ಹುಣಸೂರು: ಹುಣಸೂರು ನಗರದ ಶಬ್ಬೀರ್‌ನಗರದ ಅಂಗಡಿಗಳಲ್ಲಿ ಅನಧಿಕೃತವಾಗಿ ಗೋಮಾಂಸ ಮಾರಾಟ ಮಾಡುತ್ತಿದ್ದ ಏಳು ಅಂಗಡಿಗಳ ಮೇಲೆ ಗೋಹತ್ಯೆ ನಿಷೇಧ ಕಾಯ್ದೆಯಡಿ ದಾಳಿ ನಡೆಸಿರುವ ಪೊಲೀಸರು 1400 ಕೆ.ಜಿ.ಗೋಮಾಂಸ ಹಾಗೂ ಅಂಗಡಿಯಲ್ಲಿದ್ದ ಪರಿಕರಗಳನ್ನು ವಶಪಡಿಸಿಕೊಂಡಿದ್ದು, ಆರೋಪಿಗಳು ಪರಾರಿಯಾಗಿದ್ದಾರೆ.
ಶಬ್ಬೀರ್‌ನಗರದ ಅಂಗಡಿಗಳಲ್ಲಿ ಗೋಮಾಂಸ ಮಾರಾಟ ಮಾಡುತ್ತಿರುವ ಬಗ್ಗೆ ಬಂದ ಖಚಿತ ಮಾಹಿತಿ ಮೇರೆಗೆ ಡಿವೈಎಸ್‌ಪಿ ಎಂ.ಕೆ.ಮಹೇಶ್ ನೇತೃತ್ವದಲ್ಲಿ ಇನ್ಸ್ಪೆಕ್ಟರ್ ದೇವೇಂದ್ರ, ಸಿಬಂದಿ ಹಾಗೂ ನಗರಸಭೆ ಸಿಬಂದಿ ಅನಧಿಕೃತ ಗೋಮಾಂಸದ ಅಂಗಡಿಗಳ ಮೇಲೆ ದಾಳಿ ನಡೆಸುತ್ತಿದ್ದಂತೆ ಅಂಗಡಿಗಳ ಮಾಲಿಕರು ಪರಾರಿಯಾಗಿದ್ದು, ಅಂಗಡೆಯಲ್ಲಿ ಮಾರಾಟಕ್ಕಿಟ್ಟಿದ್ದ ಸುಮಾರು 1400 ಕೆ.ಜಿ.ಯಷ್ಟು ಗೋಮಾಂಸ ಹಾಗೂ ತೂಕದ ಯಂತ್ರ, ಮಾಂಸ ತುಂಡರಿಸಲು ಬಳಸುವ ಪರಿಕರಗಳನ್ನು ವಶಕ್ಕೆ ಪಡೆದು, ಏಳು ಮಂದಿ ಆರೋಪಿಗಳ ವಿರುದ್ದ ಗೋಹತ್ಯೆ ನಿಷೇಧ ಕಾಯ್ದೆಯಡಿ ಪ್ರಕರಣ ದಾಖಲಿಸಿ ವಶಪಡಿಸಿಕೊಂಡಿದ್ದ ಗೋಮಾಂಸವನ್ನು ಉಪ ವಿಭಾಗಾಧಿಕಾರಿಗಳ ಅನುಮತಿ ಪಡೆದು ನಾಶಪಡಿಸಲಾಗಿದ್ದು, ತಲೆ ಮರೆಸಿಕೊಂಡಿರುವ ಆರೋಪಿಗಳ ಪತ್ತೆಗೆ ಕ್ರಮವಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.