ಹುಲಿ ಹಸುವನ್ನು ಬಿಟ್ಟು ಹೋಗಿದೆ.
ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಪ್ರಾದೇಶಿಕ ಅರಣ್ಯ ವಿಭಾಗದ ಡಿಆರ್ಎಫ್ಓ ಮಲ್ಲಿಕಾರ್ಜುನ್ ಹಾಗೂ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲಿಸಿದರು.
ಕಳೆದ 15 ದಿನಗಳ ಹಿಂದಷ್ಟೆ ಹೊಸೂರು ಗೇಟ್ನ ಸ್ವಾಮಿ ಅವರಿಗೆ ಸೇರಿದ ಉಳುಮೆ ಮಾಡುವ ಎತ್ತು ಮೇಯುತ್ತಿದ್ದ ವೇಳೆ ದಾಳಿ ನಡೆಸಿ ಕೊಂದು ಹಾಕಿದ್ದನ್ನು ಸ್ಮರಿಸಬಹುದು. ಅದೇ ಹುಲಿ ಇದೇನಾ ಎಂಬ ಆತಂಕ ರೈತರನ್ನು ಕಾಡುತ್ತಿದೆ.
ಈ ಹುಲಿಯು ಸುತ್ತಮುತ್ತಲಿನಲ್ಲೇ ಅಡ್ಡಾಡುತ್ತಿದ್ದು, ಸೆರೆ ಹಿಡಿದು ಗ್ರಾಮಸ್ಥರ ಆತಂಕವನ್ನು ದೂರ ಮಾಡುವಂತೆ ಮನವಿ ಮಾಡಿದ್ದರೂ ಹುಲಿ ಸೆರೆಗೆ ಕ್ರಮವಾಗಿಲ್ಲ.
ಇನ್ನಾದರೂ ಹುಲಿ ಸೆರೆಗೆ ಕ್ರಮವಹಿಸದಿದ್ದಲ್ಲಿ ಈ ಭಾಗದ ಗ್ರಾಮಸ್ಥರು ಅರಣ್ಯ ಇಲಾಖೆ ವಿರುದ್ದ ಪ್ರತಿಭಟಿಸುವುದಾಗಿ ಎಚ್ಚರಿಸಿದ್ದಾರೆ.