ಹುಣಸೂರು: ಹುಣಸೂರು-ಮೈಸೂರು ಹೆದ್ದಾರಿಯ ನಗರದ ಬೈಪಾಸ್ ರಸ್ತೆ ಬಳಿ ಅರಸು ಪುತ್ಥಳಿ ಸಮೀಪದ ಸಿಮೆಂಟ್ ಬ್ರಿಕ್ಸ್ ಫ್ಯಾಕ್ಟರಿ ಬಳಿ ಮಂಗಳವಾರ ಮಧ್ಯರಾತ್ರಿ ಕೊಲೆಯಾಗಿದ್ದ ವ್ಯಕ್ತಿಯ ಗುರುತು ಪತ್ತೆಯಾಗಿದೆ.
ಕೊಡಗು ಜಿಲ್ಲೆ ಪಾಲಿಬೆಟ್ಟದ ಯಡಿಯೂರಿನ ಶಾಂತಿ ಬೀದಿ ಎಸ್ಟೆಟ್‌ನ ಮಾಲಿಕ ಲೇ.ಕಾಳಪ್ಪರ ಪುತ್ರ ಚಂಗಪ್ಪ(23) ಎಂದು ಅವರ ಸಹೋದರ ಮುತ್ತಪ್ಪ ಗುರುತಿಸಿದ್ದಾರೆ.
ಮೃತ ಚಂಗಪ್ಪ ಅವರು ಡಿ.16ರಂದು ಪಾಲಿಬೆಟ್ಟದ ಸ್ವಗ್ರಾಮದಲ್ಲಿ ಸಂಬಂಧಿಕರೊಬ್ಬರ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿ ರಾತ್ರಿ ಬೆಂಗಳೂರಿಗೆ ಕಾರಿನಲ್ಲಿ ವಾಪಾಸಾಗುತ್ತಿದ್ದ ವೇಳೆ ಹುಣಸೂರಿನ ಬೈಪಾಸ್ ರಸ್ತೆಯ ದೇವರಾಜ ಅರಸು ಪುತ್ಥಳಿ ಬಳಿಯ ಇಟ್ಟಿಗೆ ಫ್ಯಾಕ್ಟರಿಯಲ್ಲಿ ಸಿಮೆಂಟ್ ಇಟ್ಟಿಗೆ ತಲೆ ಮೇಲೆ ಎತ್ತಿಹಾಕಿ ಕೊಲೆ ಮಾಡಲಾತ್ತು.
ಪತ್ನಿಯ ವಿಚ್ಚೇದನವಾಗಿದ್ದು, ಇವರಿಗೆ ಮಕ್ಕಳಿಲ್ಲಾ. ಯಾವ ಕಾರಣಕ್ಕೆ, ಯಾರು ಕೊಲೆ ಮಾಡಿದ್ದಾರೆ, ಇಲ್ಲಿಗೆ ಏಕೆ ತಂದು ಹಾಕಿದ್ದಾರೆಂಬುದರ ಬಗ್ಗೆ ಮಾಹಿತಿ ಕಲೆ ಹಾಕಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೈಸೂರಿನ ಶವಗಾರದಲ್ಲಿರಿಸಿದ್ದ ಮೃತ ಚಂಗಪ್ಪರ ಮರಣೋತ್ತರ ಪರೀಕ್ಷೆ ನಂತರ ಸಹೋದರ ಮುತ್ತಪ್ಪ ಅವರಿಗೆ ಶವವನ್ನು ಹಸ್ತಾಂತರಿಸಲಾಯಿತು.
ಕೊಡಗಿನ ಅಮ್ಮತಿ ಬಳಿಯ ಬಡವಮಂಡ ಕೊಡವ ಸ್ಮಶಾನದಲ್ಲಿ ಕುಟುಂಬದವರು ಅಂತ್ಯಸಂಸ್ಕಾರ ನೆರವೇರಿಸಿದ್ದಾರೆ. ತನಿಖೆ ಪ್ರಗತಿಯಲ್ಲಿದೆ ಎಂದು ಡಿವೈಎಸ್ಪಿ ಗೋಪಾಲಕೃಷ್ಣ ತಿಳಿಸಿದ್ದಾರೆ.