ಹುಣಸೂರು: ಅತಿಯಾದ ಮದ್ಯ ಸೇವನೆಯಿಂದ ಆದಿವಾಸಿ ಯುವಕನೊಬ್ಬ ಸಾವನ್ನಪ್ಪಿರುವ ಘಟನೆ ತಾಲೂಕಿನ ಬಲ್ಲೇನಹಳ್ಳಿ ಗಿರಿಜನ ಹಾಡಿಯಲ್ಲಿ ಮೇ.13ರ ಸೋಮವಾರ ನಡೆದಿದೆ.
ಹಾಡಿಯ ನಿವಾಸಿ ಲೇ.ಚಿಕ್ಕಯ್ಯನವರ ಮಗ ಮಾದೇವ (28)ಮೃತ ಯುವಕ.
ಈತ ಅವಿವಾಹಿತನಾಗಿದ್ದು, ಚಿಕ್ಕ ವಯಸ್ಸಿನಲ್ಲೇ ಕುಡಿತದ ಚಟಕ್ಕೆ ದಾಸನಾಗಿದ್ದ. ನಿತ್ಯ ಕೂಲಿ ಕೆಲಸ ಮಾಡಿ ದುಡಿದ ಹಣವನ್ನೆಲ್ಲಾ ಕುಡಿತಕ್ಕೆ ವ್ಯಯ ಮಾಡುತ್ತಿದ್ದ. ಈತ ಭಾನುವಾರ ದಿನವಿಡೀ ಕುಡಿತದ ಅಮಲಿನಲ್ಲಿಯೇ ಇದ್ದು, ಸೋಮವಾರ ಮುಂಜಾನೆ ಮಲಗಿದ್ದಲೇ ಪ್ರಾಣ ಬಿಟ್ಟಿದ್ದಾನೆಂದು ಗ್ರಾಮಸ್ಥರು ತಿಳಿಸಿದ್ದಾರೆ.
ಹಾಡಿಯಲ್ಲಿ ಅಕ್ರಮ ಮದ್ಯದ ಘಾಟು:
ಬಲ್ಲೇನಹಳ್ಳಿ ಗ್ರಾಮದ ಗಿರಿಜನ ಹಾಡಿ ಹಾಗೂ ಪರಿಶಿಷ್ಟ ಕಾಲೋನಿ ಸೇರಿದಂತೆ 5 ಕಡೆ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದು, ಅಧಿಕಾರಿಗಳಿಗೆ ಹಾಗೂ ಜಾಗೃತ ಸಭೆಗಳಲ್ಲಿ ದೂರಿತ್ತರೂ ಯಾವುದೇ ಪ್ರಯೋಜನವಾಗಿಲ್ಲ.
ಬಲ್ಲೇನಹಳ್ಳಿ ಹಾಡಿ ಮಾತ್ರವಲ್ಲ. ತಾಲೂಕಿನ ಬಹುತೇಕ ಹಾಡಿಗಳಲ್ಲಿ ಎಲ್ಲಾ ಸಮಯದಲ್ಲೂ ಮದ್ಯ ಸಿಗುತ್ತಿರುವುದರಿಂದ ಕೂಲಿಕಾರ್ಮಿಕರು ಹೆಚ್ಚಾಗಿ ಕುಡಿತದ ಚಟಕ್ಕೆ ಬಲಿಯಾಗುತ್ತಿದ್ದಾರೆ. ಇನ್ನಾದರೂ ಪೊಲೀಸ್ ಹಾಗೂ ಅಬಕಾರಿ ಇಲಾಖೆ ಅಧಿಕಾರಿಗಳು ಅಕ್ರಮ ಮದ್ಯ ಮಾರಾಟ ತಡೆಯಬೇಕೆಂದು ಹಾಡಿಯ ಮುಖಂಡರು ಮತ್ತು ಜಿಲ್ಲಾ ಜಾಗೃತಿ ಹಾಗೂ ಉಸ್ತುವಾರಿ ಸಮಿತಿ ಸದಸ್ಯ ನೇರಳಕುಪ್ಪೆ ಮಹದೇವ್ ಆಗ್ರಹಿಸಿದ್ದಾರೆ.