ನಂಜನಗೂಡು: ಕೋವಿಡ್ ಹಿನ್ನೆಲೆ 11 ತಿಂಗಳ ಬಳಿಕ ಇದೇ ಮೊದಲ ಬಾರಿಗೆ ಶ್ರೀಕಂಠೇಶ್ವರನ ದೈನಂದಿನ ಆದಾಯ 5 ಲಕ್ಷ ರೂ. ದಾಟಿದೆ. ಜೊತೆಗೆ ದಾಸೋಹ ಭವನದಲ್ಲಿ 15 ಸಾವಿರಕ್ಕೂ ಅಧಿಕ ಭಕ್ತರು ಪ್ರಸಾದ ಸವಿದಿದ್ದಾರೆ.
ತಿಂಗಳದ ಕೊನೆಯ ಶನಿವಾರ ಮಾಗಿ ಹುಣ್ಣಿಮೆ ಬಂದಿದ್ದು, ನಂಜನಗೂಡು ಶ್ರೀಕಂಠೇಶ್ವರ ಸನ್ನಿಧಿಯಲ್ಲಿ ಭಕ್ತ ಸಾಗರವೇ ನೆರೆದಿತ್ತು. ಶನಿವಾರ ಮುಂಜಾನೆಯಿಂದಲೇ ಭಕ್ತರು ದೇವಾಲಯಕ್ಕೆ ಭಾರೀ ಸಂಖ್ಯೆ ಯಲ್ಲಿ ಆಗಮಿಸಿದ್ದರು. ಹುಣ್ಣಿಮೆ ದಿನ ಶ್ರೇಷ್ಠ ಎಂದು ಭಾವಿಸಲಾಗಿದ್ದು,ಪ್ರತಿ ಹುಣ್ಣಿಗೆ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸುವುದು ಸಾಮಾನ್ಯವಾಗಿದೆ. ಆದರೆ, 11 ತಿಂಗಳಬಳಿಕ ಇದೇ ಮೊದಲ ಬಾರಿಗೆ ಬಗಿ ನಿಯಮಗಳು ಸಡಿಲವಾಗಿದ್ದರಿಂದ ಇಷ್ಟು ಪ್ರಮಾಣದಲ್ಲಿ ಭಕ್ತರು ಆಗಮಿಸಿದ್ದರು. ಸುಮಾರು 25-30 ಸಾವಿರ ಮಂದಿ ಶ್ರೀಕಂಠೇಶ್ವರನ ದರ್ಶನ ಪಡೆದಿದ್ದಾರೆ. ಬೆಳಗ್ಗೆಯಿಂದಲೇ ಸಾಲಗಟ್ಟಿ ನಿಂತಿದ್ದ ಭಕ್ತರು ದರ್ಶನ ಪಡೆಯಲು ತುಸು ಹರಸಾಹಸ ಪಡೆಯಬೇಕಾಯಿತು.
ಶನಿವಾರ ನಸುಕಿನಿಂದಲೇ ದೇಗುಲದ ಸನ್ನಿಧಿಗೆ ಆಗಮಿಸಿದ್ದ ಭಕ್ತರು ಕಪಿಲೆ ನದಿ ಸ್ನಾನಘಟ್ಟದಲ್ಲಿ ಮಿಂದೆದ್ದರು. ಹರಕೆ ಹೊತ್ತಿದ್ದ ಭಕ್ತರು ಮುಡಿ ಸೇವೆಸಲ್ಲಿಸಿ ಹೊಳೆಯಲ್ಲಿ ಪುಣ್ಯಸ್ನಾನ ಮಾಡಿ ನಂಜುಡೇ ಶ್ವರನ ದರ್ಶನ ಪಡೆದು ಧನ್ಯತಾಭಾವ ಮೆರೆದರು. ವಿಶೇಷ ದರ್ಶನ: ಶನಿವಾರ 4 ಸಾವಿರಕ್ಕೂ ಅಧಿಕಭಕ್ತರು ತಲಾ 100 ರೂ. ಟಿಕೆಟ್ ಪಡೆದು ವಿಶೇಷ ದರ್ಶನ ಪಡೆದರೆ, 3 ಸಾವಿರಕ್ಕೂ ಹೆಚ್ಚು ಮಂದಿ ತಲಾ 50 ರೂ.ಟಿಕೆಟ್ ಪಡೆದಿದ್ದರು. 100 ರೂ.ಟಿಕೆಟ್ ಮೊತ್ತವೇ ಸುಮಾರು 4.3 ಲಕ್ಷ ರೂ. ಆಗಿದೆ. 50 ರೂ. ಟಿಕೆಟ್ ಮೊತ್ತವು 1.40 ಲಕ್ಷ ರೂ. ಸಂಗ್ರಹವಾಗಿದೆ. ಒಟ್ಟಾರೆ ಶನಿವಾರದ ದೈನಂದಿನ ಆದಾಯ 5 ಲಕ್ಷ ರೂ. ದಾಟಿದೆ.
ಉಳಿದಂತೆ 20,000 ಹೆಚ್ಚು ಭಕ್ತರು ಸರದಿ ಸಾಲಿನಲ್ಲಿ ನಿಂತು ಶ್ರೀಕಂಠೇಶ್ವರನನ್ನು ಕಣ್ತುಂಬಿಕೊಂಡರು. ನಂಜನಗೂಡಿನಲ್ಲಿ ಕೊರೊನಾ ಆರಂಭವಾದ ವರ್ಷದ ನಂತರ ಇದೇ ಮೊದಲ ಬಾರಿ ಬಿಗಿ ನಿಯಮಗಳು ಸಡಿಲವಾಗಿದ್ದು, ಹೀಗಾಗಿ ಭಾರೀ ಸಂಖ್ಯೆಯಲ್ಲಿ ಭಕ್ತ ಸಮೂಹ ದೇಗುಲಕ್ಕೆ ಧಾವಿಸಿತ್ತು.
ಪ್ರಸಾದ ಸ್ವೀಕಾರ: ದೇವಾಲಯದ ವತಿಯಿಂದ ಇದೀಗ ದಾಸೋಹ ಸೇವೆ ಪುನಾರಂಭವಾಗಿದ್ದು, ಶನಿವಾರ 15 ಸಾವಿರಕ್ಕೂ ಹೆಚ್ಚು ಭಕ್ತರು ಕೋವಿಡ್ ಭಯದ ನಡುವೆಯೂ ದಾಸೋಹ ಭವನಕ್ಕೆತೆರಳಿ ಶ್ರೀಕಂಠೇಶ್ವರನ ಪ್ರಸಾದವನ್ನು ಸ್ವೀಕರಿಸಿದ್ದಾರೆ ಎಂದುದೇವಾಲಯದ ಕಾರ್ಯ ನಿರ್ವಾಹಕ ಅಧಿಕಾರಿ ರವೀಂದ್ರ ತಿಳಿಸಿದ್ದಾರೆ.