Advertisement

ಲಾಕ್‌ಡೌನ್‌ ಹೆಚ್ಚಿದರೆ ಜನರಿಗೆ ತೊಂದರೆ ; ಇನ್ಫೋಸಿಸ್‌ ಸಂಸ್ಥಾಪಕ ನಾರಾಯಣಮೂರ್ತಿ ಎಚ್ಚರಿಕೆ

08:25 AM May 02, 2020 | Hari Prasad |

ದೀರ್ಘ‌ಕಾಲದವರೆಗೆ ಲಾಕ್‌ಡೌನ್‌ ವಿಸ್ತರಣೆ ಮಾಡಿದರೆ ದೇಶದಲ್ಲಿ ಹಸಿವಿನಿಂದ ಸಾಯುವವರ ಸಂಖ್ಯೆ ಕೋವಿಡ್ 19 ವೈರಸ್ ಸಾಂಕ್ರಾಮಿಕಕ್ಕಿಂತಲೂ ಹೆಚ್ಚಾಗಿರುತ್ತದೆ ಎಂದು ಇನ್ಫೋಸಿಸ್‌ ಸಂಸ್ಥಾಪಕ ಎನ್‌.ಆರ್‌. ನಾರಾಯಣಮೂರ್ತಿ ಅಭಿಪ್ರಾಯಪಟ್ಟಿದ್ದಾರೆ.

Advertisement

ಬೆಂಗಳೂರಿನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಲಾಕ್‌ಡೌನ್‌ ಸ್ಥಿತಿಯಲ್ಲೇ ಬಹಳ ದಿನ ಉಳಿದುಕೊಳ್ಳಲು ಸಾಧ್ಯವಿಲ್ಲ ಎಂಬುದು ಸತ್ಯ. ದೇಶದಲ್ಲಿ ಒಟ್ಟಾರೆ ಕೋವಿಡ್ 19 ವೈರಸ್ ಪಾಸಿಟಿವ್‌ ಪ್ರಕರಣಗಳಿಗೆ ಹೋಲಿಸಿದರೆ, ಸಾವಿನ ಪ್ರಮಾಣ ಶೇ. 0.25-0.5ನಷ್ಟಿದೆ. ಅಭಿವೃದ್ಧಿ ಹೊಂದಿದ ರಾಷ್ಟ್ರಗಳಿಗೆ ಹೋಲಿಸಿದರೆ ಈ ಪ್ರಮಾಣ ಬಹಳ ಕಡಿಮೆ.

ದೇಶದಲ್ಲಿ ಪ್ರತಿವರ್ಷ 90 ಲಕ್ಷ (9 ಮಿಲಿಯನ್‌) ಮಂದಿ ಬೇರೆ, ಬೇರೆ ಕಾರಣಗಳಿಂದಾಗಿ ಸಾವನ್ನಪ್ಪುತ್ತಾರೆ. ಈ ಪೈಕಿ ಕಾಲು ಭಾಗದಷ್ಟು ಮಂದಿ ಮಾಲಿನ್ಯದ ಕಾರಣದಿಂದಾಗಿ ಸಾವಿಗೆ ಶರಣಾಗುತ್ತಾರೆ. ಏಕೆಂದರೆ, ಭಾರತ, ವಿಶ್ವದ ಅತಿ ಮಾಲಿನ್ಯ ದೇಶಗಳಲ್ಲಿ ಒಂದು ಎಂದು ಹೇಳಿದರು.

2 ತಿಂಗಳ ಅವಧಿಯಲ್ಲಿ ಕೋವಿಡ್ 19 ವೈರಸ್ ಗೆ 1 ಸಾವಿರ ಮಂದಿ ಬಲಿಯಾಗಿದ್ದಾರೆ. ಪ್ರತಿವರ್ಷ ನೈಸರ್ಗಿಕವಾಗಿ ಸಾಯುವ 90 ಲಕ್ಷ ಮಂದಿಗೆ ಹೋಲಿಸಿದರೆ ಈ ಸಂಖ್ಯೆ ನಗಣ್ಯ. ಹಾಗಾಗಿ, ಭಾರತ ಕೋವಿಡ್ 19 ವೈರಸ್ ಅನ್ನು ಹೊಸ ಸಾಮಾನ್ಯ ಸಂಕಷ್ಟ ಎಂದು ಪರಿಗಣಿಸಿ, ದುರ್ಬಲರನ್ನು ರಕ್ಷಿಸಿ, ದೈಹಿಕವಾಗಿ ಸಮರ್ಥರಾಗಿರುವವರಿಗೆ ಕೆಲಸಕ್ಕೆ ಮರಳಲು ಅವಕಾಶ ಕಲ್ಪಿಸಬೇಕು ಎಂದು ಹೇಳಿದರು.

ಸುಮಾರು 19 ಕೋಟಿ ಭಾರತೀಯರು ಅಸಂಘಟಿಕ ವಲಯದಲ್ಲಿಇಲ್ಲವೇ ಸ್ವಯಂ ಉದ್ಯೋಗದಲ್ಲಿ ನಿರತರಾಗಿದ್ದಾರೆ. ಬಹುತೇಕ ಉದ್ಯಮಗಳು ತಮ್ಮ ವ್ಯಾಪಾರದ ಶೇ. 15-20ರಷ್ಟು ಆದಾಯವನ್ನು ಕಳೆದುಕೊಂಡಿವೆ. ಇದರಿಂದಾಗಿ ಸರಕಾರದ ಬೊಕ್ಕಸಕ್ಕೆ ಬರುತ್ತಿದ್ದ ಆದಾಯ ಕೂಡ ಕಡಿಮೆಯಾಗಲಿದೆ ಎಂದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next