ಹುಣಸೂರು: ರಾಜ್ಯೋತ್ಸವದ ಮುನ್ನಾದಿನ ಕಾರ್ ಸ್ಟ್ಯಾಂಡ್‌ನಲ್ಲಿ ಅಲಂಕಾರದ ಸಿದ್ದತೆ ವೇಳೆ ಕ್ಷುಲ್ಲಕ ಕಾರಣಕ್ಕೆ ನಡೆದ ಗಲಾಟೆ ಸಂಬಂಧ ಕಾರ್ ಸ್ಟ್ಯಾಂಡ್ ಅಧ್ಯಕ್ಷ ಹಾಗೂ ಇಬ್ಬರು ಪುತ್ರರ ವಿರುದ್ದ ದಲಿತ ದೌರ್ಜನ್ಯ ಪ್ರಕರಣ ದಾಖಲಾಗಿದೆ.
ಕಾರ್‌ಸ್ಟ್ಯಾಂಡ್ ಅಧ್ಯಕ್ಷ ದೇವರಾಜ್ ಹಾಗೂ ಪುತ್ರರಾದ ಶರತ್, ರಾಕೇಶ್ ವಿರುದ್ದ ಪ್ರಕರಣ ದಾಖಲಾಗಿದೆ. ಹಲ್ಲೆಗೊಳಗಾಗಿದ್ದ ಕಾರ್ ಸ್ಟ್ಯಾಂಡ್ ಚಾಲಕ-ಮಾಲಿಕರ ಸಂಘದ ಉಪಾಧ್ಯಕ್ಷ ನಗರಸಭಾ ಸದಸ್ಯ ಮಂಜುನಾಥ್(ಮಂಜು) ದೂರು ದಾಖಲಿಸಿರುವವರು.
ಆಗಿರೋದಿಷ್ಟು:
ರಾಜ್ಯೋತ್ಸವ ಸಂಬಂಧ ಹಳೇ ಬಸ್‌ನಿಲ್ದಾಣದ ಬಳಿಯ ಸ್ಟ್ಯಾಂಡ್‌ನ್ನು ಮುನ್ನಾ ದಿನ ಮಧ್ಯಾಹ್ನದಿಂದಲೇ ಅಲಂಕಾರಗೊಳಿಸುತ್ತಿದ್ದರು. ಈ ವೇಳೆ ಸ್ಟ್ಯಾಂಡ್‌ನಲ್ಲೇ ಅಡುಗೆ ತಯಾರಿಸುವ ವಿಚಾರದಲ್ಲಿ ಅಧ್ಯಕ್ಷ-ಉಪಾಧ್ಯಕ್ಷರ ನಡುವೆ ಮಾತಿನ ಚಕಮಕಿ ನಡೆದು ಕೈಕೈ ಮಿಲಾಯಿಸಿದ್ದಾರೆ.
ಈ ವೇಳೆ ಸಂಘದ ಇತರರು ಜಗಳ ಬಿಡಿಸಿದ್ದಾರೆ. ಹಲ್ಲೆಗೊಳಗಾದ ಮಂಜುನಾಥ್ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅಧ್ಯಕ್ಷ ದೇವರಾಜ್ ಮತ್ತು ಅವರ ಮಕ್ಕಳು ಹಲ್ಲೆ ನಡೆಸಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆಂದು ಆರೋಪಿಸಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಡಿವೈಎಸ್‌ಪಿ ಗೋಪಾಲಕೃಷ್ಣ ತನಿಖೆ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ.