ಸಾಗರ: ರಾಷ್ಟ್ರೀಯ ಚಳುವಳಿಯ ಭಾಗವಾಗಿರುವ ಬಾಪು ಕೆ ಲೋಗೋ ಸಂಸ್ಥೆಯಿಂದ ಜ. 30 ರಂದು ನವದೆಹಲಿಯ ಹರಿಜನ ಸೇವಕ ಸಂಘದ ಆಶ್ರಯದಲ್ಲಿ ಪಶ್ಚಾತಾಪ್ ದಿವಸ್ ಆಚರಿಸಲಾಗುತ್ತಿದೆ ಎಂದು ದೇಸಿ ಚಿಂತಕ ಪ್ರಸನ್ನ ಹೆಗ್ಗೋಡು ತಿಳಿಸಿದರು.
ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಬಾಪು ಕೆ ಲೋಗ್ ಎನ್ನುವ ರಾಷ್ಟ್ರೀಯ ಚಳುವಳಿಯ ಭಾಗವಾಗಿ ವಿವಿಧ ಗಾಂಧಿವಾದಿ ಸಂಘಟನೆಗಳ ನೇತೃತ್ವದಲ್ಲಿ ನಡೆಯಲಿರುವ ಪಶ್ಚಾತಾಪ್ ದಿವಸ್ ಅಂಗವಾಗಿ ಉಪವಾಸ ಸತ್ಯಾಗ್ರಹ ಸಹ ಹಮ್ಮಿಕೊಳ್ಳಲು ಚಿಂತನೆ ನಡೆಸಲಾಗಿದೆ ಎಂದು ಹೇಳಿದರು.
ಪ್ರಸ್ತುತ ದೇಶಾದ್ಯಂತ ಗ್ರಾಮ ಕೈಗಾರಿಕೆಗಳು ಹಾಗೂ ಕಾರ್ಮಿಕ ಕೇಂದ್ರಿತ ನಗರ ಕೈಗಾರಿಕೆಗಳು ಸರ್ಕಾರದ ನೀತಿಗಳಿಂದಾಗಿ ಮುಚ್ಚಿ ಹೋಗುತ್ತಿದೆ. ಯಂತ್ರ ಸಂಸ್ಕೃತಿಯೆ ಪ್ರಗತಿ ಎನ್ನುವ ಸಿದ್ಧಾಂತಕ್ಕೆ ಎಲ್ಲರೂ ಬಲಿಯಾಗುತ್ತಿದ್ದಾರೆ. ಕಾಯಕ, ಕಾಯಕ ಸಂಸ್ಕೃತಿ, ಕಾಯಕ ಧರ್ಮವನ್ನು ಮೂಲೆಗುಂಪು ಮಾಡುತ್ತಿರುವುದರಿಂದ ಕೈಮಗ್ಗ ಸೇರಿದಂತೆ ಗ್ರಾಮೀಣ ಕಸುಬುಗಳು ನೇಪಥ್ಯಕ್ಕೆ ಸರಿಯುತ್ತಿದೆ. ಇದು ಅತ್ಯಂತ ಅಪಾಯಕಾರಿ ಬೆಳವಣಿಗೆಯಾಗಿದೆ ಎಂದು ಹೇಳಿದರು.
ಕೈಮಗ್ಗಗಳು ನಾಲ್ಕು ಲಕ್ಷ ಇದ್ದದ್ದು ಈಗ ನಾಲ್ಕು ಸಾವಿರಕ್ಕೆ ಇಳಿದಿದೆ. ಬಡವರನ್ನು ನಗರಕ್ಕೆ ಗುಳೆ ಎಬ್ಬಿಸುವ, ಸರ್ವಿಸ್ ಸೆಕ್ಟರ್ ಎಂಬ ಹೆಸರಿನಲ್ಲಿ ಗುಲಾಮಗಿರಿಯನ್ನು ಪೋಷಣೆ ಮಾಡಲಾಗುತ್ತಿದೆ. ಕೈಮಗ್ಗಕ್ಕೆ ಸಂಬಂಧಪಟ್ಟ ಕೆಲವು ಕಾಯ್ದೆಗಳನ್ನು ಮರೆ ಮಾಚಿದೆ. ಇದು ಕೈಮಗ್ಗ ಕ್ಷೇತ್ರದ ವಿನಾಶಕ್ಕೆ ಕಾರಣವಾಗಿದ್ದರೂ ಕೇಂದ್ರ ಸರ್ಕಾರ ಜಾಣಕುರುಡು ಪ್ರದರ್ಶನ ಮಾಡುತ್ತಿದೆ. ಕಾಯಕ ನಾಶದ ರಾಕ್ಷಸ ಪ್ರವೃತ್ತಿ ನಡುವೆಯೇ ರಾಮರಾಜ್ಯದ ಹೆಸರಿನಲ್ಲಿ ಶಿವಶಕ್ತಿ ಹೆಸರಿನಲ್ಲಿ ಅಲ್ಲಾ, ಏಸುವಿನ ಹೆಸರಿನಲ್ಲಿ ವೈಷಮ್ಯ ಮೂಡಿಸುವ ಕೆಲಸಗಳು ನಡೆಯುತ್ತಿದೆ. ಜಲವಿನ ಧರ್ಮವನ್ನು ತಿರಸ್ಕರಿಸಿ ದ್ವೇಷದ ಧರ್ಮವನ್ನು ಅಪ್ಪಿಕೊಳ್ಳುವ ಅನಿವಾರ್ಯತೆ ಸೃಷ್ಟಿ ಮಾಡಲಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಪ್ರಸ್ತುತ ದಿನಗಳಲ್ಲಿ ನಡೆಯುತ್ತಿರುವ ಎಲ್ಲ ಅವಾಂತರಗಳನ್ನು ಗಮನದಲ್ಲಿ ಇರಿಸಿಕೊಂಡು ಭಾರತೀಯ ಪ್ರಜೆಗಳಾದ ನಾವು ಬಾಪು ಕೆ ಲೋಗ್ ಎಂಬ ರಾಷ್ಟ್ರೀಯ ಸಂಘಟನೆಯೊಂದರ ಅಡಿಯಲ್ಲಿ ಒಂದಾಗಿದ್ದೇವೆ. ನಾವು ನಡೆಸಿರುವ ಪಾಪಕೃತ್ಯಗಳಿಗೆ ಪಶ್ಚಾತಾಪಪಡುವ ಸಲುವಾಗಿ ಮಹಾತ್ಮಾ ಗಾಂಧಿಜಿಯವರು ಹುತಾತ್ಮರಾದ ದಿನ ಜ. ೩೦ರಂದು ಪಶ್ಚಾತಾಪ ದಿವಸ್ ಆಚರಣೆ ಮಾಡುತ್ತಿದ್ದೇವೆ. ಎಲ್ಲ ಗಾಂಧಿವಾದಿಗಳು, ಪರಿಸರವಾದಿಗಳು, ಬಡವರ ಪರವಾದ ಸಂಘಟನೆಗಳು ಅಂದು ಅವರಿರುವ ಊರಿನಲ್ಲಿಯೇ ಪಶ್ಚಾತಾಪ ದಿನ ಆಚರಿಸಿ ಆತ್ಮವಿಮರ್ಶೆ ಮಾಡಿಕೊಳ್ಳಿ ಎಂದು ಕರೆ ನೀಡಿದರು.